ADVERTISEMENT

ತುರ್ತು ಸ್ಪಂದನೆ ಮೊಬೈಲ್‌ ಸಂಖ್ಯೆಗೆ ಸ್ವಿಚ್ಡ್‌ ಆಫ್ ಟ್ಯೂನ್‌ ಇಟ್ಟ ಎಂಜಿನಿಯರ್‌

ತುರ್ತು ಸ್ಪಂದನೆಗೆ ಸಾರ್ವಜನಿಕರ ಅಹವಾಲು ಆಲಿಸಲು ಪಾಲಿಕೆ ನೀಡಿದ್ದ ಮೊಬೈಲ್‌ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
   

ಕಲಬುರಗಿ: ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ನೇಮಿಸಿದ ‘ತುರ್ತು ಪರಿಹಾರ ತಂಡ’ದ ಎಂಜಿನಿಯರ್‌ ಒಬ್ಬರು ತಮ್ಮ ಅಧಿಕೃತ ಮೊಬೈಲ್‌ ಸಂಖ್ಯೆಗೆ ‘ಸ್ವಿಚ್ಡ್‌ ಆಫ್‌’ ಎಂಬ ಕಾಲರ್‌ ಟ್ಯೂನ್‌ ಸೆಟ್‌ ಮಾಡಿಕೊಂಡಿದ್ದಾರೆ! ಇದರಿಂದಾಗಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಬದಲು ಕರೆ ಸ್ಥಗಿತಗೊಳಿಸುತ್ತಿದ್ದಾರೆ.

ನಗರದ 37, 45, 44 ವಾರ್ಡ್‌ಗಳಿಗೆ ನೆಟ್‍ವರ್ಕ್‌ ಎಂಜಿನಿಯರ್‌ ಆಗಿರುವ ಅನಿಲ ಎಂಬುವವರು ತಮ್ಮ ಮೊಬೈಲ್‌ ಸಂಖ್ಯೆ 99163 64899ಗೆ ‘ಸ್ವಿಚ್‌ ಆಫ್‌’ ಎಂಬ ಕಾಲರ್ ಟ್ಯೂನ್‌ ಸೆಟ್‌ ಮಾಡಿಕೊಂಡವರು.

ಅವರು ಫೋನ್ ಕರೆಯನ್ನು ಸ್ವೀಕರಿಸುವವರೆಗೂ ಸಾಮಾನ್ಯ ರಿಂಗಿಂಗ್‌ ಟೋನ್‌ ಬದಲಿಗೆ ಸಾರ್ವಜನಿಕರಿಗೆ ಈ ಕಾಲರ್ ಟ್ಯೂನ್ ಕೇಳಿಬರುತ್ತದೆ.

ADVERTISEMENT

ಕಲಬುರಗಿ ನಗರದಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿನ ಕೊರತೆ ಆಗದಂತೆ ತುರ್ತಾಗಿ ಸ್ಪಂದಿಸಲು ಪಾಲಿಕೆಯು ‘ತುರ್ತು ಪರಿಹಾರ ತಂಡ’ ರಚಿಸಿದೆ.

ಸಮಸ್ಯೆ ಇದ್ದಲ್ಲಿ ಸಾರ್ವಜನಿಕರು ತಂಡದ ಅಧಿಕಾರಿಗಳು, ಸಿಬ್ಬಂದಿ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‍ಸಿ)ದ ಯೋಜನಾ ಅನುಷ್ಠಾನ ಘಟಕದ ಅಧೀಕ್ಷಕ ಎಂಜಿನಿಯರ್‌ ಅವರು ಪ್ರಕಟಣೆ ಹೊರಡಿಸಿದ್ದರು.

ಅದರಂತೆ ಸಾರ್ವಜನಿಕರು ಎಂಜಿನಿಯರ್‌ ಅನಿಲ ಅವರಿಗೆ ಕರೆ ಮಾಡಿದರೆ, ‘ಜಿಸ್‌ ನಂಬರ್‌ಸೇ ಆಫ್‌ ಸಂಪರ್ಕ ಕರ್ನಾ ಚಾಹತೆ ಹೈ, ಹೋ ಅಭಿ ಸ್ವಿಚ್‌ ಆಫ್‌ ಹೈ. ಕೃಪಯಾ ಕುಚ್‌ ಸಮಯ ಪಶ್ಚಾತ್‌ ಪ್ರಯಾಸ್‌ ಕರೆ’ ಎಂದು ಹಿಂದಿ ಭಾಷೆಯಲ್ಲಿ ಟ್ಯೂನ್‌ ಕೇಳಿಬರುತ್ತಿದೆ. ಇದರಿಂದ ಹೆಚ್ಚಿನವರು ಕರೆ ಕಡಿತಗೊಳಿಸುತ್ತಿದ್ದಾರೆ.

‘ಸಂದೇಶ ಕೇಳಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಇದೆ ಎಂದುಕೊಂಡಿದ್ದೆ. ಬಳಿಕ ವಿಚಾರಿಸಿದಾಗ, ಅದು ಅನೀಲ ಅವರ ಫೋನ್‌ ಕಾಲರ್‌ಟ್ಯೂನ್‌ ಎಂದು ತಿಳಿಯಿತು. ಕಾಲೊನಿಗೆ 15 ದಿನದಿಂದ ಪಾಲಿಕೆ ನೀರು ಬರುತ್ತಿಲ್ಲ. ಜನರ ಜೀವನದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ’ ಎಂದು ಸ್ಥಳೀಯರು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.