
ಕಲಬುರಗಿ: ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿ ಹೆಚ್ಚಿನ ಪ್ರಮಾಣದಲ್ಲಿದ್ದು, ಕೃಷಿ ಭಾಗ್ಯ ಯೋಜನೆಯಡಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ.
ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಭೂಮಿ ಮಾತ್ರ ನೀರಾವರಿಗೆ ಒಳಪಟ್ಟಿದೆ. ಅಫಜಲಪುರ, ಜೇವರ್ಗಿ ತಾಲ್ಲೂಕುಗಳು ಮಾತ್ರ ನೀರಾವರಿ ಸೌಲಭ್ಯ ಹೊಂದಿವೆ. ನೀರಿನ ಕೊರತೆ ಕಾರಣಕ್ಕೆ 10 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ 8.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವರ್ಷಕ್ಕೆ ಒಂದೇ ಬೆಳೆ ಬೆಳೆಯಲಾಗುತ್ತದೆ. ಕೆಲವೊಮ್ಮೆ ಮಳೆಯ ಅನಿಶ್ಚಿತತೆ ಕಾರಣಕ್ಕೆ ಒಂದು ಬೆಳೆಯೂ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗುತ್ತದೆ.
ಆದ್ದರಿಂದ ರೈತರು ಮಳೆ ನೀರು ಸಂಗ್ರಹಿಸಿ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸುಸ್ಥಿರ ಕೃಷಿ ಕಡೆಗೆ ಮುಖ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 2024ರಿಂದ 2025ರ ಡಿಸೆಂಬರ್ 8ರವರೆಗೂ 718 ರೈತರು ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.
2024–25ನೇ ಸಾಲಿನಲ್ಲಿ 567 ಹಾಗೂ 2025 ಡಿಸೆಂಬರ್ 8ರವರೆಗೂ 151 ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ತೊಗರಿ ಹಾಗೂ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಅಫಜಲಪುರ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಹೆಚ್ಚು ಅಂದರೆ 162 ರೈತರು ಹೊಂಡ ನಿರ್ಮಿಸಿಕೊಂಡಿದ್ದಾರೆ.
ಆಳಂದ ತಾಲ್ಲೂಕಿನಲ್ಲಿ 130, ಚಿತ್ತಾಪುರ 125, ಕಲಬುರಗಿ 105, ಸೇಡಂ 63 ಹಾಗೂ ಜೇವರ್ಗಿಯಲ್ಲಿ 59 ರೈತರು ಈ ಯೋಜನೆಯಡಿ ಸೌಲಭ್ಯ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ.
ಅಫಜಲಪುರ ತಾಲ್ಲೂಕಿನ ಕರಜಗಿ, ಮಾಶಾಳ, ಉಡಚಣ ಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಹೆಚ್ಚಿನವರು ಹೊಂಡ ನಿರ್ಮಿಸಿಕೊಂಡು ತರಕಾರಿ, ಪಪ್ಪಾಯ ಹಾಗೂ ಲಿಂಬೆ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
‘ಕೃಷಿ ಭಾಗ್ಯ ಯೋಜನೆ ನಮಗೆ ವರದಾನವಾಗಿದೆ. ಕೃಷಿ ಹೊಂಡ ನಿರ್ಮಾಣಕ್ಕೂ ಮೊದಲು ಜಮೀನಿನಲ್ಲಿ ತೊಗರಿ ಹಾಗೂ ಹತ್ತಿ ಬೆಳೆಯುತ್ತಿದ್ದೆವು. ಈಗ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಕೊಳವೆಬಾವಿಯ ಅಂತರ್ಜಲ ಮಟ್ಟ ವೃದ್ಧಿಸಿದೆ. ಯೋಜನೆ ನಮ್ಮ ಬದುಕು ಹಸನು ಮಾಡಿದೆ’ ಎಂದು ಅಫಜಲಪುರ ತಾಲ್ಲೂಕಿನ ಉಡಚಣ ಹಟ್ಟಿಯ ರೈತ ಬಸವರಾಜ ಮೋಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.