
ಕಲಬುರಗಿ: ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ನಗರದ ಗಂಜ್ ಬಳಿಯ ನಗರೇಶ್ವರ ಶಾಲೆಯಿಂದ ಜಗತ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಕಲಬುರಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರಿಗೆ ವಿವಿಧ ರೀತಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಸೂಟ್ ಮುರಿಯುವುದು, ಶೇ 3ರಷ್ಟು ಕಮಿಷನ್ ಕಟ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಜೆಸ್ಕಾಂನಿಂದ ರೈತರಿಗೆ ಹಗಲು 12 ಗಂಟೆ ವಿದ್ಯುತ್ ಪೂರೈಸಬೇಕು. ರೈತರ ಹೊಲದಲ್ಲಿನ ಟಿಸಿ ಸುಟ್ಟರೆ ಜೆಸ್ಕಾಂ ಅಧಿಕಾರಿಗಳು ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ತಡೆಯಬೇಕು’ ಎಂದು ಆಗ್ರಹಿಸಿದರು.
‘ಕೃಷಿ ಇಲಾಖೆಯಿಂದ ನೀಡಲಾಗುವ ಯಂತ್ರೋಪಕರಣ ಕಳಪೆಯಾಗಿದ್ದು, ಮೈಸೂರಿನಲ್ಲಿರುವ ಗುಣಮಟ್ಟ ನಿಯಂತ್ರಣ ಸಂಸ್ಥೆಯಿಂದ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿವರ್ಷ ರೈತರಿಗೆ ಬಿತ್ತನೆ ಬೀಜ ವಿತರಿಸುವ ರೈತ ಸಂಪರ್ಕ ಕೇಂದ್ರದಲ್ಲಿ ಪೂರೈಸಲಾಗುತ್ತಿರುವ ಕಳಪೆ ಗುಣಮಟ್ಟದ ಬೀಜಗಳನ್ನು ತಡೆಯಬೇಕು’ ಎಂದು ಒತ್ತಾಯಿಸಿದರು.
‘ಬೆಣ್ಣೆತೊರಾ ಅಣೆಕಟ್ಟಿನಿಂದ ಮಳೆಗಾಲದಲ್ಲಿ ಕಳೆದ 2 ವರ್ಷಗಳಿಂದ ನೀರು ಶೇಖರಣೆ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗುತ್ತಿದೆ. ಆದರೆ, ಮುಖ್ಯ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೇ ರೈತರ ಹೊಲಗಳಿಗೆ ನುಗ್ಗಿ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು
‘ಗಂಡೋರಿ ನಾಲಾ, ಮುಲ್ಲಾ ಮಾರಿ, ಅಮರ್ಜಾ ಅಣೆಕಟ್ಟುಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಾಗಿದೆ. ಈ ಯೋಜನೆಗಳ ಅಧಿಕಾರಿಗಳನ್ನು ತಕ್ಷಣ ಬೇರೆಡೆಗೆ ವರ್ಗಾವಣೆ ಮಾಡಬೇಕು. ಭ್ರಷ್ಟರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಅರಣ್ಯ ಇಲಾಖೆಯಿಂದ ಮಂಗಗಳ ಹಾವಳಿ ತಡೆಯಬೇಕು. ಗ್ರಾಮೀಣ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಯಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
‘ತಹಶೀಲ್ದಾರ್‌ರು ರೈತರ ಅರ್ಜಿಗಳಿಗೆ ವಿಳಂಬ ನೀತಿ ಅನುಸರಿಸಿ ರೈತರಿಂದ ಹಣ ವಸೂಲಿಗಿಳಿದಿದ್ದಾರೆ’ ಎಂದು ಆರೋಪಿಸಿದರು.
ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ಮುದ್ದರಕಿ, ಜಿಲ್ಲಾ ಅಧ್ಯಕ್ಷ ಅಣವೀರ ಎಸ್ ಹೆಬ್ಬಾಳ, ಪದಾಧಿಕಾರಿಗಳು, ಮುಖಂಡರು, ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಮ್ಮ ಬೇಡಿಕೆಗಳ ಈಡೇರಿಕೆಗೆ ಎಂಟು ದಿನಗಳ ಗಡುವು ನೀಡಲಾಗಿದೆ. ಸ್ಪಂದಿಸದಿದ್ದರೆ ಬೆಳಗಾವಿಯ ಗುರ್ಲಾಪುರ ಮಾದರಿಯಲ್ಲಿ ಹೋರಾಟ ರೂಪಿಸುತ್ತೇವೆಅಣವೀರ ಹೆಬ್ಬಾಳ ರಾಜ್ಯರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾಧ್ಯಕ್ಷ
ಪ್ರಮುಖ ಬೇಡಿಕೆಗಳು
* ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು * ವರ್ಷದ 12 ತಿಂಗಳು ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಬೇಕು
* ಕ್ವಿಂಟಲ್ ತೊಗರಿಗೆ ₹13 ಸಾವಿರ ಎಂಎಸ್‌ಪಿ ಕೊಡಬೇಕು * ಪ್ರತಿ ಟನ್ ಕಬ್ಬಿಗೆ ₹3500 ದರ ನೀಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.