ADVERTISEMENT

ಬೆಂಬಲ ಬೆಲೆ ಕೊಡಿ ಇಲ್ಲವೇ ವಿಷ ಕೊಡಿ: ರೈತ ಸಂಘದಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:14 IST
Last Updated 26 ಫೆಬ್ರುವರಿ 2026, 7:14 IST
ಅಣವೀರ ಎಸ್‌.ಹೆಬ್ಬಾಳ
ಅಣವೀರ ಎಸ್‌.ಹೆಬ್ಬಾಳ   

ಕಲಬುರಗಿ: ‘ರೈತರು ಬೆಳೆದ ಬೆಳೆಗಳಿಗೆ ‘ಬೆಂಬಲ ಬೆಲೆ ಕೊಡಿ ಇಲ್ಲವೇ ವಿಷ ಕೊಡಿ’ ಎಂಬ ಘೋಷಣೆಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಫೆ.27ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣವೀರ ಎಸ್‌.ಹೆಬ್ಬಾಳ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ 11 ಗಂಟೆಗೆ ಗಂಜ್‌ ಪ್ರದೇಶದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದ ಮೂಲಕ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ವಕೀಲರ ಸಂಘ, ದಲಿತ ಪ್ಯಾಂಥರ್‌, ಕರವೇ ಸೇರಿ ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲಿಸಲಿವೆ’ ಎಂದರು.

‘ಜಿಲ್ಲೆಯ ತೊಗರಿ, ಜೋಳ, ಕಡಲೆ, ಹತ್ತಿ ಮತ್ತು ಕಬ್ಬಿನ ಬೆಳೆಗಳಿಗೆ ಕಳೆದ 2 ವರ್ಷಗಳಿಂದ ಬೆಂಬಲ ಬೆಲೆ ಸಿಗುತ್ತಿಲ್ಲ. ಕ್ವಿಂಟಲ್ ತೊಗರಿಗೆ ₹13 ಸಾವಿರ ಕೊಡಬೇಕು. ಟನ್‌ ಕಬ್ಬಿಗೆ ₹3,500 ಕೊಡಬೇಕು. ಬೆಳೆವಿಮೆ ನೀಡಬೇಕು. ದಿನದಲ್ಲಿ 12 ಗಂಟೆ ವಿದ್ಯುತ್‌ ನೀಡಬೇಕು. ಬೆಣ್ಣೆತೋರಾ ಜಲಾಶಯದಿಂದ ಹಳ್ಳಕ್ಕೆ ಹರಿಸುತ್ತಿರುವ ನೀರಿನಿಂದ ರೈತರ ಜಮೀನು ಜಲಾವೃತ ಆಗುತ್ತಿರುವುದನ್ನು ತಪ್ಪಿಸಬೇಕು. ಕಳಪೆ ಬೀಜ, ರಸಗೊಬ್ಬರ ಕಂಪನಿಗಳ ಪರವಾನಗಿ ರದ್ದುಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು’ ಎಂದರು.

ADVERTISEMENT

ಸಂಘದ ಪ್ರಮುಖರಾದ ಲಕ್ಷ್ಮಿಕಾಂತ ಪಾಟೀಲ, ಭೂತಾಳಿ ಕರಗೊಂಡ, ಬುರಾನಸಾಬ ಜಮಾದಾರ, ಸಿದ್ದಲಿಂಗ ಪೂಜಾರಿ, ಮಾಳಿಂಗರಾಯ ಕರಗೊಂಡ, ವೀರಣ್ಣ‌, ಬಸವರಾಜ ಹೊಸಮನಿ, ಸಂಜೀವಕುಮಾರ ಕುಡಕಿ ಇದ್ದರು.