ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಸೇತುವೆಗೆ ಭೇಟಿ ನೀಡಿ ಸೇತುವೆ ಮುಳುಗಡೆ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು
ಚಿತ್ತಾಪುರ (ಕಲಬುರಗಿ): ಬುಧವಾರ ರಾತ್ರಿ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ. ಗುರುವಾರ ಬೆಳಿಗ್ಗೆ ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಬಂದು ತಾಲ್ಲೂಕಿನ ದಂಡೋತಿ ಸಮೀಪದ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.
ಕಾಗಿಣಾ ನದಿಯ ಮೇಲ್ಭಾಗದ ಸೇಡಂ, ಕಾಳಗಿ, ಚಿಂಚೋಳಿ ತಾಲ್ಲೂಕುಗಳಲ್ಲಿ ಮಳೆಯಾಗಿದ್ದರಿಂದ ಕಾಗಿಣಾ ನದಿಯು ತುಂಬಿ ಹರಿಯುತ್ತಿದೆ. ಬೆಣ್ಣೆತೊರಾ ಜಲಾಶಯದಿಂದ ನೀರು ಹೊರಗೆ ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಏರುಗತಿಯಲ್ಲಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ನದಿ ಆಚೆಗಿರುವ ಗ್ರಾಮಗಳ ವಿದ್ಯಾರ್ಥಿಗಳು ಬೆಳಿಗ್ಗೆ ಪಟ್ಟಣದ ವಿವಿಧ ಕಾಲೇಜುಗಳಿಗೆ ಆಗಮಿಸಿದ್ದರು. ಸೇತುವೆ ಮುಳುಗಡೆಯ ಆತಂಕದಿಂದ ವಿದ್ಯಾರ್ಥಿಗಳನ್ನು ವಾಪಾಸ್ ಕಳುಹಿಸಲಾಗಿದೆ. ಅಷ್ಟರಲ್ಲಿ ಸೇತುವೆ ಮುಳುಗಿದ್ದರಿಂದ ವಿದ್ಯಾರ್ಥಿಗಳು ಮಳಖೇಡ ಮಾರ್ಗವಾಗಿ ತಮ್ಮ ಗ್ರಾಮಗಳಿಗೆ ತೆರಳಿದರು.
ದಂಡೋತಿ ಸೇತುವೆ ಮಾರ್ಗವಾಗಿ ನಿತ್ಯ ಸಂಚರಿಸುತ್ತಿದ್ದ ಕಲಬುರಗಿ ಬಸ್ ಶಹಾಬಾದ್ ಮಾರ್ಗವಾಗಿ ಸಂಚರಿಸುತ್ತಿವೆ. ಸೇಡಂಗೆ ಸಂಚರಿಸುತ್ತಿದ್ದ ಬಸ್ ನೇರವಾಗಿ ಮಳಖೇಡ ಮಾರ್ಗವಾಗಿ ಸಂಚರಿಸುತ್ತಿವೆ. ಚಿತ್ತಾಪುರ- ಕಾಳಗಿ ನಡುವೆ ಸಂಪರ್ಕ ಬಂದ್ ಆಗಿದೆ.
ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ತುಂಬಿದೆ ಎನ್ನುವ ಮಾಹಿತಿ ಆಧರಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಗ್ರಾಮಾಡಳಿತಾಧಿಕಾರಿ ನರಸಾರೆಡ್ಡಿ ಅವರೊಂದಿಗೆ ಗುರುವಾರ ಬೆಳಗ್ಗೆ ದಂಡೋತಿ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು.
ದಂಡೋತಿ ಗ್ರಾಮದಲ್ಲಿ ಬೆಳಗಿನ ಜಾವ 65.5 ಮಿ.ಮೀ ಮಳೆ ದಾಖಲಾಗಿದೆ.
ಬೆಣ್ಣೆತೊರಾ ಜಲಾಶಯದಿಂದ ನೀರು ಹೊರಕ್ಕೆ: ಕಾಳಗಿ ತಾಲ್ಲೂಕಿನ ಬೆಣ್ಣೆತೊರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಹೊರಹರಿವು 2,800 ಕ್ಯೂಸೆಕ್‌ನಿಂದ 14,000 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.
ಆದಕಾರಣ ನದಿ ತೀರದ ಗ್ರಾಮಗಳ ಜನರು ನದಿಯ ಕಡೆಗೆ ಹೋಗಬಾರದು. ಜಾನುವಾರುಗಳು ನದಿಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.