ADVERTISEMENT

ಕಲಬುರಗಿ: ಜಿಲ್ಲಾಧಿಕಾರಿ ಭೇಟಿಯಿಂದ ಸಮಸ್ಯೆಗೆ ಸಿಗುವುದೇ ಮುಕ್ತಿ?

ಪ್ರವಾಹ ಪೀಡಿತ ಹಿರೇಹಳ್ಳಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:54 IST
Last Updated 13 ಸೆಪ್ಟೆಂಬರ್ 2025, 4:54 IST
ವಾಡಿ ಸಮೀಪದ ಬಳವಡಗಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು
ವಾಡಿ ಸಮೀಪದ ಬಳವಡಗಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು   

ವಾಡಿ: ಪ್ರತಿ ವರ್ಷ ನಾಲೈದು ಸಲ ಹಿರೇಹಳ್ಳದಿಂದ ಸಮಸ್ಯೆಗೆ ತುತ್ತಾಗುವ ಬಳವಡಗಿ ಗ್ರಾಮಸ್ಥರಲ್ಲಿ ಜಿಲ್ಲಾಧಿಕಾರಿ ಭೇಟಿಯಿಂದ ಪರಿಹಾರ ಸಿಗುವ ಆಶಾಭಾವ ಮೂಡಿದೆ.

ಬುಧವಾರ ರಾತ್ರಿ ಸುರಿದ ಮಳೆಯಿಂದ ಗುರುವಾರ ವರ್ಷದಲ್ಲಿ 3ನೇ ಬಾರಿ ಹಿರೇಹಳ್ಳ ಉಕ್ಕಿಹರಿದಿತ್ತು. ಹಲಕರ್ಟಿ, ಕೊಂಚೂರು ಮತ್ತು ಬಳವಡಗಿ ಮೂಲಕ ಹಾದುಹೋಗುವ ಹಿರೇಹಳ್ಳ ಕಡಬೂರ ಹತ್ತಿರ ಭೀಮಾ ನದಿ ಸೇರುತ್ತದೆ. ಆದರೆ ಹಳ್ಳದ ಎರಡು ಕಡೆ ಸುರಿದಿರುವ ಕಲ್ಲುಗಣಿಯ ತ್ಯಾಜ್ಯ ಮತ್ತು ಜಾಲಿಮರಗಳಿಂದ ಸರಾಗ ಹರಿಯಲು ಸಾಧ್ಯವಾದ ನೀರು ಗ್ರಾಮಕ್ಕೆ, ಜಮೀನುಗಳಿಗೆ ನುಗ್ಗುತ್ತಿದೆ. 

ಹಲಕರ್ಟಿ ರಾಷ್ಟ್ರೀಯ ಹೆದ್ದಾರಿಯಿಂದ ಕಡಬೂರವರೆಗೆ ಸುಮಾರು 10 ಕಿ.ಮೀವರೆಗೂ ಹಳ್ಳದಲ್ಲಿ ಕಲ್ಲು ಮಣ್ಣುಗಳ ತ್ಯಾಜ್ಯ ತುಂಬಿಕೊಂಡಿದೆ. ಕೆಲವೆಡೆ ಹಳ್ಳ ಒತ್ತುವರಿಯಾಗಿದ್ದು ಸಮಸ್ಯೆಗೆ ಮೂಲಕಾರಣ.

ADVERTISEMENT

ರೇಣುಕಾ ಯಲ್ಲಮ್ಮ ದೇವಸ್ಥಾನ, ದಲಿತರ ಬಡಾವಣೆ, ರೇಣುಕಾ ಯಲ್ಲಮ್ಮ ನಗರದ ನೂರಾರು ಮನೆಗಳಿಗೆ ನೀರು ನುಗ್ಗುತ್ತದೆ. ಎರಡು ನೂರಕ್ಕೂ ಅಧಿಕ ಮನೆ, ಸಾವಿರಕ್ಕೂ ಅಧಿಕ ಎಕರೆ ಜಮೀನಿನ ಬೆಳೆಯನ್ನು ಸಂಪೂರ್ಣವಾಗಿ ಆಪೋಷನ ತೆಗೆದುಕೊಳ್ಳುವ ಹಳ್ಳದ ನೀರು ಬಡವರನ್ನು ಮತ್ತು ರೈತರನ್ನು ಕಣ್ಣೀರ ಕಡಲಲ್ಲಿ ಮುಳುಗಿಸುತ್ತದೆ. ಈಚೆಗೆ ದರ್ಗಾ ಅವರಣದ  ರಾಶಿ ಕಣಕ್ಕೆ ನುಗ್ಗಿದ್ದ ನೀರು ಬೆಳೆ ಕೊಚ್ಚಿಕೊಂಡು ಹೋಗುವಂತೆ ಮಾಡಿತ್ತು.

ಸಚಿವ ಪ್ರಿಯಾಂಕ್ ಖರ್ಗೆ 2021ರಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಹಳ್ಳದಲ್ಲಿನ ಹೂಳು ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲು ಕ್ರಿಯಾ ಯೋಜನೆ ರೂಪಿಸಿ ಅನುದಾನ ಒದಗಿಸುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕೆಲಸ ಆರಂಭಗೊಂಡಿತ್ತು. ಆದರೆ ಕಾಟಾಚಾರಕ್ಕೆ ಕೆಲಸ ಮುಗಿಸಿ ಕೈತೊಳೆದುಕೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಹಳ್ಳದಲ್ಲಿ ತುಂಬಿರುವ ತ್ಯಾಜ್ಯ, ಜಾಲಿಮರಗಳನ್ನು ತೆರವು ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ನೆರೆಪೀಡಿತರ ಸಮಸ್ಯೆ ಆಲಿಸಿದರು. ಜಮೀನುಗಳ ಬೆಳೆ ಹರಣವಾಗುವುದರ ಜತೆ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಪ್ರವಾಹ ಸ್ಥಿತಿ ನಿರ್ಮಾಣ ಆಗದಂತೆ ಕ್ರಿಯಾಯೋಜನೆ ಸಿದ್ಧ ಪಡಿಸಲು ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು. ನೀರು ಹೋದ ಮನೆಗಳಿಗೆ ಪರಿಹಾರ ನೀಡಲು ಸಿದ್ಧತೆ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಾಲೆ ಸ್ವಚ್ಛಗೊಳಿಸಿ, ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಪಿಡಿಒಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಪಂ ಇಒ ಮಹ್ಮದ್ ಆಕ್ರಂ, ನರೇಗಾ ಸಹಾಯಕ ನಿರ್ದೇಶಕ ಪಂಡಿತ್ ಶಿಂಧೆ, ಪಿಡಿಒ ಗೋಪಾಲ ಕಟ್ಟಿಮನಿ ಹಾಗೂ ಸ್ಥಳೀಯರು ಇದ್ದರು.

ವಾಡಿ ಸಮೀಪದ ಬಳವಡಗಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.