ಕಲಬುರಗಿ: ಇನ್ನೊಂದು ತಿಂಗಳು ಕಾದಿದ್ದರೆ 5800ಕ್ಕೂ ಅಧಿಕ ಪಪ್ಪಾಯ ಗಿಡಗಳು ಫಸಲು ನೀಡಲು ಆರಂಭಿಸುತ್ತಿದ್ದವು. ಬುಧವಾರ, ಗುರುವಾರ ಜೇವರ್ಗಿ ತಾಲ್ಲೂಕಿನಾದ್ಯಂತ ಸುರಿದ ಮಾಯದಂಥ ಮಳೆಯಿಂದ ಬಂದ ಪ್ರವಾಹ, ಬಿರಾಳ (ಕೆ) ಗ್ರಾಮದ ರೈತ ಖಾಜಾ ಹುಸೇನಿ ಕನಸನ್ನು ನುಚ್ಚು ನೂರು ಮಾಡಿದೆ. ಜಮೀನು ಭೋಗ್ಯಕ್ಕೆ ಪಡೆದು ಉತ್ತಮ ಫಸಲಿನ ಕನಸು ಕಂಡಿದ್ದ ಅವರಿಗೆ ದಿಕ್ಕೇ ತೋಚದಂತಾಗಿದೆ.
ಒಂದು ವರ್ಷದ ಹಿಂದೆ ಬಿರಾಳ ಗ್ರಾಮದ ಹಳ್ಳಕ್ಕೆ ಹೊಂದಿಕೊಂಡಂತಿರುವ 6 ಎಕರೆ ಭೂಮಿಯನ್ನು ಮಾಲೀಕರಾದ ಲಕ್ಷ್ಮಿಕಾಂತ ಕುಲಕರ್ಣಿ ಅವರಿಂದ ಭೋಗ್ಯಕ್ಕೆ ಪಡೆದು ಖಾಜಾ ಹುಸೇನಿ ಪಪ್ಪಾಯ ಸಸಿಗಳನ್ನು ನಾಟಿ ಮಾಡಿದ್ದರು. ಸಸಿಗೆ ನೀರು ಹರಿಸಲು ಸೋಲಾರ್ ವ್ಯವಸ್ಥೆ, ಪೈಪ್‌ಲೈನ್, ಗೊಬ್ಬರದ ಖರ್ಚು ಸೇರಿ ಸುಮಾರು ₹35 ಲಕ್ಷವನ್ನು ವೆಚ್ಚ ಮಾಡಿದ್ದರು. ಇನ್ನೇನು ಕಾಯಿ ಮಾಗುವ ಹಂತದಲ್ಲಿದ್ದಾಗಲೇ ಸುರಿದ ಮಳೆಯಿಂದಾಗಿ ಹಳ್ಳಕ್ಕೆ ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದು ಪಪ್ಪಾಯ ತೋಟಕ್ಕೆ ನುಗ್ಗಿತ್ತು. ನೋಡ ನೋಡುತ್ತಿದ್ದಂತೆಯೇ ಅಷ್ಟೂ ಗಿಡಗಳು ನೆಲಕ್ಕುರುಳಿದವು.
‘ಪ್ರಜಾವಾಣಿ’ ಪ್ರತಿನಿಧಿ ಶುಕ್ರವಾರ ಪಪ್ಪಾಯ ತೋಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಡೀ ತೋಟದ ತುಂಬೆಲ್ಲ ನೀರು ಹಾಗೂ ಕೆಸರು ತುಂಬಿಕೊಂಡಿತ್ತು. ಪೈಪ್‌ಗಳು ಕಿತ್ತು ಬಂದಿದ್ದವು. ಯುವಕರ ತಂಡವು ನೆಲಕ್ಕೆ ಬಿದ್ದ ಪಪ್ಪಾಯ ಗಿಡಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿತ್ತು.
ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಬೆಳೆದಿದ್ದ ಹತ್ತಿಯ ಮಧ್ಯದಲ್ಲಿ ಮೊಣಕಾಲ ತನಕ ನೀರು ತುಂಬಿ ನಿಂತಿದೆ. ಹತ್ತಿಯನ್ನು ಕೀಳದೇ ಈಗ ವಿಧಿಯೇ ಇಲ್ಲ. ಬೀಜ ಗೊಬ್ಬರಕ್ಕೆ ಹಾಕಿದ ಖರ್ಚು, ಆಳು ಹಚ್ಚಿ ಕಸ ಕೀಳಿಸಿದ್ದು ಸೇರಿದರೆ ಅದರ ಖರ್ಚು ಹತ್ತಾರು ಸಾವಿರ ದಾಟಲಿದೆ. ಅದನ್ನು ಸರಿದೂಗಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತ ಬಾಬುರಾಯ ಆಡಿನ ಅವರು ಹೊಲದಲ್ಲಿ ನಿಂತಿದ್ದರು.
ಕೋಳಕೂರದಿಂದ ರದ್ದೇವಾಡಗಿಗೆ ಬರುವ ದಾರಿಯ ಪಕ್ಕದಲ್ಲೇ ಮಳೆ ನೀರಿನಿಂದ ರಕ್ಷಿಸಿಕೊಂಡಿದ್ದ ಹೆಸರಿನ ಬೆಳೆಯನ್ನು ರೈತ ಮಡಿವಾಳ ಹಾಗೂ ಅವರ ಕುಟುಂಬದವರು ಗಡಿಬಿಡಿಯಲ್ಲಿ ವಾಹನಕ್ಕೆ ತುಂಬುವ ಕೆಲಸದಲ್ಲಿ ನಿರತರಾಗಿದ್ದರು. ಕೋಳಕೂರ ಸುತ್ತಲಿನ ಗ್ರಾಮಗಳಾದ ಕೋನ ಹಿಪ್ಪರಗಾ, ಕೂಡಿ, ಹರವಾಳ, ಜೇವರ್ಗಿ ಶಹಾಪುರ ರಸ್ತೆಯಲ್ಲಿನ ಅಂದೋಲಾ, ಗಂವ್ಹಾರ, ಬಿರಾಳ (ಬಿ) ಗ್ರಾಮಗಳಲ್ಲಿ ಭಾರಿ ಮಳೆ ಸುರಿದಿದ್ದರಿಂದ ಅಪಾರ ಪ್ರಮಾಣದ ಹತ್ತಿಯ ಬೆಳೆ ನೀರಿನಿಂದಾವೃತವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಸುರಿದ ತಾಲ್ಲೂಕುಗಳ ಪೈಕಿ ಜೇವರ್ಗಿ ಮೂರನೇ ಸ್ಥಾನದಲ್ಲಿದ್ದು, 149.5 ಮಿ.ಮೀ ಮಳೆ ಬಿರಾಳ ಗ್ರಾಮದಲ್ಲಿ ಬಿದ್ದಿದೆ. ಬಿರಾಳ (ಕೆ) ಗ್ರಾಮದಿಂದ ಬಿರಾಳ (ಬಿ) ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ್ದ ಸಿಮೆಂಟ್ ರಸ್ತೆಯ ಬಹುತೇಕ ಭಾಗ ಕಿತ್ತು ಹೋಗಿದೆ. ಹಳ್ಳದ ದಂಡೆಯ ಗಿಡಗಳು ನೆಲಕಚ್ಚಿ ಜೀವ ಹಿಡಿದುಕೊಂಡಿರುವ ದೃಶ್ಯಗಳು ಮಳೆಯ ರೌದ್ರ ನರ್ತನಕ್ಕೆ ಸಾಕ್ಷಿಯಾಗಿದ್ದವು.
ಮಳೆಯ ಆರ್ಭಟ ಬರೀ ಜೇವರ್ಗಿ ತಾಲ್ಲೂಕಿಗೇ ಸೀಮಿತಗೊಂಡಿಲ್ಲ. ಕಲಬುರಗಿ ತಾಲ್ಲೂಕಿನ ಪಾಣೆಗಾಂವ, ಸೀತನೂರ, ಫರಹತಾಬಾದ್, ಹೊನ್ನಕಿರಣಗಿ, ಖಾನಿ, ಸರಡಗಿ, ಫಿರೋಜಾಬಾದ್, ನದಿಸಿನ್ನೂರ ಗ್ರಾಮದ ಸುತ್ತಮುತ್ತಲಿನ ಹೊಲಗಳು ಜಲಾವೃತವಾಗಿವೆ. ಕಲ್ಲು ಕಣಿಗಳ ತುಂಬ ನೀರು ತುಂಬಿಕೊಂಡು ಕೆರೆಯಂತಾಗಿವೆ.
ಪಪ್ಪಾಯ ಕೃಷಿ ಮಾಡಬೇಕು ಎಂಬ ಉದ್ದೇಶದಿಂದ 6 ಎಕರೆ ಜಮೀನು ಲೀಸ್‌ಗೆ ಪಡೆದು ₹34 ಲಕ್ಷ ಖರ್ಚು ಮಾಡಿದ್ದೆ. ಇನ್ನೊಂದು ತಿಂಗಳು ಕಳೆದಿದ್ದರೆ ₹ 1 ಕೋಟಿ ಮೊತ್ತದ ಫಸಲು ಬರುತ್ತಿತ್ತು. ಈಗ ಎಲ್ಲವೂ ನೀರು ಪಾಲಾಗಿದೆ.– ಖಾಜಾ ಹುಸೇನಿ, ರೈತ ಬಿರಾಳ (ಕೆ) ಗ್ರಾಮ
ಒಂದು ಎಕರೆ ಹತ್ತು ಗುಂಟೆಯಲ್ಲಿ ಹತ್ತಿ ಬಿತ್ತನೆ ಮಾಡಿದ್ದೆ. ಕಳೆದ ವರ್ಷ ನಾಲ್ಕು ಅಡಿಯವರೆಗೆ ಬೆಳದಿದ್ದವು. ಈಗ ಕಾಲುವೆ ನೀರಿನಿಂದ ಬಸಿದು ಹೊಲದ ತುಂಬೆಲ್ಲ ನಿಂತಿದೆ. ಬೆಳೆ ವಿಮೆ ಕಂತು ಪಾವತಿಸಿದ್ದರೂ ಒಮ್ಮೆಯೂ ಪರಿಹಾರ ಸಿಕ್ಕಿಲ್ಲ– ಬಾಬುರಾಯ ಆಡಿನ, ರೈತ ಕೋಳಕೂರ
ಮಳೆಯಿಂದಾಗಿ ಜಿಲ್ಲೆಯಾದ್ಯಂತ ಇದುವರೆಗೆ 62 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಪ್ರತಿ ಹೆಕ್ಟೇರ್‌ಗೆ ₹ 18 ಸಾವಿರದಿಂದ ₹ 22500ರವರೆಗೆ ಪರಿಹಾರ ನೀಡಲಾಗುವುದು.– ಸಂತೋಷ ಇನಾಮದಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ
2021ರ ಪ್ರವಾಹ ನೆನಪಿಸಿದ ಮಳೆ
ನಾಲ್ಕು ವರ್ಷಗಳ ಹಿಂದೆ 2021ರಲ್ಲಿಯೂ ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಹೊಲಗಳೆಲ್ಲ ಕೆರೆಗಳಾಗಿದ್ದವು. ಅದೇ ಪ್ರವಾಹವನ್ನು ಇದೀಗ ಸುರಿಯುತ್ತಿರುವ ಮಳೆಯು ನೆನಪಿಸಿದೆ. ಆಗ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಭೀಮಾ ನದಿಗೆ ಉಜನಿ ಮತ್ತು ವೀರ್ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರು ಹರಿಸಿದ್ದರಿಂದ ಭೀಮಾ ನದಿ ತುಂಬಿ ಹರಿದಿತ್ತು. ಈಗಲೂ ಭೀಮಾ ನದಿ ಸುತ್ತಲಿನ ಗ್ರಾಮಗಳ ಹಲವು ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಲೂ ಹಳ್ಳಗಳು ತುಂಬಿ ಹರಿಯುತ್ತಿದ್ದು ಅಲೆಮಾರಿಗಳು ಬದುಕುವ ಜೋಪಡಿ ಪಟ್ಟಿಗಳಲ್ಲಿ ನೀರು ಹೊಕ್ಕಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.