
ಕಲಬುರಗಿ: ಗಮನ ಸೆಳೆಯುವ ಹೂವುಗಳ ಸಂವಿಧಾನ ಪುಸ್ತಕ, ಹಣ್ಣುಗಳಲ್ಲಿ ಮೂಡಿಬಂದ ಶರಣಬಸವೇಶ್ವರ ದೇವಸ್ಥಾನ, ಬುದ್ಧವಿಹಾರ, ಬಂದಾನವಾಜ್ ದರ್ಗಾ, ಪ್ರದರ್ಶನಲ್ಲಿ ಗಮನಸೆಳೆದ ಕ್ಯಾಲಿಫೋರ್ನಿಯಾ ಕ್ವೀನ್ ಬೆರ್ರಿ ದ್ರಾಕ್ಷಿ ತಳಿ, ತೋಟಗಾರಿಕೆ ಇಲಾಖೆಯ ಸಿಬ್ಬಂದಿಯಿಂದ ಮೂಡಿಬಂದ ವಿವಿಧ ತರಕಾರಿಗಳ ರಂಗೋಲಿ...
ಕಲಬುರಗಿಯ ಶರಣಬಸವೇಶ್ವರ ಕೆರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶರಣಬಸವೇಶ್ವರ ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಫಲಪುಷ್ಪ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭಾನುವಾರ ಚಾಲನೆ ನೀಡಿದರು.
ಮೇಳದಲ್ಲಿ ಜೈ ಶ್ರೀಕೃಷ್ಣ ಇವೆಂಟ್ಸ್ ಹೂ ನಿರ್ಮಾಣ ವಿನ್ಯಾಸಕ ಕೆ.ಜಗದೀಶ ಅವರ ಕಲಾಕೃತಿಯಲ್ಲಿ ಮೂಡಿಬಂದಿರುವ ಭಾರತೀಯ ಸಂವಿಧಾನ ಪ್ರತಿಕೃತಿ ಅಲಂಕಾರಕ್ಕೆ ವಿವಿಧ ತಳಿಯ ಚೆಂಡು, ಸೇವಂತಿಗೆ, ಚೈನಾ ಆಸ್ಟರ್, ಆಸ್ಪರಾಗಸ್ ಹಾಗೂ ವಿವಿಧ ಆಲಂಕಾರಿಕ ಸುಮಾರು 1.50 ಲಕ್ಷ ಹೂವುಗಳಿಂದ ಬಳಸಿ ವಿನ್ಯಾಸ ಮಾಡಲಾಗಿತ್ತು.
ತರಕಾರಿಯಲಿ ಕೆತ್ತನೆ ಮಾಡಿ ಕಲಬುರಗಿಯ ಪ್ರಮುಖ ಪ್ರವಾಸಿ ಕೇಂದ್ರಗಳಾದ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾನವಾಜ್ ದರ್ಗಾ, ಕಲಬುರಗಿ ಕೋಟೆ, ಬುದ್ಧ ವಿಹಾರದ ಚಿತ್ರಗಳು ಮೂಡಿಬಂದಿವೆ.
ತೋಟಗಾರಿಕೆ ಇಲಾಖೆಯ ಮಹಿಳಾ ಸಿಬ್ಬಂದಿ ಸಿದ್ಧಪಡಿಸಲಾದ ತರಕಾರಿ ರಂಗೋಲಿ ಮತ್ತು ಸೆಲ್ಫಿ ಪಾಯಿಂಟ್ ಕೂಡಾ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ಪಡೆದ ರೈತರು ಬೆಳೆದ ವಿವಿಧ ತಳಿಯ ಹಣ್ಣು, ತರಕಾರಿ, ಹೂವು ಬೆಳೆಗಳ ಉತ್ಪನ್ನಗಳನ್ನು ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಕಲ್ಲಂಗಡಿಯಲ್ಲಿ ಮಹಾತ್ಮ ಗಾಂಧಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ. ಬೇಂದ್ರೆ, ಸ್ವಾತಂತ್ರ್ಯ ಹೋರಾಟಗಾರರಾದ ಭಗತಸಿಂಗ್, ಚಂದ್ರಶೇಖರ ಆಜಾದ್, ಸಂಗೊಳ್ಳಿ ರಾಯಣ್ಣ, ಸುಭಾಷಚಂದ್ರ ಬೋಸ್ ಹೀಗೆ ಅನೇಕರ ಕಲಾಕೃತಿಗಳು ನೋಡುಗರಿಗೆ ಸಂತೋಷ ಉಂಟು ಮಾಡಲಿವೆ.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಮಲ್ಲಿಕಾರ್ಜುನ ಭೂಶಟ್ಟಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಇನಾಮದಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಬಾಬುರಾವ ಪಾಟೀಲ, ಸುರೇಂದ್ರನಾಥ, ಶಂಕರಗೌಡ, ಸಂತೋಷ ತಾಂಡುರ, ರಾಜಕುಮಾರ, ಎಂ.ಡಿ ಸಮಿಯೋದ್ದಿನ್, ಅಜಿಮೋದ್ದಿನ್, ಶಂಕರ ಪಟವಾರಿ, ವೆಂಕಟ ಸಜ್ಜನ ಸೇರಿದಂತೆ ತೋಟಗಾರಿಕೆ ಇಲಾಖೆಯ ಇನ್ನಿತರ ಅಧಿಕಾರಿ-ಸಿಬ್ಬಂದಿಗಳು ಹಾಜರಿದ್ದರು.
ತೋಟಗಾರಿಕೆ ಇಲಾಖೆ ತುಂಬಾ ಪರಿಶ್ರಮ ಹಾಕಿ ಒಳ್ಳೆಯ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇದು ರೈತಾಪಿ ವರ್ಗದವರಿಗೆ ತುಂಬಾ ಅನುಕೂಲವಾಗಿದೆ.– ಜಗದೇವ ಗುತ್ತೇದಾರ, ವಿಧಾನ ಪರಿಷತ್ ಶಾಸಕ
ಎರಡು ದಿನ ಫಲಪುಷ್ಪ ಪ್ರದರ್ಶನ ಉಚಿತವಾಗಿದೆ. ಜನರು ಶಾಲಾ ಮಕ್ಕಳು ಭೇಟಿ ನೀಡಿ ತರಕಾರಿ-ಹಣ್ಣುಗಳಲ್ಲಿ ಮೂಡಿಬಂದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು.– ಜಹೀರಾ ನಸೀಮ್, ಪ್ರಾದೇಶಿಕ ಆಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.