ADVERTISEMENT

ಕಲಬುರಗಿ | ಮಳೆಯ ಮಧ್ಯೆಯೇ ಗಣಪನ ದರ್ಶನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:47 IST
Last Updated 29 ಆಗಸ್ಟ್ 2025, 6:47 IST
ಕಲಬುರಗಿಯ ಸ್ಟೇಷನ್‌ ಬಜಾರ್‌ ಬಳಿಯ ವಿಠ್ಠಲ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ
ಕಲಬುರಗಿಯ ಸ್ಟೇಷನ್‌ ಬಜಾರ್‌ ಬಳಿಯ ವಿಠ್ಠಲ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ   

ಕಲಬುರಗಿ: ನಗರದಾದ್ಯಂತ ಗಣೇಶ ಚೌತಿಯ ಸಂಭ್ರಮವು ವರುಣನ ಅಡ್ಡಿಯ ಮಧ್ಯೆಯೂ ಕಳೆಗಟ್ಟಿದೆ. 

ತಮ್ಮ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಪೆಂಡಾಲ್‌ಗಳಿಗೆ ಗುಂಪು ಗುಂಪಾಗಿ ತೆರಳಿ ಮಹಿಳೆಯರು, ಮಕ್ಕಳು ದರ್ಶನ ಪಡೆಯುತ್ತಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಬಹುತೇಕ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಪೂರ್ಣಗೊಂಡಿತ್ತು. ನಗರದ ಸೂಪರ್ ಮಾರ್ಕೆಟ್, ಬಹಮನಿ ಕೋಟೆ ಪಕ್ಕದ ಹಿಂದೂ ಮಹಾಗಣಪತಿ, ಎಸ್‌ವಿಪಿ ವೃತ್ತ, ಜಗತ್ ವೃತ್ತ, ಗಾಜಿಪುರ ಏರಿಯಾ, ಬ್ರಹ್ಮಪುರದ ಮೋರೆ ಕಾಂಪ್ಲೆಕ್ಸ್, ಗಂಗಾ ನಗರ, ಶಹಾ ಬಜಾರ್ ನಾಕಾ, ಆಳಂದ ಚೆಕ್‌ಪೋಸ್ಟ್, ಹುಮನಾಬಾದ್ ರಿಂಗ್ ರಸ್ತೆಯ ಹಲವೆಡೆ, ಕರುಣೇಶ್ವರ ನಗರ, ಪುಟಾಣಿ ಗಲ್ಲಿ, ಮಕ್ತಂಪುರ, ಅಕ್ಕಮಹಾದೇವಿ ಕಾಲೊನಿ, ರಾಮಮಂದಿರ ಸರ್ಕಲ್ ಸೇರಿದಂತೆ ನಗರದ 550ಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿವೆ.

ಆನೆ, ಸಿಂಹ, ಕುದುರೆ, ತನ್ನ ನೆಚ್ಚಿನ ವಾಹನ ಮೂಷಕನೊಂದಿಗೆ ಪ್ರತಿಷ್ಠಾಪನೆಗೊಂಡ ಚತುರ್ಭುಜ ಗಣಪ ವಿವಿಧೆಡೆಯ ಭಕ್ತರ ಗಮನ ಸೆಳೆಯುತ್ತಿದ್ದಾನೆ. 

ADVERTISEMENT

ಗುರುವಾರ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ಸಂಜೆಯ ಬಳಿಕ ಹೊಸ ಬಟ್ಟೆ ಧರಿಸಿದ ಮಹಿಳೆಯರು ತಮ್ಮ ಬಡಾವಣೆ ಹಾಗೂ ಸುತ್ತಮುತ್ತಲಿನ ಬಡಾವಣೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಪೆಂಡಾಲ್ ಬಳಿ ಡಿಜೆಗಳ ಅಬ್ಬರ ಕೇಳಿ ಬಂತು. ಆಕರ್ಷಕ ವಿದ್ಯುತ್ ಅಲಂಕಾರ ಮಾಡಿದ್ದರಿಂದ ಬಡಾವಣೆಯ ನಿವಾಸಿಗಳು ಗಣಪತಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಕಂಡು ಬಂತು.

ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆ ಮಾಡಿದ ಪೆಂಡಾಲ್‌ಗಷ್ಟೇ ಅಲ್ಲದೇ ರಸ್ತೆಯುದ್ದಕ್ಕೂ ಕಂಬಗಳನ್ನು ನೆಟ್ಟು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕೆಲವೆಡೆ ರಸ್ತೆ ಮಧ್ಯೆಯೇ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಮೊದಲೇ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು ಇನ್ನಷ್ಟು ನಿಧಾನಗತಿಯಿಂದ ಸಂಚರಿಸಬೇಕಿದೆ. ಅಹಿತಕರ ಘಟನೆ ತಡೆಯಲು ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಪೆಂಡಾಲ್‌ಗಳ ಬಳಿ ನಿಯೋಜಿಸಲಾಗಿದೆ.

ಕಲಬುರಗಿಯ ಹಮಾಲವಾಡಿಯಲ್ಲಿ ಪ್ರತಿಷ್ಠಾಪನೆಗೊಂಡ ಗಣಪ
ಸರ್ದಾರ್ ಪಟೇಲ್ ವೃತ್ತದ ಬಳಿ ವಿನಾಯಕ ತರುಣ ಸಂಘದವರು ಪ್ರತಿಷ್ಠಾಪಿಸಿದ ಗಣೇಶ
ಕಲಬುರಗಿಯ ಮಂಜುಶ್ರೀ ಹೋಟೆಲ್‌ ಬಳಿಯ ಗಣೇಶ ಮೂರ್ತಿ
ಕಲಬುರಗಿಯ ಗುಲ್ಲಾಬವಾಡಿಯಲ್ಲಿ ಆನೆಯ ಮೇಲೆ ಆಸೀನನಾದ ವಿಘ್ನ ನಿವಾರಕ
ಜಗತ್‌ ಬಳಿಯ ಗೊಲ್ಲರ ಯುವಕ ಸಂಘದ ಗಣೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.