ADVERTISEMENT

ಉಕ್ರೇನ್‌ನಲ್ಲಿ ಧೈರ್ಯ ತೋರಿ ರೈಲು ನಿಲ್ದಾಣ ತಲುಪಿದ ಕಲಬುರಗಿಯ ಯುವತಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 18:46 IST
Last Updated 28 ಫೆಬ್ರುವರಿ 2022, 18:46 IST
ಜೀವಿತಾ ಶಿಂಧೆ
ಜೀವಿತಾ ಶಿಂಧೆ   

ಕಲಬುರಗಿ: ಉಕ್ರೇನ್‌ನ ಕೀವ್ ನಗರದಲ್ಲಿ ಸಿಲುಕಿರುವ ಕಲಬುರಗಿಯ ವೈದ್ಯ ವಿದ್ಯಾರ್ಥಿನಿ ಜೀವಿತಾ ಶಿಂಧೆ ಅವರು ಸೋಮವಾರ ಬಂಕರ್‌ನಿಂದ ಹೊರಬಂದಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಯತ್ನ ನಡೆಸಿದ್ದಾರೆ. ಕಠಿಣ ಕರ್ಫ್ಯೂ ಹಾಗೂ ಶೆಲ್‌ ದಾಳಿ ಸಂಭವದ ಮಧ್ಯೆಯೂ ಅವರು ಧೈರ್ಯ ಮಾಡಿ ರೈಲು ನಿಲ್ದಾಣ ತಲುಪಿದ್ದಾರೆ.

‘ಕೀವ್‌ನಲ್ಲಿ ಸೋಮವಾರ ಬೆಳಿಗ್ಗೆಯಿಂದ ಸ್ಫೋಟಕ ಶಬ್ದ ಕಡಿಮೆಯಾಗಿದೆ. ನಾನು ಬಂಕರ್‌ನಿಂದ ಹೊರಬಂದು, ಕೀವ್‌ನ ರೈಲು ನಿಲ್ದಾಣ ತಲುಪಿದ್ದೇನೆ. ಇಲ್ಲಿ ಹಲವಾರು ಜನ ಬೇರೆಬೇರೆ ದೇಶಗಳಿಗೆ ಹೋಗಲು ರೈಲುಗಳಿಗೆ ಕಾಯುತ್ತ ಕುಳಿತಿದ್ದಾರೆ. ಆದರೆ, ನಾನು ಇಂಥದ್ದೇ ರೈಲು ಬರಲಿ ಎಂದು ಕಾಯುವ ಸ್ಥಿತಿಯಲ್ಲೂ ಇಲ್ಲ. ಯಾವ ರೈಲು ಮೊದಲು ಬರುತ್ತದೆಯೋ ಅದನ್ನೇ ಹತ್ತಿ ಹೊರಡುತ್ತೇನೆ. ಉಕ್ರೇನ್‌ ಗಡಿ ತಲುಪಿದರೆ ಸಾಕು; ಅಲ್ಲಿಂದ ಬೇರೆ ದೇಶದ ಗಡಿ ಪ್ರವೇಶಿಸಿ ತಾಯ್ನಾಡಿಗೆ ಮರಳಬಹುದು. ನನ್ನ ಕೈಲಾದ ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಅವರು ಸೋಮವಾರ ಸಂಜೆ 5ರ ಸುಮಾರಿಗೆ ‘ಪ್ರಜಾವಾಣಿ’ ಜತೆಗೆ ತಮ್ಮ ಅನುಭವ ಹಂಚಿಕೊಂಡರು.

‘ರೈಲು ನಿಲ್ದಾಣದಲ್ಲಿ ಜನ ದುಗುಡಗೊಂಡು ಓಡಾಡುತ್ತಿದ್ದಾರೆ. ರೈಲು ಸಂಚಾರ ಬಂದ್‌ ಆಗಿಲ್ಲ ಎಂದು ಕೇಳಿ ಸಮಾಧಾನವಾಗಿದೆ. ಕೀವ್‌ನಿಂದ ನೇರವಾಗಿ ಪೋಲಂಡ್‌ ಇಲ್ಲವೇ ಹಂಗೇರಿಯಾ ದೇಶದ ಗಡಿ ತಲುಪಲು ರೈಲುಗಳಿವೆ. ಯಾವ ದಿಕ್ಕಿನ ರೈಲು ಬಂದರೂ ನಾನು ಹತ್ತಿ ಹೊರಡುತ್ತೇನೆ. ಅಲ್ಲಿಂದ ವಿಮಾನದ ಮೂಲಕ ಭಾರತ ಮುಟ್ಟುವ ಪ್ರಯತ್ನ ನನ್ನದು’ ಎಂದೂ ಹೇಳಿದರು.

ADVERTISEMENT

‘ಇಲ್ಲಿ ಕಠಿಣ ಪೊಲೀಸ್‌ ಕರ್ಫ್ಯೂ ಹೇರಿದ್ದಾರೆ. ಮೊಬೈಲ್‌ ಬಳಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಫೋಟೊ, ವಿಡಿಯೊ ಮಾಡಬೇಡಿ ಎಂದು ಪೊಲೀಸರು ಸೂಚನೆ ನೀಡುತ್ತಿದ್ದಾರೆ. ವಾರದ ಹಿಂದೆಯೇ ನಾನು ಊಟಕ್ಕೆ ಬೇಕಾದ ಸಾಮಗ್ರಿ ಸಂಗ್ರಹಿಸಿ ಇಟ್ಟುಕೊಂಡಿದ್ದರಿಂದ ಉಪವಾಸ ಇರುವ ಸಂದರ್ಭ ಬಂದಿಲ್ಲ’ ಎಂದೂ ಹೇಳಿದರು.

ಕಲಬುರಗಿಯವರೇ ಆದ ಪ್ರಜ್ವಲ್‌ಕುಮಾರ ಗುಬ್ಬೇವಾಡ, ವಿದ್ಯಾಸಾಗರ, ಮಲ್ಲಿನಾಥ ಜಮಗೊಂಡ, ಕಲ್ಲಿಹಾಳ ವಿನಯ ರುದ್ರೇಶ, ಸುಷ್ಮಿತಾ ನಾಗೇಂದ್ರಪ್ಪ, ಪ್ರಿಯಾ ಪಾಟೀಲ ಅವರೂ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ ದೇಶದ ವಿವಿಧ ನಗರಗಳಲ್ಲಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅವರ ಸಂಬಂಧಿಗಳು ಮಾಹಿತಿ ನೀಡಿದ್ದಾರೆ.

‘ನನ್ನ ಸಹೋದರನನ್ನು ರಕ್ಷಿಸಿ’

‘ನನ್ನ ಸಹೋದರ ಪ್ರಜ್ವಲ್‌ಕುಮಾರ್‌ ಗುಬ್ಬೇವಾಡ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ನ ಖಾರ್ಕೀವ್‌ ನಗರದಲ್ಲಿದ್ದಾರೆ. ಕಳೆದೊಂದು ವಾರದಿಂದ ಬಂಕರ್‌ನಲ್ಲೇ ಆಶ್ರಯ ಪಡೆದಿದ್ದಾರೆ. ಅವರೊಂದಿಗೆ ಇನ್ನೂ ನಾಲ್ವರು ಭಾರತದ ವಿದ್ಯಾರ್ಥಿಗಳಿದ್ದಾರೆ. ಖಾರ್ಕೀವ್‌ ನಗರದಲ್ಲಿ ಕಠಿಣ ಕರ್ಫ್ಯೂ ಹೇರಿದ್ದರಿಂದ ಬಂಕರ್‌ನಿಂದ ಹೊರಬಂದು ಮಾತನಾಡಲೂ ಅವರಿಗೆ ಆಗುತ್ತಿಲ್ಲ. ಕೇಂದ್ರ ಸರ್ಕಾರ ಆದಷ್ಟು ಬೇಗೆ ತಮ್ಮ ಹಾಗೂ ಅವರ ಸಹಪಾಠಿಗಳನ್ನು ರಕ್ಷಿಸಬೇಕು’ ಎಂದು ಪ್ರಜ್ವಲ್‌ಕುಮಾರ ಅವರ ಸಹೋದರ ಜೈಪ್ರಕಾಶ್‌ ಮನವಿ ಮಾಡಿದ್ದಾರೆ.

‘ಸೋಮವಾರ ಮಧ್ಯಾಹ್ನ 2ರ ಸುಮಾರಿಗೆ ಸಹೋದರನೊಂದಿಗೆ ಮಾತನಾಡಿದ್ದೇನೆ. ಅಲ್ಲಿ ಊಟಕ್ಕೂ ಅವ್ಯವಸ್ಥೆ ಆಗಿದೆ. ಬಂಕರ್‌ನ ಪಕ್ಕದಲ್ಲಿರುವ ಅಪಾರ್ಟ್‌ಮೆಂಟಿಗೆ ಹೋಗಿ ಇವರೇ ಅಡುಗೆ ಮಾಡಿಕೊಂಡು ತರಬೇಕಾಗಿದೆ. ಯಾರಾದರೂ ಅವರನ್ನು ನೆರೆದೇಶದ ಗಡಿಗೆ ಮುಟ್ಟಿಸಿದರೆ ಸಾಕು ಎನ್ನುವಂತಾಗಿದೆ. ಪ್ರತಿ ಕ್ಷಣವನ್ನೂ ಆತಂಕದಲ್ಲೇ ಕಳೆಯುತ್ತಿದ್ದೇವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.