ADVERTISEMENT

ಕಲಬುರಗಿ: ಚಿನ್ನದ ಕಿರೀಟ ಸೇರಿ ಆಭರಣಗಳಿದ್ದ ವ್ಯಾನಿಟಿ ಬ್ಯಾಗ್‌ ಕಳವು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:28 IST
Last Updated 29 ಜನವರಿ 2026, 5:28 IST
   

ಕಲಬುರಗಿ: ನಗರದ ಕುಸನೂರ ರಸ್ತೆಯ ಅಣ್ಣೆಮ್ಮ ದೇವಸ್ಥಾನದ ರಸ್ತೆಯಲ್ಲಿ ದಂಪತಿಯೊಬ್ಬರು ಮಾತನಾಡುತ್ತ ನಿಂತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್‌ ಕದ್ದು ಪರಾರಿಯಾಗಿದ್ದಾರೆ.

ಕುಸನೂರು ರಸ್ತೆಯ ಕೃಷ್ಣ ನಗರದ ಡಾ.ಕೀರ್ತಿ ಹಾಲಗಾರ ಹಾಗೂ ಪ್ರಶಾಂತ ಕುಮಾರ ಹಾಲಗಾರ ಚಿನ್ನಾಭರಣ ಕಳೆದುಕೊಂಡ ದಂಪತಿ.

ಜಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ.ಕೀರ್ತಿ ಹಾಗೂ ಪ್ರಶಾಂತಕುಮಾರ ಅವರು ಸರಾಫ್‌ ಬಜಾರ್‌ನಲ್ಲಿ 298 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 1 ಗ್ರಾಂ ಚಿನ್ನಾಭರಣ ಖರೀದಿಸಿ ಮನೆಯತ್ತ ಹೊರಟ್ಟಿದ್ದ ವೇಳೆ ಈ ಘಟನೆ ನಡೆದಿದೆ. ವ್ಯಾಟಿನಿ ಬ್ಯಾಗ್‌ನಲ್ಲಿ ಚಿನ್ನ–ಬೆಳ್ಳಿ ಆಭರಣಗಳಲ್ಲದೇ ವಿವೊ ಮೊಬೈಲ್‌ ಫೋನ್‌, ಸ್ಟೆತಸ್ಕೋಪ್‌, ₹3,500 ನಗದು ಇತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಡಾ.ಕೀರ್ತಿ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಎಂ.ಬಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟ್‌ ಜೂಜಾಟ

ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಸೀಮಾಂತರ ಪ್ರದೇಶದಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ 9 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಫರಹತಾಬಾದ್ ಪೊಲೀಸರು, ಒಟ್ಟು ₹18,900 ಜಪ್ತಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ನಗದು ಕಳವು

ಮದುವೆಯ ಆರತಕ್ಷತೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಸ್ಟೇರ್‌ಕೇಸ್‌ನ ಬಾಗಿಲು ಮುರಿದ ಕಳ್ಳರು, ಅಲ್ಮೇರಾದಲ್ಲಿದ್ದ 15 ಗ್ರಾಂ ಚಿನ್ನಾಭರಣ, 60 ಗ್ರಾಂ ಬೆಳ್ಳಿ ಹಾಗೂ ₹61 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಕಲಬುರಗಿಯ ಹೀರಾನಗರದ ನಿವಾಸಿ ಮೊಹಮ್ಮದ್ ತಾಹ್‌ ಇನಾಮದಾರ್‌ ಚಿನ್ನಾಭರಣ ಕಳೆದುಕೊಂಡವರು. 

ಈ ಕುರಿತು ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ಕಿರೀಟ ಕಳವು!

ಕಲಬುರಗಿಯ ಇಂದಿರಾ ನಗರದ ಸಂಜಯ ಸಿಂಗ್ ಎಂಬುವರ ಮನೆಯಲ್ಲಿದ್ದ ₹5.50 ಲಕ್ಷ ಮೌಲ್ಯದ 50 ಗ್ರಾಂ ಬಂಗಾರದ ಕಿರೀಟ ಹಾಗೂ ₹2 ಲಕ್ಷ ನಗದು ಕಳುವಾಗಿದೆ ಎಂದು ಸಂಜಯ್‌ ಅವರ ಮ್ಯಾನೇಜರ್‌ ರೇವಣಯ್ಯ ಮಠ ಪೊಲೀಸರಿಗೆ ದೂರು ನೀಡಿದ್ದಾರೆ.

‘ಸಂಜಯ್‌ ಅವರ ಮನೆಯಲ್ಲಿ ಎರಡು ವರ್ಷಗಳ ಕಾಲ ಹುಮನಾಬಾದ್ ಮೂಲದ ಬಸವರಾಜ ಎಂಬುವರು ವಾಚಮನ್‌ ಕೆಲಸ ಮಾಡುತ್ತಿದ್ದರು. 2025ರ ಸೆಪ್ಟೆಂಬರ್‌ 27ರಂದು ಕೆಲಸ ಬಿಟ್ಟು ಹೋಗಿದ್ದರು. ಹೋಗುವಾಗ ಚಿನ್ನಾಭರಣ, ನಗದು ಕದ್ದಿದ್ದಾರೆ. ಜನವರಿ 27ರಂದು ಈ ವಿಷಯ ಬೆಳಕಿಗೆ ಬಂದಿದೆ’ ಎಂದು ಸ್ಟೇಷನ್‌ ಬಜಾರ್‌ ಠಾಣೆಗೆ ನೀಡಿದ ದೂರಿನಲ್ಲಿ ರೇವಣಯ್ಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.