ADVERTISEMENT

ಚಿನ್ನಾಭರಣ ಮಳಿಗೆ ದರೋಡೆ: ಆಟೊದಲ್ಲಿ ಬಸ್‌ ನಿಲ್ದಾಣಕ್ಕೆ ತೆರಳಿ ಪರಾರಿಯಾದ ಕಳ್ಳರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:46 IST
Last Updated 13 ಜುಲೈ 2025, 2:46 IST
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣದ ಆರೋಪಿಗಳು
ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣದ ಆರೋಪಿಗಳು   

ಕಲಬುರಗಿ: ಚಿನ್ನಾಭರಣ ತಯಾರಿಕಾ ಮಳಿಗೆ ದರೋಡೆ ಪ್ರಕರಣದ ನಾಲ್ವರು ಆರೋಪಿಗಳು ಸರಾಫ್ ಬಜಾರ್‌ನಿಂದ ತಹಶೀಲ್ದಾರ್ ಕಚೇರಿವರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಆಟೊದಲ್ಲಿ ಕೇಂದ್ರ ಬಸ್‌ ನಿಲ್ದಾಣಕ್ಕೆ ತೆರಳಿ ಪರಾರಿಯಾಗಿದ್ದಾರೆ.

ಪಿಸ್ತೂಲ್ ತೋರಿಸಿ 800 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ತನಿಖೆಯನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಐದು ತಂಡಗಳು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿವೆ.

ಕೃತ್ಯಕ್ಕೂ ಮುನ್ನ ಹಾಗೂ ನಂತರ ವೈಯಕ್ತಿಕ ವಾಹನಗಳನ್ನು ಬಳಸದ ದರೋಡೆಕೋರರು, ಮಳಿಗೆಯವರೆಗೆ ಆಟೊದಲ್ಲಿ ಬಂದಿದ್ದಾರೆ. ಮಳಿಗೆಯ ಮಹಮದ್ ಮಲಿಕ್ ಅವರ ಹಣೆಗೆ ಪಿಸ್ತೂಲ್ ಇರಿಸಿದ ದರೋಡೆಕೋರನೊಬ್ಬ, ಚಿನ್ನಾಭರಣಗಳು ಇರಿಸಿದ್ದ ಲಾಕರ್ ತೆಗುಯುವಂತೆ ಬೆದರಿಕೆ ಹಾಕಿದ್ದ. ಯಾರಿಗಾದರೂ ಫೋನ್ ಮಾಡಬಹುದೆಂದು ಮಲಿಕ್ ಬಳಿ ಇದ್ದ ಮೊಬೈಲ್ ಅನ್ನು ಮತ್ತೊಬ್ಬ ದರೋಡೆಕೋರ ಕಿತ್ತುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ದುಷ್ಕರ್ಮಿಗಳು ತಮ್ಮ ಕೈಗೆ ಸಿಕ್ಕಷ್ಟು ಒಡವೆಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡರು. ಮಳಿಗೆಯವರನ್ನು ಕೈ–ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿದರು. ಶೆಟರ್ ಬಾಗಿಲು ಹಾಕಿ ಮುಚ್ಚಿ, ಯಾರಿಗೂ ಅನುಮಾನ ಬಾರದಂತೆ ಹೊರಬಂದರು. ಸರಾಫ್ ಬಜಾರ್‌ನಿಂದ ಚಪ್ಪಲ್ ಬಜಾರ್, ಸೂಪರ್ ಮಾರ್ಕೆಟ್ ಮೂಲಕ ಕಲಬುರಗಿ ತಹಶೀಲ್ದಾರ್ ಕಚೇರಿವರೆಗೆ ನಡೆದುಕೊಂಡು ಹೋದರು. ಅಲ್ಲಿಂದ ಆಟೊದಲ್ಲಿ ಹತ್ತಿಕೊಂಡು ತೆರಳುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಗೊತ್ತಾಗಿದೆ.

ಆಟೊದಲ್ಲಿ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ನಿಲ್ದಾಣ ಸಮೀಪದ ಸಿಐಬಿ ಕಾಲೊನಿಯಲ್ಲಿ ಮಲಿಕ್ ಅವರಿಂದ ಕಸಿದು ತಂದಿದ್ದ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಬಿಸಾಕಿದ್ದಾರೆ. ಬಳಿಕ ಕೇಂದ್ರ ಬಸ್ ನಿಲ್ದಾಣದ ಒಳಗೆ ತೆರಳಿದ್ದು, ಅಲ್ಲಿಂದ ಬಸ್ ಹತ್ತಿ ಪರಾರಿಯಾಗಿದ್ದಾರೆ. ಕಾರು, ಬೈಕ್‌ಗಳನ್ನು ಬಳಸಿದರೆ ನಂಬರ್ ಪ್ಲೇಟ್ ಮೂಲಕ ಸಿಕ್ಕಿ ಬೀಳುವ ಭಯದಿಂದ ಸಾರ್ವಜನಿಕ ವಾಹನಗಳ ಮೊರೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.

ಐದು ಪೊಲೀಸ್ ತಂಡಗಳು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿವೆ. ತನಿಖೆಯಲ್ಲಿ ಕೆಲವೊಂದು ಮಹತ್ವದ ಸುಳಿವುಗಳು ಸಿಕ್ಕಿದ್ದು ಅವುಗಳ ಜಾಡು ಹಿಡಿಯಲಾಗಿದೆ.
– ಶರಣಪ್ಪ ಎಸ್‌.ಡಿ., ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.