ADVERTISEMENT

ಕಲಬುರಗಿ | ಆಟೊದಲ್ಲಿ ಸುಲಿಗೆ: ಬಾಲಕ ಸೇರಿ 5 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:03 IST
Last Updated 1 ಸೆಪ್ಟೆಂಬರ್ 2025, 7:03 IST
ಸಿದ್ದಾರೂಢ ಆಲಗೂಡ
ಸಿದ್ದಾರೂಢ ಆಲಗೂಡ   

ಕಲಬುರಗಿ: ನಗರದ ನ್ಯೂ ಜೇವರ್ಗಿ ಬ್ರಿಡ್ಜ್ ಹತ್ತಿರ ಈಚೆಗೆ ಆಟೊದಲ್ಲಿ ಸಂಚರಿಸುತ್ತಿದ್ದ ವೇಳೆ ಜ್ಯೋತಿಷಿಯೊಬ್ಬರಿಂದ ಎರಡು ಚಿನ್ನದುಂಗುರ ಮತ್ತು ನಗದು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಐದು ಜನ ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.

ಎಪಿಎಂಸಿ ಮಾರ್ಕೆಟ್‌ ಹತ್ತಿರದ ಹಮಾಲ್‌ ಕಾಲೊನಿಯ ಸಿದ್ದಾರೂಢ ಕಲ್ಯಾಣರಾವ್ ಆಲಗೂಡ, ಕಮಲನಗರದ ಮಹೇಶ್ ವೆಂಕಟ ಜಾನೇಕರ್, ಹಮಾಲ್‌ ಕಾಲೊನಿಯ ಜಯಪ್ರಕಾಶ ರಮೇಶ್ ದೇವದುರ್ಗ, ಅಖಿಲೇಶ್ ಶಿವಾನಂದ ನಾಟೀಕರ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಅವರಿಂದ ಕೃತ್ಯಕ್ಕೆ ಬಳಸಿದ ಒಂದು ಆಟೊರಿಕ್ಷಾ ಮತ್ತು ಚಾಕು ಜಪ್ತಿ ಮಾಡಲಾಗಿದೆ.

ಸುಲಿಗೆ ಮಾಡಿದ 8 ಗ್ರಾಂ ಚಿನ್ನದ ಉಂಗುರ ಮತ್ತು ಬ್ರಹ್ಮಪುರ ಪೊಲೀಸ್‌ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದ 10 ಗ್ರಾಂ ಬಂಗಾರದ ಚೈನ್ ಜಪ್ತಿ ಮಾಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT
ಮಹೇಶ್ ಜಾನೇಕರ್

ಹೈದರಾಬಾದ್‌ನ ರಾಮಾಂತರಪುರಂ ಮೂಲದ ಹಾಗೂ ಸ್ಥಳೀಯ ಕರುಣೇಶ್ವರ ನಗರದ ನಿವಾಸಿಯಾದ ಜ್ಯೋತಿಷಿ ಪರಶುರಾಮ ರಾಮಚಂದ್ರ ವಾಸ್ಟರ್ (ಶಾಸ್ತ್ರಿ) ಆ.20ರಂದು ರಾತ್ರಿ 10.30ರ ಸುಮಾರಿಗೆ ಆಟೊರಿಕ್ಷಾದಲ್ಲಿ ಹೋಗುತ್ತಿದ್ದರು. ಆಗ ಆಟೊ ಚಾಲಕ ಮತ್ತು ಆಟೊದಲ್ಲಿದ್ದ ನಾಲ್ಕು ಜನ ಆರೋಪಿಗಳು ಪರಶುರಾಮ ಅವರಿಂದ 8 ಗ್ರಾಂ ಮತ್ತು 5 ಗ್ರಾಂ.ನ ಚಿನ್ನದ ಉಂಗುರ ಮತ್ತು ₹ 3 ಸಾವಿರ ನಗದನ್ನು ಸುಲಿಗೆ ಮಾಡಿದ್ದರು. ಈ ಕುರಿತು ಪರಶುರಾಮ ಅಶೋಕನಗರ ಠಾಣೆಯಲ್ಲಿ ದೂರು ನೀಡಿದ್ದರು.

ಜಯಪ್ರಕಾಶ ದೇವದುರ್ಗ

ಆರೋಪಿಗಳ ಪತ್ತೆಗಾಗಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಎಚ್.ನಾಯಕ್ ಮಾರ್ಗದರ್ಶನದಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ್ ನೇತೃತ್ವದಲ್ಲಿ ಪಿಐ ಅರುಣಕುಮಾರ ಹಾಗೂ ಸಿಬ್ಬಂದಿ ವೈಜನಾಥ, ಮಲ್ಲಿಕಾರ್ಜುನ ಮೇತ್ರೆ, ಶಿವಪ್ರಕಾಶ, ನೀಲಕಂಠರಾಯ, ಮುಜಾಹಿದ್, ಚಂದ್ರಶೇಖರ, ಸಂತೋಷ ಮತ್ತು ಹರಿಕಿಶೋರ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಸುಲಿಗೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ ಶ್ಲಾಘಿಸಿದ್ದಾರೆ.

ಅಖಿಲೇಶ್ ನಾಟೀಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.