ಕಲಬುರಗಿ: ಕ್ಷೀಣಿಸುತ್ತಿದ್ದ ಮಳೆ, ಅವ್ಯಾಹತ ಅಂತರ್ಜಲ ಬಳಕೆ, ಮರುಪೂರಣಕ್ಕೆ ನಿರ್ಲಕ್ಷ್ಯದಂಥ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿತ್ತು. ಅದಕ್ಕೆ ಈ ವರ್ಷದ ಅತಿವೃಷ್ಟಿ ತಡೆಯೊಡ್ಡಿದೆ. ನಿರಂತರ ಮಳೆಯಿಂದ ಅಪಾರ ಪ್ರಮಾಣದ ಜಲಸಂಪತ್ತು ಭೂಮಿಯ ಒಡಲಾಳ ಸೇರಿದೆ.
ಜಿಲ್ಲೆಯಲ್ಲಿ 2025ರ ಜನವರಿಯಿಂದ ಅಕ್ಟೋಬರ್ 6ರ ತನಕ ವಾಡಿಕೆಯಂತೆ 679 ಮಿಮೀ ಮಳೆಯಾಗಬೇಕಿತ್ತು. ಆದರೆ, ಶೇ48ರಷ್ಟು ಹೆಚ್ಚಳದೊಂದಿಗೆ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಭರ್ತಿ 1,005 ಮಿಮೀ ಮಳೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ದಾಖಲೆ ಮಳೆ.
ಜಿಲ್ಲೆಯಲ್ಲಿ ಅತಿವೃಷ್ಟಿಯು ಒಂದೆಡೆ ಸಂಕಷ್ಟ ಅವಾಂತರ ಸೃಷ್ಟಿಸಿದ್ದರೂ ಅಂತರ್ಜಲವೃದ್ಧಿಗೆ ಭರಪೂರ ಕೊಡುಗೆ ನೀಡಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಜಿಲ್ಲೆಯ ಅಂತರ್ಜಲಮಟ್ಟ ಸರಾಸರಿ 1.31 ಮೀಟರ್‌ಗಳಷ್ಟು ಹಾಗೂ ಕಳೆದ ವರ್ಷ ಹೋಲಿಸಿದರೆ ಸರಾಸರಿ 2.45 ಮೀಟರ್‌ಗಳಷ್ಟು ವೃದ್ಧಿಸಿದೆ.
2016ರ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯ ಭೂಮಿಯ ಸರಾಸರಿ 5.07 ಮೀಟರ್ ಆಳದಲ್ಲಿ ನೀರು ಸಿಗುತ್ತಿತ್ತು. 2024ರ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯಲ್ಲಿ ಭೂಮಿಯಲ್ಲಿ ಸರಾಸರಿ 6.18 ಮೀಟರ್ ಆಳದಲ್ಲಿ ನೀರು ದೊರೆಯುತ್ತಿತ್ತು. ಇದೀಗ 2025ರ ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಸರಾಸರಿ ಕೇವಲ 3.73 ಮೀಟರ್ ಆಳದಲ್ಲಿ ಜೀವಜಲ ಸಿಗುತ್ತಿದೆ.
ಸೆಪ್ಟೆಂಬರ್‌ನಲ್ಲಿ ಜಿಲ್ಲೆಯ ಹಲವೆಡೆ ನಿರಂತರ ಮಳೆಯಿಂದ ಹೊಲ–ಗದ್ದೆಗಳಲ್ಲಿ ಇರುವ ಕೊಳವೆ ಬಾವಿಗಳಿಂದ ನೀರು ಉಕ್ಕಿ ಹರಿದಿದೆ.
ಕಳೆದ ವರ್ಷದ ಸ್ಥಿತಿಗತಿ: ಕಬ್ಬು, ಬಾಳೆಯಂಥ ಕೃಷಿ ಚಟುವಟಿಕೆಗಳನ್ನು ಕಾಣುವ ಅಫಜಲಪುರ ತಾಲ್ಲೂಕಿನಲ್ಲಿ ಭೀಮಾ ನದಿ ಹರಿಯುತ್ತದೆ. ಅದರ ಹೊರತಾಗಿಯೂ ಅಂತರ್ಜಲಮಟ್ಟದ ಬಳಕೆ ಹೆಚ್ಚು. 2024ರ ಸೆಪ್ಟೆಂಬರ್‌ನಲ್ಲಿ ಅಫಜಲಪುರದಲ್ಲಿ ಅಂತರ್ಜಲಮಟ್ಟವು 16.98 ಮೀಟರ್‌ಗಳಷ್ಟು ಕುಸಿದಿತ್ತು. ಈ ವರ್ಷದ ನಿರಂತರ ಮಳೆಗೆ 5.87 ಮೀಟರ್‌ಗಳಷ್ಟು ವೃದ್ಧಿಯಾಗಿ, 11.11 ಮೀಟರ್‌ಗೆ ಸಿಗುತ್ತಿದೆ.
ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಚಿಂಚೋಳಿ ತಾಲ್ಲೂಕಿನಲ್ಲಿ 5.99 ಮೀ, ಆಳಂದ ತಾಲ್ಲೂಕಿನಲ್ಲಿ 5.98 ಮೀ, ಚಿತ್ತಾಪುರದಲ್ಲಿ 4.4 ಮೀ, ಜೇವರ್ಗಿಯಲ್ಲಿ 1.58 ಮೀ, ಕಮಲಾಪುರದಲ್ಲಿ 1.99 ಮೀ, ಕಲಬುರಗಿ ತಾಲ್ಲೂಕಿನಲ್ಲಿ 0.84 ಮೀ, ಸೇಡಂನಲ್ಲಿ 0.75 ಮೀ ಹಾಗೂ ಯಡ್ರಾಮಿ ತಾಲ್ಲೂಕಿನಲ್ಲಿ 0.57 ಮೀಟರ್‌ನಷ್ಟು ಅಂತರ್ಜಲಮಟ್ಟ ವೃದ್ಧಿಸಿದೆ. ಜಿಲ್ಲೆಯ ಇನ್ನುಳಿದ ಎರಡು ತಾಲ್ಲೂಕುಗಳಲ್ಲಿ ಅಂತರ್ಜಲಮಟ್ಟ ಕುಸಿದಿದೆ.
ಅಂತರ್ಜಲ ಮಾಪನ: ‘ಅಂತರ್ಜಲಮಟ್ಟ ಪ್ರಮಾಣ ಅಧ್ಯಯನಕ್ಕೆ ಜಿಲ್ಲೆಯ 11 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ತೋಡುಬಾವಿ ಹಾಗೂ ಕೊಳವೆಬಾವಿ ಸೇರಿದಂತೆ ಒಟ್ಟು 75ಕ್ಕೂ ಅಧಿಕ ತಾಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಪ್ರತಿ ತಿಂಗಳ ಅಂತ್ಯಕ್ಕೆ ನೀರಿನ ಪ್ರಮಾಣವನ್ನು ದಾಖಲಿಸಿಕೊಂಡು ಲೆಕ್ಕಹಾಕಲಾಗುತ್ತದೆ’ ಎಂದು ಜಿಲ್ಲಾ ಅಂತರ್ಜಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಈ ವರ್ಷ ಭರಪೂರ ಮಳೆಯಾಗಿರುವ ಪರಿಣಾಮ ಅಂತರ್ಜಲಮಟ್ಟ ಗಣನೀಯವಾಗಿ ವೃದ್ಧಿಯಾಗಿದೆ ಆರ್.ಮುಜಿಬುರ್ ರೆಹಮಾನ್ ಹಿರಿಯ ಭೂವಿಜ್ಞಾನಿ ಜಿಲ್ಲಾ ಅಂತರ್ಜಲ ಇಲಾಖೆ
ಜಿಲ್ಲೆಯಲ್ಲಿ ಈ ವರ್ಷ ಭರಪೂರ ಮಳೆಯಾಗಿರುವ ಪರಿಣಾಮ ಅಂತರ್ಜಲಮಟ್ಟ ಗಣನೀಯವಾಗಿ ವೃದ್ಧಿಯಾಗಿದೆಆರ್.ಮುಜಿಬುರ್ ರೆಹಮಾನ್ ಹಿರಿಯ ಭೂವಿಜ್ಞಾನಿ ಜಿಲ್ಲಾ ಅಂತರ್ಜಲ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.