ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಲಂಡನಕರ್‌ಗೆ ಮತ್ತೆ ಕುಲಸಚಿವ ಹುದ್ದೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 6:27 IST
Last Updated 6 ಸೆಪ್ಟೆಂಬರ್ 2025, 6:27 IST
ರಮೇಶ ಲಂಡನಕರ್
ರಮೇಶ ಲಂಡನಕರ್   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಯ ಪ್ರಭಾರ ವಹಿಸಿಕೊಂಡಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಕುಲಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಿದ್ದರಿಂದ ನಾಲ್ಕು ತಿಂಗಳಲ್ಲಿ ಹಿರಿಯ ಪ್ರಾಧ್ಯಾಪಕ ಪ್ರೊ.ರಮೇಶ ಲಂಡನಕರ್ ಅವರು ಮೂರನೇ ಬಾರಿಗೆ ಪ್ರಭಾರ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

2024ರ ಡಿಸೆಂಬರ್ 30ರಂದು ಲಂಡನಕರ್ ಅವರನ್ನು ಕುಲಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಕುಲಪತಿಯಾಗಿದ್ದ ಪ್ರೊ.ದಯಾನಂದ ಅಗಸರ ಅವರ ಅವಧಿ ಮುಗಿದ ಬಳಿಕ ಪ್ರಭಾರ ಕುಲಪತಿಯಾಗಿದ್ದ ಪ್ರೊ.ಹೂವಿನಬಾವಿ ಬಾಬಣ್ಣ ಅವರು ಲಂಡನಕರ್ ಅವರನ್ನು ಬದಲಿಸಿ ಪ್ರೊ.ಚಂದ್ರಕಾಂತ ಯಾತನೂರ ಅವರಿಗೆ ಆ ಹುದ್ದೆ ವಹಿಸಿದ್ದರು.

ಗುಲಬರ್ಗಾ ವಿ.ವಿ.ಗೆ ಸಂಬಂಧಿಸಿದ ಕಾರ್ಯದ ನಿಮಿತ್ತ ವಿಜಯಪುರಕ್ಕೆ ತೆರಳಿದ್ದಾಗಲೇ ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಿದ್ದನ್ನು ಲಂಡನಕರ್ ಅವರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ಪ್ರಶ್ನಿಸಿದ್ದರು. ಹೀಗಾಗಿ, ಯಾತನೂರ ಅವರ ಬದಲು ಲಂಡನಕರ್ ಅವರನ್ನು ಮುಂದುವರಿಸುವಂತೆ ಇಲಾಖೆ ಸೂಚಿಸಿತ್ತು. ಆಗಸ್ಟ್ 14ರಂದು ಏಕಾಏಕಿ ಕೆಕೆಆರ್‌ಡಿಬಿ ಉಪಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅವರಿಗೆ ಕುಲಸಚಿವ ಹುದ್ದೆಯನ್ನು ಸರ್ಕಾರ ವಹಿಸಿತ್ತು. ಸೆ. 2ರಂದು ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಹೀಗಾಗಿ, ಅವರಿಂದ ತೆರವಾದ ಹುದ್ದೆಯನ್ನು ರಮೇಶ ಲಂಡನಕರ್ ಮತ್ತೆ ವಹಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.