ADVERTISEMENT

ಕಲಬುರಗಿ ಹೆಲ್ತ್ ಹಬ್ ಮಾಡುವತ್ತ ಹೆಜ್ಜೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:56 IST
Last Updated 18 ಸೆಪ್ಟೆಂಬರ್ 2025, 4:56 IST
   

ಕಲಬುರಗಿ: ‘ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯನ್ನು ಹೆಲ್ತ್ ಹಬ್ ಮಾಡುವ ಕನಸು ಕಂಡಿದ್ದರು. ಅದನ್ನು ನಮ್ಮ ಸರ್ಕಾರ ನನಸು ಮಾಡಲು ಹೆಜ್ಜೆ ಇಟ್ಟಿದ್ದು, ಈ ಭಾಗದ ಜನರು ತುರ್ತು ಅನಾರೋಗ್ಯಕ್ಕಾಗಿ ಹೈದರಾಬಾದ್, ಬೆಂಗಳೂರು ಹೋಗುವುದು ತಪ್ಪಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದ ಅವರು, ತಮ್ಮ ಸರ್ಕಾರ ಜಿಲ್ಲೆಗೆ ನೀಡಿದ ಆರೋಗ್ಯ ಸೌಲಭ್ಯಗಳ ವಿವರವನ್ನು ಬಿಚ್ಚಿಟ್ಟರು.

‘ಕಲಬುರಗಿಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಸ್ಥಾಪಿಸಲು ₹ 100 ಕೋಟಿ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ₹ 221 ಕೋಟಿ ಒದಗಿಸಲಾಗಿದೆ. ಪ್ರಾದೇಶಿಕ ಎಂಡೋಕ್ರೈನಾಲಜಿ ಕೇಂದ್ರಗಳನ್ನು ಆರಂಭಿಸುವುದಕ್ಕಾಗಿ ₹ 50 ಕೋಟಿ ನೀಡಲಾಗಿದೆ. ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ವಿಭಾಗವನ್ನು ಆರಂಭಿಸುವುದಕ್ಕಾಗಿ ₹ 18 ಕೋಟಿ ನೀಡಲಾಗಿದೆ. ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ಕಟ್ಟಡ ಮತ್ತು ಉಪಕರಣಗಳಿಗಾಗಿ ₹ 287 ಕೋಟಿ ಒದಗಿಸಿದ್ದೇವೆ. ಆಸ್ಪತ್ರೆಯು ಈಗಾಗಲೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಹೃದ್ರೋಗಿಗಳಿಗೆ ಅತ್ಯುತ್ತಮ ಸೇವೆ ಸಿಗುವಂತಾಗಿದೆ. ₹ 9.60 ಕೋಟಿ ಮೊತ್ತದಲ್ಲಿ ಕೆಕೆಆರ್‌ಡಿಬಿ ಹಾರ್ಟ್ ಲೈನ್ ಯೋಜನೆಗೆ ಚಾಲನೆ ನೀಡಿದ್ದು, 32 ಆಂಬುಲೆನ್ಸ್‌ಗಳನ್ನು ಹೃದಯಾಘಾತದ ತುರ್ತು ಸಂದರ್ಭದಲ್ಲಿ ಅವಶ್ಯಕವಾಗಿರುವ ಉಪಕರಣಗಳೊಂದಿಗೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ’ ಎಂದರು.

ADVERTISEMENT

ಯಲಬುರ್ಗಾ, ಜೇವರ್ಗಿ ಮತ್ತು ಯಾದಗಿರಿಯಲ್ಲಿ ಹೊಸದಾಗಿ ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲು ಒಟ್ಟು ₹ 18 ಕೋಟಿ ಅನುದಾನ ಒದಗಿಸಲಾಗಿದೆ. ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದ್ದು, ಒಟ್ಟಾರೆ ₹ 390 ಕೋಟಿ ವೆಚ್ಚದಲ್ಲಿ ಕಲಬುರಗಿ ಜವಳಿ ಪಾರ್ಕಿಗೆ ವಿವಿಧ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ನೇರ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಜನೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಸಚಿವರಾದ ಪ್ರಿಯಾಂಕ್‌ ಖರ್ಗೆ, ಬೈರತಿ ಸುರೇಶ್‌, ಡಿ.ಸುಧಾಕರ್‌, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್‌, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ.ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂಖಾನ್, ಗ್ಯಾರಂಟಿ ಯೋಜನೆ ಅನುಷ್ಠಾನಗಳ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸುಶೀಲಾ ಬಿ., ಈಶಾನ್ಯ ವಲಯದ ಡಿಐಜಿಪಿ ಶಾಂತನು ಸಿನ್ಹಾ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಡೊಳ್ಳು ಕುಣಿತ ಪ್ರದರ್ಶಿಸಿದ ಕಲಾವಿದರು.

ಪೊಲೀಸ್ ಪರೇಡ್ ಮೈದಾನದಲ್ಲಿ ಕಲಾವಿದರು ಕನ್ನಡ ನಾಡು ನುಡಿಯ ಗೀತೆಗೆ ಹೆಜ್ಜೆ ಹಾಕಿದರು 
ನಮ್ಮ ಸರ್ಕಾರದ ಅವಧಿಯಲ್ಲಿ ಬಸವಕಲ್ಯಾಣದಲ್ಲಿ ‘ಅನುಭವ ಮಂಟಪ’ವನ್ನು ವಿನ್ಯಾಸಗೊಳಿಸಿ ಶಂಕುಸ್ಥಾಪನೆ ಮಾಡಿದ್ದೆವು. ಈಗ ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸುತ್ತಿದ್ದೇವೆ. ವರ್ಷಾಂತ್ಯದಲ್ಲಿ ಅದನ್ನು ಲೋಕಾರ್ಪಣೆ ಮಾಡುತ್ತೇವೆ.
ಸಿದ್ದರಾಮಯ್ಯ ಮುಖ್ಯಮಂತ್ರಿ

₹649.47 ಕೋಟಿ ಮೊತ್ತದ ಕಾರ್ಯಗಳಿಗೆ ಚಾಲನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಕೆಆರ್‌ಡಿಬಿ ಮತ್ತು ಇತರೆ ಇಲಾಖೆಯ ₹ 570.05 ಕೋಟಿ ಮೊತ್ತದ 133 ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ₹ 79.41 ಕೋಟಿ ಮೊತ್ತದ 26 ಕಾಮಗಾರಿಗಳ ಲೋಕಾರ್ಪಣೆ ಸೇರಿದಂತೆ ಒಟ್ಟಾರೆ ₹ 649.47 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇವು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿವೆ. 

ಬೆಳೆ ಹಾನಿ ಪರಿಶೀಲಿಸಿದ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು‌ ತಾಲ್ಲೂಕಿನ ಫರಹತಾಬಾದ್ ಗ್ರಾಮದ ಬಳಿ ಮಳೆಯಿಂದ ಹಾನಿಗೀಡಾದ ಬೆಳೆಯನ್ನು ವೀಕ್ಷಿಸಿದರು. ರೈತ ಚನ್ನಬಸಪ್ಪ ಸಜ್ಜನ ಎಂಬುವವರ 27 ಎಕರೆ ಹೊಲವನ್ನು ಪರಿಶೀಲಿಸಿದ ಮುಖ್ಯಮಂತ್ರಿ ಅವರು ತೊಗರಿ ಬೆಳೆ ಹಾಳಾಗಿರುವುದನ್ನು ಗಮನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ‌ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಬೆಳೆ ನಷ್ಟದ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಆದಷ್ಟು ಶೀಘ್ರವೇ ಬೆಳೆ ಹಾನಿ ವರದಿ ಪಡೆದು ಪರಿಹಾರ ವಿತರಣೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.