
ಕಲಬುರಗಿ: ಇನ್ನೊಂದು ಅರ್ಧ ಗಂಟೆ ಕಳೆದಿದ್ದರೆ ಸುರಕ್ಷಿತವಾಗಿ ಕಲಬುರಗಿ ತಲುಪುತ್ತಿದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಹಾಗೂ ಸಂಬಂಧಿಕರು ಹೊರಟಿದ್ದ ಕಾರು ಜೇವರ್ಗಿ ಸಮೀಪದ ಗೌನಳ್ಳಿ ಕ್ರಾಸ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಮನೆ ಮಾಡಿತು.
ಮಂಗಳವಾರ ಸಂಜೆ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಕುಟುಕು ಜೀವ ಹಿಡಿದುಕೊಂಡಿದ್ದ ಮಹಾಂತೇಶ ಬೀಳಗಿ ಅವರನ್ನು ನಗರದ ರಿಂಗ್ ರಸ್ತೆಯಲ್ಲಿನ ಮಣೂರ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟರಲ್ಲಾಗಲೇ ಜೀವ ಕಳೆದುಕೊಂಡಿದ್ದರು. ಆಸ್ಪತ್ರೆಯ ಬಳಿ ಧಾವಿಸಿ ಬಂದ ಸಂಬಂಧಿಕರು ಅಲ್ಲಿಯೇ ಕಣ್ಣೀರು ಹಾಕಿದರು.
ಬೀಳಗಿ ಅವರ ಸೋದರ ಸಂಬಂಧಿಯ ಮಗಳನ್ನು ಕಲಬುರಗಿಯ ಕಮರಡಗಿ ಮನೆತನದ ಯುವಕನೊಂದಿಗೆ ಇದೇ ಬುಧವಾರ ಮದುವೆ ನಿಶ್ಚಯವಾಗಿತ್ತು. ಹಾಗಾಗಿ, ಮದುವೆ ಕಾರ್ಯಕ್ರಮದಲ್ಲಿ ತನ್ನ ಸೋದರ ಸಂಬಂಧಿಗಳೊಂದಿಗೆ ಬೆಳಗಾವಿ ಜಿಲ್ಲೆ ರಾಮದುರ್ಗದಿಂದ ಹೊರಟಿದ್ದರು. ಗೌನಳ್ಳಿ ಕ್ರಾಸ್ ಬಳಿ ನಾಯಿ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆದ ಕಾರು ಪಕ್ಕದ ಹೊಲದಲ್ಲಿ ಬಿದ್ದಿತ್ತು. ಹೀಗಾಗಿ, ಭಾರಿ ಗಾಯಗೊಂಡ ಅವರು ಆಸ್ಪತ್ರೆಗೆ ತರುವಾಗಲೇ ಕೊನೆಯುಸಿರೆಳೆದಿದ್ದರು.
‘ಬುಧವಾರ ಬೆಳಕಾದರೆ ನಮ್ಮ ಮನೆತನದ ಯುವಕನೊಂದಿಗೆ ಬೀಳಗಿ ಅವರ ಅಣ್ಣನ ಮಗಳ ಮದುವೆ ಆಗುತ್ತಿತ್ತು. ಅಷ್ಟರಲ್ಲಿ ಇಂತಹ ಕೆಟ್ಟ ಸುದ್ದಿ ಬಂದಿದೆ’ ಎಂದು ಆಸ್ಪತ್ರೆಯ ಎದುರು ನಿಂತಿದ್ದ ವಿಶ್ವನಾಥ ಕಮರಡಗಿ ಕಣ್ಣೀರು ಹಾಕಿದರು.
ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಮಹಾಂತೇಶ ಬೀಳಗಿ ಸೇರಿದಂತೆ ಅಪಘಾತದಲ್ಲಿ ಮೃತಪಟ್ಟ ಮೂವರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆಂಬುಲೆನ್ಸ್‌ನಲ್ಲಿ ರಾಮದುರ್ಗಕ್ಕೆ ಕಳುಹಿಸಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.