ADVERTISEMENT

ಕಲಬುರಗಿ | ಕಣಕಿ ದರ ಹೆಚ್ಚಳ: ಸವಾಲಾದ ಗೋಶಾಲೆ ನಿರ್ವಹಣೆ

ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ: ನೆರವಿಗೆ ದಾನಿಗಳಿಗಾಗಿ ಮೊರೆ

ಭೀಮಣ್ಣ ಬಾಲಯ್ಯ
Published 2 ಮೇ 2025, 4:41 IST
Last Updated 2 ಮೇ 2025, 4:41 IST
ಕಲಬುರಗಿ ನಗರ ಹೊರವಲಯದ ಮಾಧವ ಗೋಶಾಲೆ
ಕಲಬುರಗಿ ನಗರ ಹೊರವಲಯದ ಮಾಧವ ಗೋಶಾಲೆ   

ಕಲಬುರಗಿ: ‘ಹಿಂಗಾರು ಜೋಳ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಕಣಕಿ ದರ ಹೆಚ್ಚಳವಾಗಿದೆ. ಸಂಗ್ರಹ ಸಾಧ್ಯವಾಗುತ್ತಿಲ್ಲ. ಈ ವರ್ಷದ ಬೇಸಿಗೆ ಕೊಳವೆಬಾವಿಯ ನೀರನ್ನೂ ಪಾತಾಳಕ್ಕೆ ತಳ್ಳಿದೆ. ದಾನಿಗಳಿಗೆ ದಮ್ಮಯ್ಯ ಎಂದು ಕಣಕಿ ತರಿಸಿಕೊಳ್ಳುತ್ತಿದ್ದೇವೆ. ಬೇಸಿಗೆಯಲ್ಲಿ ಗೋಶಾಲೆ ನಿರ್ವಹಣೆ ಸವಾಲಿನ ಕೆಲಸ...’

ಬೇಸಿಗೆ ತಂದಿಟ್ಟ ಸವಾಲುಗಳ ಕಾರಣಕ್ಕೆ ನೆರವಿಗಾಗಿ ಎದುರು ನೋಡುತ್ತಿರುವ ನಗರದ ಹೊರವಲಯದ ಮಾಧವ ಗೋಶಾಲೆಯ ಪ್ರಮುಖ ಮಹೇಶ ಬೀದರಕರ್ ಅವರ ಮಾತುಗಳಿವು.

ಜಿಲ್ಲೆಯಲ್ಲಿ 17 ಖಾಸಗಿ ಗೋಶಾಲೆಗಳಿವೆ. ಅವುಗಳಲ್ಲಿ ಸುಮಾರು 1,300 ಗೋವುಗಳನ್ನು ಪೋಷಿಸಲಾಗುತ್ತಿದೆ.

ADVERTISEMENT

ಮಳೆ ಕೊರತೆಯ ಕಾರಣಕ್ಕೆ ಜಿಲ್ಲೆಯಲ್ಲಿ ಹಿಂಗಾರು ಜೋಳವನ್ನು ಕೇವಲ 44,725 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಕಳೆದ ವರ್ಷ ವಾಹನ ಬಾಡಿಗೆ ಸೇರಿ ₹7 ಸಾವಿರದಿಂದ ₹8 ಸಾವಿರಕ್ಕೆ ಒಂದು ಟ್ರ್ಯಾಕ್ಟರ್ ಕಣಕಿ ಸಿಗುತ್ತಿತ್ತು. ಅದು ಈ ಬಾರಿ ₹12 ಸಾವಿರದಿಂದ ₹13 ಸಾವಿರಕ್ಕೆ ಹೆಚ್ಚಳವಾಗಿದೆ. ದರ ಹೆಚ್ಚಳ ಗೋಶಾಲೆಗಳಿಗೆ ಸವಾಲಾಗಿ ಪರಿಣಮಿಸಿದೆ.

ಕಣಕಿಗೆ ಪರ್ಯಾಯವಾಗಿ ಭತ್ತದ ಹುಲ್ಲು ನೀಡಬೇಕು ಎಂದರೆ ಅದನ್ನು ದೂರದ ರಾಯಚೂರು ಅಥವಾ ಯಾದಗಿರಿ ಜಿಲ್ಲೆಗಳಿಂದ ತರಬೇಕು. ಆ ಜಿಲ್ಲೆಗಳಲ್ಲಿಯೂ ಈ ಬಾರಿ ಕಾಲುವೆ ನೀರಿನ ಅನಿಶ್ಚಿತತೆ ಕಾರಣಕ್ಕೆ ಭತ್ತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿಲ್ಲ. ಕಾರಣ ಹುಲ್ಲಿಗೆ ಬೇಡಿಕೆ ಹೆಚ್ಚಾಗಿದೆ. ಒಂದು ಟ್ರ್ಯಾಕ್ಟರ್ ಹುಲ್ಲಿಗೆ ₹11 ಸಾವಿರದಿಂದ ₹12 ಸಾವಿರ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆ ಹೊರೆ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದ್ದು, ₹150ಕ್ಕೆ ಒಂದು ಹೊರೆ ನೀಡುತ್ತಿದ್ದಾರೆ.

ಕೆಲವು ಗೋಶಾಲೆಗಳು ನೀರಿಗಾಗಿ ಕೊಳವೆಬಾವಿ ಅವಲಂಬಿಸಿವೆ. ಕೊಳವೆಬಾವಿಯಲ್ಲಿ ಅಂತರ್ಜಲ ಕುಸಿತಗೊಂಡು ನೀರಿನ ಪ್ರಮಾಣ ಕಡಿಮೆಯಾದ ಕಾರಣ ಜಾನುವಾರುಗಳಿಗೆ ಕುಡಿಯಲು ಹೆಚ್ಚು ನೀರು ಬಳಸಲಾಗುತ್ತಿದೆ. ಮೇವು ತೋಯಿಸಲು ಕಡಿಮೆ ನೀರು ಬಳಸಲಾಗುತ್ತಿದೆ.

ಸಿಗದ ನೆರವು: ‘ಸರ್ಕಾರದಿಂದ ಖಾಸಗಿ ಗೋಶಾಲೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದಾಗ ಅವರು ಬಿಡಿಗಾಸು ಕೊಡುತ್ತಾರೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಲ್ಲಿ ಸಾಲುತ್ತದೆ. ಅವರು ಕೊಡುವ ನೆರವು ಒಂದು ತಿಂಗಳ ನಿರ್ವಹಣೆಗೂ ಸಾಲುವುದಿಲ್ಲ. ಅದಕ್ಕೂ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಅದನ್ನು ಸಡಿಲಗೊಳಿಸಬೇಕು’ ಎಂದು ಮಹೇಶ ಬೀದರಕರ್ ಒತ್ತಾಯಿಸುತ್ತಾರೆ.

ಸಂಗ್ರಹ ಚಿತ್ರ
ಸರ್ಕಾರ ಬೇಸಿಗೆಯಲ್ಲಿ ಗೋಶಾಲೆಗಳ ನೆರವಿಗೆ ಬರಬೇಕು. ಮೇವು ಬ್ಯಾಂಕ್ ಆರಂಭಿಸಬೇಕು. ಇದರಿಂದ ಗೋಶಾಲೆಗಳಿಗೆ ಅನುಕೂಲವಾಗಲಿದೆ
ಮಹೇಶ ಬೀದರಕರ್ ಮಾಧವ ಗೋಶಾಲೆ ಪ್ರಮುಖ

ಜಿಲ್ಲೆಯ ಖಾಸಗಿ ಗೋಶಾಲೆಗಳು

ಸದ್ಗುರು ಸೇವಾಲಾಲ ವಿದ್ಯಾಪೀಠ ಟ್ರಸ್ಟ್ ಉತ್ತರಾದಿಮಠದ ಗೋಶಾಲೆ ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ ಗುರು ದತ್ತ ದಿಗಂಬರ ವೆಂಕಟೇಶ್ವರ ಸೇವಾ ಸಂಘ ಫ್ಲವರ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರ ಮಾಧವ ಗೋ ಅನುಸಂಧಾನ ಕೇಂದ್ರ ಟ್ರಸ್ಟ್ ಪುಣ್ಯ ಡಿಎಂಎಸ್‌ ಗೋಶಾಲೆ ಸಪ್ತಾ ಗೋಪಾರಿಕ್ರಿಯಾ ಗೋಶಾಲೆ ಆರ್ಯನ್ ಗೋಶಾಲೆ ಚಂದ್ರಲಾಂಬಿಕಾ ಗೋಶಾಲೆ ಕಲ್ಯಾಣ ನಾಡು ಬಿರಾದಾರ ಸಮುದಾಯ ಮತ್ತು ಸೇವಾ ಸಂಸ್ಥೆ ಜೈ ರಾಮ ಶಿಕ್ಷಣ ಸಂಸ್ಥೆ ಶರಣಲಿಂಗ ಮಹಾರಾಜ ಚಾರಿಟಬಲ್ ಟ್ರಸ್ಟ್ ವಿಜಯಭಾರತಿ ಚಾರಿಟಬಲ್ ಟ್ರಸ್ಟ್ ಚಂದ್ರಲಾಂಬಿಕಾ ಗೋಶಾಲೆ ಕೆಂಚಬಸವೇಶ್ವರ ಜನಕಲ್ಯಾಣ ಟ್ರಸ್ಟ್‌ ಗೋಶಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.