ADVERTISEMENT

ಕಲಬುರಗಿ | ಕೈದಿಗಳ ಮೋಜು ಮಸ್ತಿ: ನಾಲ್ಕೂವರೆ ತಾಸು ತಪಾಸಣೆ ನಡೆಸಿದ ಅಲೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 10:54 IST
Last Updated 3 ಜನವರಿ 2026, 10:54 IST
   

ಕಲಬುರಗಿ: ಕೆಲ ದಿನಗಳ ಹಿಂದೆ ‌ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ನಡೆದ ಕೈದಿಗಳ ಮೋಜು, ಮಸ್ತಿ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಕಾರಾಗೃಹ ಮತ್ತು ಸುಧಾರಣಾ ‌ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ಶನಿವಾರ ಸುಮಾರು ನಾಲ್ಕೂವರೆ ಗಂಟೆ ತಪಾಸಣೆ ನಡೆಸಿದರು.

ಕೈದಿಗಳ ವಿಚಾರಣೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಹೊರಭಾಗದ ಕಾರಾಗೃಹವನ್ನು ಸುತ್ತು ಹಾಕಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲಾ ಕಡೆ ಭೇಟಿ ಕೊಡುತ್ತಿದ್ದೇನೆ. ನಾಲ್ಕೈದು ದಿನದ ಹಿಂದೆ ವೈರಲ್ ಆದ ವಿಡಿಯೊ ಬಗ್ಗೆ ಆನಂದ್ ರೆಡ್ಡಿ ತನಿಖೆ ಮಾಡುತ್ತಿದ್ದಾರೆ. ವರದಿ ಸಲ್ಲಿಸಲು ಜನವರಿ 20ನೇ ತಾರೀಖಿನವರೆಗೆ ಸಮಯ ಕೊಟ್ಟಿದ್ದೇನೆ. ವರದಿ ಬಂದ ಮೇಲೆ ಸರ್ಕಾರದ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಬಂದಾಗ ಲೋಪ ದೋಷಗಳು ಕಂಡು ಬಂದಿಲ್ಲ. ಕೆಲವೊಂದು ದೂರುಗಳು ಬಂದಿವೆ. ಅದರ ಬಗ್ಗೆ ತನಿಖೆ ಮಾಡಿದ್ದೇವೆ. ಯಾರು ಉದ್ದೇಶಪೂರ್ವಕವಾಗಿ ಇಂತಹ ಕೃತ್ಯ ಎಸಗಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದರು.

ADVERTISEMENT

'ನಾನು ವಿಚಾರಣಾಧಿಕಾರಿಯಾಗಿ ಬಂದಿಲ್ಲ. ವಿಡಿಯೊ ಬಿಡುಗಡೆ ಆಗಿದೆ. ಹೀಗೆ ಆಗಬಾರದಿತ್ತು. ಆ ಬಗ್ಗೆ ತನಿಖೆ ಮಾಡಲಾಗುತ್ತಿದೆ. ನಮ್ಮ ಅಧಿಕಾರಿಗಳ ತಪ್ಪು ಇದ್ದರೆ ಅವ್ರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.

'ಏಳು ವರ್ಷಕ್ಕಿಂತ ಜಾಸ್ತಿ ಶಿಕ್ಷೆ ಅನುಭವಿಸಿದ ಕೈದಿಗಳನ್ನು ಮುಕ್ತ ಬ್ಯಾರಕ್ ಬದಲು ಹೊರಭಾಗದಲ್ಲಿ ಇಡುತ್ತೇವೆ' ಎಂದರು.

'ಅಂತಹ ಕೈದಿಗಳು ಹೊರಗಡೆ ಬಂದು ಕೆಲಸ ಮಾಡಿ ಹೋಗುತ್ತಾರೆ. ಅವರಿಗೆ ಹೊರಗಡೆ ಓಡಾಡುವುದಕ್ಕೆ, ಕೆಲಸ ಮಾಡುವುದಕ್ಕೆ ಅವಕಾಶ ಇದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.