ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿದ ಆರೋಪದ ಸಾಬೀತಾಗಿದ್ದರಿಂದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
2022ರ ನವೆಂಬರ್ 1ರಂದು ಮಧ್ಯಾಹ್ನ 9ನೇ ತರಗತಿಯ ಬಾಲಕಿ ಬಯಲು ಬಹಿರ್ದೆಸೆಗೆ ಹೋಗಿದ್ದಳು. ಆಗ ಬಾಲಕ ಕೃತ್ಯ ಎಸಗಿದ್ದ. ಬಾಲಕಿಯ ಮೃತದೇಹ ಬಳಿಕ ಕಬ್ಬಿನ ಗದ್ದೆಯಲ್ಲಿ ವಿವಸ್ತ್ರಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೃತ್ಯ ನಡೆದಾಗ ಬಾಲಕನಿಗೆ 17 ವರ್ಷಗಳಿದ್ದವು. ಪ್ರಕರಣದ ತನಿಖೆ ನಡೆಸಿದ್ದ ಆಳಂದ ಸಿಪಿಐ ಬಾಸು ಚವ್ಹಾಣ ಹಾಗೂ ಪಿಎಸ್‌ಐ ತಿರುಮಲೇಶ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು, ಆರೋಪ ಸಾಬೀತಾಗಿದ್ದರಿಂದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಐಪಿಸಿ 363, 302 ಹಾಗೂ ಪೋಕ್ಸೊ ಕಾಯ್ದೆ ಕಲಂ 4(2), 4(6) ಸಜೆ ವಿಧಿಸಿ ಆದೇಶಿಸಿದರು. ಸರ್ಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.