ಸೇವು ಜಾಧವ
ಕಾಳಗಿ (ಕಲಬುರಗಿ ಜಿಲ್ಲೆ): ಸ್ವಂತ ಮತ್ತು ಕಡತಿ ಹಾಕಿಕೊಂಡಿದ್ದ ಹೊಲದಲ್ಲಿ ಬೆಳೆ ಕೈಕೊಟ್ಟ ಪರಿಣಾಮ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತರೊಬ್ಬರು ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ಹೊರವಲಯದ ಕರೆಕಲ್ ತಾಂಡಾದಲ್ಲಿ ಶನಿವಾರ ರಾತ್ರಿ ಜರುಗಿದೆ.
ಪ್ರಕಾಶ ಸೇವು ಜಾಧವ (57) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಐದು ವರ್ಷದ ಹಿಂದೆ ಮಗಳ ಮದುವೆಗೆಂದು ₹10 ಲಕ್ಷ ಖಾಸಗಿ ಸಾಲ ಮಾಡಿ ತನ್ನ ಸ್ವಂತದ 2 ಎಕರೆ ಜಮೀನು ಮಾರ್ಟಿಗೇಜ್ ಮಾಡಿಕೊಟ್ಟಿದ್ದರು.
ಪ್ರತಿ ವರ್ಷ ತನ್ನ ಹೊಲದೊಂದಿಗೆ ಇತರರ ಹೊಲ ಕಡತಿ ಹಾಕಿಕೊಂಡು ಹೆಸರು, ತೊಗರಿ ಬಿತ್ತನೆ ಮಾಡುತ್ತಿದ್ದರು. ಅದರಂತೆ ಈ ವರ್ಷವೂ ಒಟ್ಟು 30 ಎಕರೆಯಲ್ಲಿ ಹೆಸರು, ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ, ಬೆಳೆ ಸರಿಯಾಗಿ ಬೆಳೆದಿಲ್ಲ. ಈ ಬಾರಿಯೂ ಅತಿವೃಷ್ಟಿಗೆ ಹೆಸರು ಕೈ ಕೊಟ್ಟಿದೆ. ಈಗ ತೊಗರಿಯು ಗೊಡ್ಡು ರೋಗಕ್ಕೆ ತುತ್ತಾಗಿದೆ.
ಶನಿವಾರ ಹೊಲದಲ್ಲಿ ಈ ಎಲ್ಲವನ್ನು ಅವಲೋಕಿಸಿದ ಪ್ರಕಾಶ ಹೊಲದಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ರೈತನ ಹೆಸರಿನಿಂದ ಸ್ಥಳೀಯ ರೈತ ಸೇವಾ ಸಹಕಾರ ಸಂಘದಲ್ಲಿ ₹25 ಸಾವಿರ ಸಾಲವಿದೆ ಎನ್ನಲಾಗಿದೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
ಭಾನುವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.