ADVERTISEMENT

ಕಲಬುರಗಿ: ಜಮೀನು ಮಾರುವುದಾಗಿ ₹2.05 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 6:19 IST
Last Updated 3 ಸೆಪ್ಟೆಂಬರ್ 2025, 6:19 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ನಗರದ ವ್ಯಾಪಾರಿಯೊಬ್ಬರಿಗೆ ₹3.78 ಕೋಟಿಗೆ 1 ಎಕರೆ 30 ಗುಂಟೆ ಜಮೀನು ಮಾರಾಟ ಮಾಡುವುದಾಗಿ ವ್ಯಕ್ತಿಗಳಿಬ್ಬರು ಸೇರಿ ಒಪ್ಪಂದ ಮಾಡಿಕೊಂಡು ಜಮೀನು ನೀಡದೇ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. 

ನಗರದ ಜಗತ್ ಪ್ರದೇಶದ ನಿವಾಸಿ ಮೊಹ್ಮದ್‌ ಮಾಜ್ ಅಹ್ಮದ್‌ ವಂಚನೆಗೆ ಒಳಗಾದ ವ್ಯಾಪಾರಿ.

ADVERTISEMENT

‘ಕಲಬುರಗಿಯ ಚನ್ನವೀರ ನಗರದ ನಿವಾಸಿ ವಿಜಯಕುಮಾರ ಗಣೇಶಕರ ಅವರು ಆಜಾದಪುರ ಸೀಮಾಂತರದ ಸರ್ವೆ ನಂ 27/11ರ 1 ಎಕರೆ 10 ಗುಂಟೆ, ಸರ್ವೆ ನಂ 27/12ರ 5 ಗುಂಟೆ, ಸರ್ವೆ ನಂ 37/10ರ 5 ಗುಂಟೆ, ಸರ್ವೆ ನಂ 37/8ರ 5 ಗುಂಟೆ ಹಾಗೂ ಸರ್ವೆ ನಂ 37/1ರ 5 ಗುಂಟೆ ಜಮೀನನ್ನು ಒಟ್ಟು ₹3.78 ಕೋಟಿ ಮೊತ್ತಕ್ಕೆ ನನಗೆ ಮಾರಾಟ ಮಾಡಲು 2023ರ ಮಾರ್ಚ್‌ 11ರಂದು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕೆ ಮದನಲಾಲ್‌ ಗಣೇಶಕರ ಸಾಕ್ಷಿದಾರರಾಗಿದ್ದರು. ಒಪ್ಪಂದದ ಸಂದರ್ಭದಲ್ಲಿ ₹5.50 ಲಕ್ಷ ಕೊಟ್ಟಿದ್ದೆ. ಬಳಿಕ 2023ರ ಮೇ 10ರಂದು ₹1 ಕೋಟಿ, ಜೂನ್‌ 10ರಂದು ₹1 ಕೋಟಿ ಕೊಟ್ಟಿದ್ದೆ. ಉಳಿದ ಹಣ ₹1.47 ಕೋಟಿ ಜುಲೈ 19ರಂದು ನೀಡುವ ಒಪ್ಪಂದವಾಗಿತ್ತು. ಉಳಿಕೆ ಹಣ ನೀಡುವೆ, ಜಮೀನು ನನ್ನ ಹೆಸರಿಗೆ ಮಾಡಿಕೊಡುವಂತೆ ವಿಜಯಕುಮಾರ ಹಾಗೂ ಮದನಲಾಲ್‌ ಅವರಿಗೆ ಕೇಳಿದರೆ, ಅವರು ಇಲ್ಲದ ಕ್ಯಾತೆ ತೆಗೆದರು. ಇಬ್ಬರೂ ಸೇರಿ 2022ರಲ್ಲೇ ಈ ಜಮೀನು ಬೇರೆಯವರಿಗೆ ಸೇಲ್‌ ಡೀಡ್‌ ಮಾಡಿಕೊಟ್ಟಿರುವುದು ನಂತರ ತಿಳಿಯಿತು. ನನ್ನೊಂದಿಗೆ ಜಮೀನು ಮಾರಾಟ ಒಪ್ಪಂದ ಮಾಡಿಕೊಂಡು ವಂಚಿಸಿದ್ದಾರೆ’ ಎಂದು ವ್ಯಾಪಾರಿ ಮೊಹ್ಮದ್‌ ಮಾಜ್ ಅಹ್ಮದ್‌ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಅದರನ್ವಯ ನಗರದ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

10 ಮೊಬೈಲ್‌ ಕಳವು: ನಗರದ ಡಬರಾಬಾದ್‌ ಕ್ರಾಸ್‌ ಸಮೀಪದ ಫ್ಲಿಪ್‌ಕಾರ್ಟ್‌ ಕಚೇರಿಯಿಂದ ₹1.16 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 10 ಮೊಬೈಲ್‌ ಕಳುವಾಗಿವೆ.

‘10 ಮೊಬೈಲ್‌ ಫೋನ್‌ಗಳು ಫ್ಲಿಪ್‌ಕಾರ್ಟ್‌ ಕಚೇರಿಯಿಂದ ಪಾರ್ಸಲ್‌ ಮಾಡುವ ಗಾಡಿಯಿಂದ ಆಗಸ್ಟ್‌ 27ರಿಂದ ಆಗಸ್ಟ್‌ 31ರ ನಡುವೆ ಕಳುವಾಗಿವೆ’ ಎಂದು ಫ್ಲಿಪ್‌ಕಾರ್ಟ್‌ ಕಚೇರಿ ಟೀಂ ಲೀಡರ್‌ ಸುನೀಲ್‌ ನಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರ್.ಜಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ ಜೂಜಾಟ: ನಗರದ ಮದೀನಾ ಕಾಲೊನಿಯ ಕಲ್ಯಾಣ ಕ್ರಾಸ್‌ ಸಮೀಪದ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿ ವಿರುದ್ಧ ಕ್ರಮಕೈಗೊಂಡಿರುವ ಪೊಲೀಸರು, ಆರೋಪಿಯಿಂದ ₹4,300 ಜಪ್ತಿ ಮಾಡಿಕೊಂಡಿದ್ದಾರೆ. ಆರ್.ಜಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.