
ಕಲಬುರಗಿ: ‘ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಕಾನೂನು ಬದ್ಧ ದತ್ತು ಪ್ರಕ್ರಿಯೆಯ ಬಗೆಗೆ ಸರಣಿ ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ ಹೇಳಿದರು.
‘ನ.1ರಿಂದ ಜಾಗೃತಿ ಕಾರ್ಯಕ್ರಮಗಳು ಶುರುವಾಗಿವೆ. ನ.3ರಂದು ಶರಣಬಸವೇಶ್ವರ ದೇವಸ್ಥಾನದಲ್ಲಿ ಕಾನೂನು ಬದ್ಧ ದತ್ತು ಪಡೆಯುವಿಕೆ ಬಗೆಗೆ ಅರಿವು ಹಾಗೂ ದೀಪೋತ್ಸವ ಕಾರ್ಯಕ್ರಮ ನಡೆಸಲಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಅಕ್ರಮವಾಗಿ ದತ್ತು ಪಡೆಯುವುದು ಸಮಸ್ಯೆಗೆ ಆಹ್ವಾನಿಸಿಕೊಂಡಂತೆ. ಕದ್ದ ಮಕ್ಕಳು, ನರ್ಸಿಂಗ್ ಹೋಂಗಳಿಂದ ಮಕ್ಕಳನ್ನು ದತ್ತು ಪಡೆಯುವುದು ಅಕ್ರಮ. ಕಾನೂನಿನಡಿ ಅಪರಾಧ. ಅದಕ್ಕೆ ಶಿಕ್ಷೆ ಇದೆ. ಅದರ ಬದಲು ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯಲು ಅವಕಾಶವಿದೆ. ಅದರಿಂದ ದತ್ತು ಮಕ್ಕಳಿಗೂ ಹಾಗೂ ದತ್ತು ಪಡೆದವರಿಗೂ ಕಾನೂನುಬದ್ಧವಾಗಿ ಹಲವು ಹಕ್ಕುಗಳು ದಕ್ಕುತ್ತವೆ. ಜೈವಿಕವಾಗಿ ಪಡೆದ ಮಕ್ಕಳಿಗೆ ಸಿಗುವ ಎಲ್ಲ ಹಕ್ಕುಗಳನ್ನು ದತ್ತು ಮಕ್ಕಳೂ ಪಡೆಯಲು ಅರ್ಹರು’ ಎಂದರು.
‘ಕಾನೂನು ಬದ್ಧ ದತ್ತು ಪ್ರಕ್ರಿಯೆಯ ಭಾಗವಾಗಿ ಜಿಲ್ಲೆಯಲ್ಲಿ 2020–21ರಿಂದ 2025ರ ಅಕ್ಟೋಬರ್ ಅಂತ್ಯದ ತನಕ ಗಂಡು–ಹೆಣ್ಣು ಸೇರಿದಂತೆ ಒಟ್ಟು 54 ಮಕ್ಕಳನ್ನು ದತ್ತು ನೀಡಲಾಗಿದೆ. ಅದರಲ್ಲಿ 9 ಮಕ್ಕಳು ವಿದೇಶಕ್ಕೆ ಹಾಗೂ ಇನ್ನುಳಿದ 45 ಮಕ್ಕಳನ್ನು ಕೇರಳ, ಆಂಧ್ರಪ್ರದೇಶ, ಗೋವಾ, ಛತ್ತೀಸಗಡ ಸೇರಿದಂತೆ ದೇಶದ ವಿವಿಧೆಡೆ ದತ್ತು ನೀಡಲಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ವಿದೇಶಗರೇ ದತ್ತು ಪಡೆಯುವುದು ಹೆಚ್ಚು. ನಮ್ಮ ದೇಶದಲ್ಲಿ ಅಂಥ ಮಕ್ಕಳನ್ನು ದತ್ತು ಪಡೆಯುವವರ ಸಂಖ್ಯೆ ವಿರಳ’ ಎಂದರು.
‘ನವೆಂಬರ್ ತಿಂಗಳಲ್ಲಿ ಕೆಎಸ್‌ಆರ್‌ಪಿ ತುಕಡಿ, ಕೆಕೆಆರ್‌ಟಿಸಿ ಸಂಸ್ಥೆ, ರೈಲ್ವೆ, ಬಸ್‌ಗಳು, ನರ್ಸಿಂಗ್ ಕಾಲೇಜು, ವೈದ್ಯಕೀಯ ಕಾಲೇಜುಗಳಲ್ಲಿ ಜಾಗೃತಿಗೆ ಯೋಜನೆ ರೂಪಿಸಲಾಗಿದೆ. ಇದರೊಟ್ಟಿಗೆ ಬೈಕ್ ರ್‍ಯಾಲಿ, ಮ್ಯಾರಾಥಾನ್, ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಪೋಸ್ಟರ್, ಚರ್ಚ್‌ನಲ್ಲಿ ಕ್ಯಾಂಡಲ್ ಉತ್ಸವ ಸೇರಿದಂತೆ ಸರಣಿ ಅರಿವು ಕಾರ್ಯಕ್ರಮ–ಚಟುವಟಿಕೆಗಳನ್ನು ನಡೆಸಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ್ಯ ಕೆ.ಇಜೇರಿ, ಮಾರ್ಗದರ್ಶಿ ಸಂಸ್ಥೆಯ ಆನಂದ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಬಸವರಾಜ ಟೆಂಗಳಿ, ಭರತೇಶ ಶೀಲವಂತ, ಬಸವರಾಜ ಇದ್ದರು.
‘ಮಮತೆಯ ತೊಟ್ಟಿಲು’
‘ಬೇಡದ ಹಸುಳೆಗಳನ್ನು ಕಸದ ತೊಟ್ಟಿಗೆ ಎಸೆಯುವುದು ಅಮಾನವೀಯ ಕೃತ್ಯ. ಅಂಥ ಹಸುಳೆಗಳನ್ನು ಇಡಲು ಮಮತೆಯ ತೊಟ್ಟಿಲು ಕಾರ್ಯಕ್ರಮ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಐದು ಕಡೆ ಮಮತೆಯ ತೊಟ್ಟಿಲು ಇಡಲಾಗಿದೆ. ಹೊಸದಾಗಿ ಶರಣಬಸವೇಶ್ವರ ದೇವಸ್ಥಾನದಲ್ಲೊಂದು ಮಮತೆಯ ತೊಟ್ಟಿಲು ಅಳವಡಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.