
ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನದ ಬಳಿ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಚೈನು, ₹400 ನಗದು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
ಬಾಪುನಗರ ಮಾಂಗರವಾಡಿ ಗಲ್ಲಿ ನಿವಾಸಿಗಳಾದ ವಿಶಾಲ ಅಲಿಯಾಸ್ ವಿಶು ಉಪಾಧ್ಯ (21) ಹಾಗೂ ರೋಹಿತ ಕಾಳೆ (25) ಬಂಧಿತರು. ಬಂಧಿತರಿಂದ ₹1 ಲಕ್ಷ ಮೌಲ್ಯದ ಚಿನ್ನದ ಚೈನು ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಇನ್‌ಸ್ಪೆಕ್ಟರ್ ದಿಲೀಪ್ ಸಗರ, ಪಿಎಸ್‌ಐ ವಂದನಾ, ಎಎಸ್‌ಐ ಬಸವರಾಜ ಗೋಣಿ, ಸಿಬ್ಬಂದಿ ಕೇಶವ, ಶಶಿಕಾಂತ, ವೆಂಕಟೇಶ, ಗುರುನಾಥ, ನವೀನಕುಮಾರ, ಪರಶುರಾಮ, ವೀರೇಶ ಅವರ ತಂಡವು ಆರೋಪಿಗಳನ್ನು ಬಂಧಿಸಿದೆ.
ಆಟೊದಲ್ಲಿ ಪಯಣಿಸುವಾಗ ಕಳವು
ಕಲಬುರಗಿ: ನಗರದ ಜೇವರ್ಗಿ ರಿಂಗ್ ರಸ್ತೆಯಿಂದ ಸೇಡಂ ರಿಂಗ್ ರಸ್ತೆಗೆ ಮಹಿಳೆಯೊಬ್ಬರು ಆಟೊದಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರ ಸೋಗಿನಲ್ಲಿದ್ದ ಕಳ್ಳರು 25 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ಶಹನಾಜ್ ಲಾಹೋರಿ ಚಿನ್ನಾಭರಣ ಕಳೆದುಕೊಂಡವರು.
‘ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಸಂಬಂಧಿಕರೊಂದಿಗೆ ವಿಜಯಪುರದಿಂದ ನಗರಕ್ಕೆ ಬಂದಿದ್ದೆ. ಆಟೊದಲ್ಲಿ ಜೇವರ್ಗಿ ಕ್ರಾಸ್‌ನಿಂದ ಸೇಡಂ ಕ್ರಾಸ್ ವರೆಗೂ ಆಟೊದಲ್ಲಿ ಪ್ರಯಾಣಿಸುವಾಗ ₹1.25 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಇನ್ನಿಬ್ಬರು ಮಹಿಳೆಯರು ನಮ್ಮೊಂದಿಗೆ ಆಟೊದಲ್ಲಿದ್ದರು’ ಎಂದು ದೂರಿನಲ್ಲಿ ಶಹನಾಜ್ ತಿಳಿಸಿದ್ದಾರೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.