ADVERTISEMENT

ಕಲಬುರಗಿ| ಗೊಬ್ಬರವಾಡಿಯಲ್ಲಿ ಕಲುಷಿತ ನೀರು ಕುಡಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 5:13 IST
Last Updated 2 ಸೆಪ್ಟೆಂಬರ್ 2022, 5:13 IST
ಸಾಯಿಬಣ್ಣ ಭಜಂತ್ರಿ
ಸಾಯಿಬಣ್ಣ ಭಜಂತ್ರಿ   

ಕಮಲಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಗೊಬ್ಬರವಾಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಸಾಯಿಬಣ್ಣ ಭಜಂತ್ರಿ (50) ಶುಕ್ರವಾರ ಮೃತಪಟ್ಟಿದ್ದಾರೆ.

ಮೂರು ದಿನಗಳಿಂದ ಸಾಯಿಬಣ್ಣ, ಅವರ ಇಬ್ಬರು ಪುತ್ರಿಯರಾದ ಭೀಮಾಬಾಯಿ (24) ಮತ್ತು ಜಗದೇವಿಗೆ (22) ವಾಂತಿ ಭೇದಿ ಕಾಣಿಸಿಕೊಂಡಿತ್ತು. ಗುರುವಾರ ಡೊಂಗರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಭೀಮಾಬಾಯಿ ಮತ್ತು ಜಗದೇವಿ ಚೇತರಿಸಿಕೊಂಡು ಗುರುವಾರ ಮನೆಗೆ ತೆರಳಿದ್ದರು. ಸಾಯಿಬಣ್ಣ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

'ಗ್ರಾಮದ 16 ನೀರಿನ ಮೂಲಗಳ ಪೈಕಿ 11 ನೀರಿನ ಮೂಲಗಳು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿದೆ. ಗ್ರಾಮದ ಹಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಔಷಧಿಗಳನ್ನು ವಿತರಿಸಲಾಗಿದೆ. ಶುದ್ಧ ನೀರು ಪೂರೈಸಲಾಗುತ್ತಿದೆ' ಎಂದು ಶಾಸಕ ಬಸವರಾಜ‌ ಮತ್ತಿಮೂಡ‌ ತಿಳಿಸಿದರು.

ADVERTISEMENT

'ಗ್ರಾಮಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಕಳುಹಿಸಿದ್ದೇನೆ. ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತೇನೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.