
ಕಲಬುರಗಿ: ‘ಮುಂದಿನ 50 ವರ್ಷ ಕಲಬುರಗಿ ಹೇಗಿರಬೇಕೆಂಬುದು ಸಂಕಲ್ಪ ಇಟ್ಟುಕೊಂಡಿದ್ದೇವೆ. ಇನ್ನೂ ಎರಡೂವರೆ ವರ್ಷದಲ್ಲಿ ಕಲಬುರಗಿ ನಕ್ಷೆಯನ್ನು ಬದಲಾಯಿಸುತ್ತೇವೆ. ಬೇರೆಯವರಂತೆ ಅಮೃತ ಕಾಲ, ವಿಕಸಿತ ಭಾರತ ಆಗುತ್ತದೆ ಎಂದು ಸುಳ್ಳುಹೇಳುವುದಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕೆಕೆಆರ್‌ಡಿಬಿ ಹಾಗೂ ವಸತಿ ಇಲಾಖೆ ಆಶ್ರಯದಲ್ಲಿ ಪಾಲಿಕೆಯ ಎನ್.ಜಿ.ಬಿ ಪರಿಸರ ಪರಿಹಾರ ನಿಧಿಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ ವಿವಿಧ ಅನುದಾನದ ಅಡಿಯಲ್ಲಿ ಒಟ್ಟು ₹108.82 ಕೋಟಿ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ವಿವಿಧ ಫಲಾನುಭವಿಗಳಿಗೆ ಹಕ್ಕುಪತ್ರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
‘ಕಲಬುರಗಿ ನಗರದಲ್ಲಿ ಮೊದಲ ಬಾರಿಗೆ ನಮ್ಮ ಸರ್ಕಾರ ರೋಡ್ ಆಡಿಟ್ ಮಾಡಿಸಿದೆ. ₹357 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ₹400 ಕೋಟಿ ವೆಚ್ಚದಲ್ಲಿ ವಿದ್ಯುತ್ ಕಂಬಗಳನ್ನು ಬದಲಾಯಿಸುತ್ತೇವೆ. ಕುಡಾದಿಂದ 19 ಜಂಕ್ಷನ್, 3 ಕೆರೆ ಅಭಿವೃದ್ಧಿ ಕಾಮಗಾರಿ ಸಹ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘ಇಡೀ ರಾಷ್ಟ್ರದಲ್ಲಿ ₹52 ಸಾವಿರ ಕೋಟಿ ನೇರವಾಗಿ ಜನರಿಗೆ ನೀಡುವ ಸರ್ಕಾರ ಯಾವುದಾದರೂ ಇದ್ದರೆ ತೋರಿಸಿ. ಜಿಲ್ಲೆಯಲ್ಲಿ 5.67 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ, 6.32 ಲಕ್ಷ ಮನೆಗೆ ಗೃಹಜ್ಯೋತಿ, 30 ಸಾವಿರ ಜನರಿಗೆ ಯುವನಿಧಿ, 20 ಲಕ್ಷ ಫಲಾನುಭವಿಗಳಿಗೆ ಅನ್ನಭಾಗ್ಯ ಕೊಟ್ಟಿದ್ದೇವೆ. ಪ್ರತಿನಿತ್ಯ 1.03 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇವರೆಲ್ಲಾ ಕಾಂಗ್ರೆಸ್‌ನವರಾ? ಬಿಜೆಪಿ, ಜೆಡಿಎಸ್‌ನವರು ಇಲ್ವಾ’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ಸಕಾರಾತ್ಮಕವಾಗಿ ಟೀಕೆ, ವಿರೋಧ ಮಾಡಲಿ. ನ್ಯೂನತೆಗಳಿದ್ದರೆ ಸರಿಪಡಿಸೋಣ. ಆದರೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಕತ್ತೆ, ಕುರಿ ತಂದು ಪ್ರತಿಭಟಿಸಿದರೆ, ಜನರಿಗೆ ಅವಮಾನ ಅಲ್ವಾ?’ ಎಂದು ಕೇಳಿದರು.
ಒಳಚರಂಡಿಗೆ ₹700 ಕೋಟಿ ಕೊಡಿ: ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ನಗರದ ಒಳಚರಂಡಿ ವ್ಯವಸ್ಥೆ 40-50 ವರ್ಷ ಹಳೆಯದಾಗಿದ್ದು, ಇದಕ್ಕೆ ₹700 ಕೋಟಿ ಅವಶ್ಯವಿದೆ. ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಜಲಾಶಯದಿಂದ ನೀರು ತರುವ ಯೋಜನೆ ರೂಪಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.
ಶಾಸಕರಾದ ಎಂ.ವೈ.ಪಾಟೀಲ, ಕನೀಜ್ ಫಾತಿಮಾ, ಎಂಎಲ್ಸಿ ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನಮ್, ಜಿಪಂ ಸಿಇಒ ಭಂವರ್‌ಸಿಂಗ್ ಮೀನಾ, ಎಸ್.ಪಿ ಅಡ್ಡೂರು ಶ್ರೀನಿವಾಸಲು ಉಪಸ್ಥಿತರಿದ್ದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.
2018ರಲ್ಲಿ ಕಟ್ಟಡಗಳ ಕಾಮಗಾರಿ ಮುಗಿದಿದ್ದರೂ ವಿತರಿಸಿರಲಿಲ್ಲ. ಇಂದು 320 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಿದ್ದು ದೊಡ್ಡ ಕೆಲಸ. ಅದರಂತೆ ಕೆಸರಟಗಿ ಬಳಿ ನಿರ್ಮಿಸಿರುವ ಸುಮಾರು 400 ಮನೆಗಳನ್ನೂ ಹಂಚಿಕೆ ಮಾಡಬೇಕು
- ಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಸಚಿವ ಪ್ರಿಯಾಂಕ್ ಖರ್ಗೆ ಅವರ ಶ್ರಮದಿಂದ ₹108.82 ಕೋಟಿ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಆಗಿದೆ. ನಗರದ ಅಭಿವೃದ್ಧಿಗೆ ಇನ್ನೂ ₹500 ಕೋಟಿಯನ್ನು ಸಿಎಂ ಅವರ ಮೂಲಕ ಕೊಡಿಸುವ ವಿಶ್ವಾಸವಿದೆ
-ವರ್ಷಾ ರಾಜೀವ ಜಾನೆ ಮೇಯರ್
ಕಮಕನೂರ ಮಾತಿಗೆ ಪೌರಕಾರ್ಮಿಕರ ಆಕ್ಷೇಪ ಸಮಾರಂಭದಲ್ಲಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡುವಾಗ ‘ಪೌರಕಾರ್ಮಿಕರು 2002ನೇ ಇಸ್ವಿಯಿಂದ ಕೆಲಸಕ್ಕೆ ತಕ್ಕಂತೆ ಪಗಾರ ಕೊಡಬೇಕು. ಪರ್ಮನೆಂಟ್ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದರು. ನಿಮ್ಮ ಕಣ್ಣೀರಿನ ಕೋಡಿ ಪ್ರಿಯಾಂಕ್ ಖರ್ಗೆ ಅವರ ಮನೆವರೆಗೆ ಮುಟ್ಟಿದ ಕಾರಣ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1000 ಜನರಿಗೆ ಪರ್ಮನೆಂಟ್ ಮಾಡಿದ್ದಾರೆ’ ಎಂದರು. ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾಂಗಣದಲ್ಲಿದ್ದ ಪೌರಕಾರ್ಮಿಕರು ‘ನೇರ ಪಾವತಿನೂ ಆಗಿಲ್ಲ. ಪರ್ಮನೆಂಟೂ ಆಗಿಲ್ಲ’ ಎಂದು ಕೂಗಿದರು. ಆಗ ಈ ಪೌರಕಾರ್ಮಿಕರನ್ನು ಪೊಲೀಸರು ಸಭಾಂಗಣದಿಂದ ಹೊರಗಡೆ ಕಳಿಸಿದ ಪ್ರಸಂಗ ಜರುಗಿತು. ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ‘ಮುಂಚೆಯಿಂದ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. 2025ರ ಜೂನ್ 24ರಂದು 935 ಪೌರಕಾರ್ಮಿಕರಿಗೆ ನೇರ ವೇತನ ಪಾವತಿಗೆ ಅನುವು ಮಾಡಿಕೊಡಲಾಗಿದೆ’ ಎಂದು ಸ್ಪಷ್ಟಪಡಿಸಿದರು. ‘ಪ್ರಮುಖ ಬೇಡಿಕೆಯಾದ ನೇರ ನೇಮಕಾತಿ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಕಗ್ಗಂಟಾಗಿತ್ತು. ಈ ಪ್ರಕರಣ ಕೂಡ ಎರಡು ವಾರದ ಹಿಂದೆ ನಮ್ಮ ಪರವಾಗಿದೆ. ಅದರಂತೆ 935ರಲ್ಲಿ 500 ಜನರಿಗೆ ನೇರ ನೇಮಕಾತಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಉಳಿದವರಿಗೆ ಸೇವಾ ಹಿರಿತನ ಆಧಾರದ ಮೇಲೆ ಮುಂಬಡ್ತಿ ನೀಡಲಾಗುವುದು. ಇನ್ನು ಪೌರಕಾರ್ಮಿಕರಿಗೆ ಕುಸನೂರ ಲೇಔಟ್‌ನಲ್ಲಿ 105 ಸೈಟ್‌ಗಳನ್ನು ಜಿಡಿಎ ಮಂಜೂರಾತಿ ಕೊಟ್ಟಿದೆ. ಹೀಗೆ ನಮ್ಮ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಸುಳ್ಳು ಹೇಳಿ ಹಿಂದಿನ ಬಾಗಿಲಿಂದ ಓಡಿ ಹೋಗುವ ಮಂದಿ ನಾವಲ್ಲ’ ಎಂದರು.
ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಹಾನಗರ ಪಾಲಿಕೆಯಿಂದ 2014-15 2018-19 2021-22ನೇ ಸಾಲಿನ ಶೇ 24.10 ಅನುದಾನದಡಿ ಸುಮಾರು ₹90 ಲಕ್ಷ ಕರ್ನಾಟಕ ಗೃಹ ಮಂಡಳಿಗೆ ಪಾವತಿಸಿದ್ದು ಇಂದಿಲ್ಲಿ ಕುಸನೂರ ಕಾಳಗನೂರ ಪ್ರದೇಶದಲ್ಲಿ ನಿವೇಶನ ಪಡೆದ ಆಯ್ದ ಪೌರಕಾರ್ಮಿಕರಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯಿತು. ಬಡವರಿಗೆ ಮನೆ ಹಂಚಿಕೆ ಹಕ್ಕುಪತ್ರ ವಿತರಣೆ: ರಾಜೀವ್ ಆವಾಸ್ ಯೋಜನೆ ಅಡಿಯಲ್ಲಿ ಕೆಸರಟಗಿಯ ಸರ್ವೆ ನಂ 51/7 ರಲ್ಲಿ ಜಿ+3 ಮಾದರಿಯ 320 ಮನೆಗಳನ್ನು ನಿರ್ಮಿಸಲಾಗಿದ್ದು ಫಲಾನುಭವಿಗಳಿಗೆ ಸಚಿವರು ಹಕ್ಕುಪತ್ರ ವಿತರಿಸಿದರು. ಇದಲ್ಲದೆ ಕುಷ್ಠರೋಗದಿಂದ ಗುಣಮುಖ ಹೊಂದಿದ ಸುಮಾರು 51 ಜನರಿಗೆ ನಿವೇಶನ ಹಂಚಿಕೆ ಸಹ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.