ಕಲಬುರಗಿ: ‘ಮನುಷ್ಯ ಸಂಘ ಜೀವಿ. ತಾನು ಬದುಕುವ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಬಯಸುತ್ತಾನೆ. ಆದರೆ, ಕೆಲಸದ ಸ್ಥಳ, ಮನೆಯಲ್ಲಿ ಸರಿಯಾದ ವಾತಾವರಣ ಇಲ್ಲದಿದ್ದಾಗ ಒತ್ತಡ ಸೃಷ್ಟಿಯಾಗಿ ಮನುಷ್ಯನ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾನೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅಭಿಪ್ರಾಯಪಟ್ಟರು.
ನಗರದ ಜಿಮ್ಸ್ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಪ್ರೌಢಶಾಲೆಗಳ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಕುರಿತ ಅರಿತು ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇದರೊಂದಿಗೆ ನಿರುದ್ಯೋಗ, ಬಡತನ, ಮದ್ಯ–ಮೊಬೈಲ್–ಜೂಜಾಟದಂಥ ಚಟಗಳೂ ಜನರ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ರಾಷ್ಟ್ರ–ರಾಷ್ಟ್ರಗಳ ನಡುವೆ ಉದ್ವಿಗ್ನತೆ, ಯುದ್ಧ ಹೆಚ್ಚುತ್ತಿದ್ದು, ದ್ವೇಷ ಬೆಳೆಯುತ್ತಿದೆ. ಇವೂ ಕೂಡ ಮಾನಸಿಕ ಆರೋಗ್ಯದ ಮೇಲೆ ಪರಿಣಾಮಬೀರಬಲ್ಲವು’ ಎಂದರು.
‘ಯಾವುದೇ ಸಮಸ್ಯೆ–ಸವಾಲುಗಳನ್ನು ಎದುರಿಸುವ ಶಕ್ತಿ ಮನುಷ್ಯನಲ್ಲಿದೆ. ಆ ಸಮಸ್ಯೆ–ಸವಾಲುಗಳ ಎದುರು ಎದೆಗುಂದಿ, ಸೋತು ಖಿನ್ನತೆಗೆ ಒಳಗಾದಾಗ ಮನುಷ್ಯನಿಗೆ ಚಿಕಿತ್ಸೆಯ ಅಗತ್ಯ ಬೀಳುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕ್ಷಣೆ ಇದೆ. ಅವರಿಗೆ ಉಚಿತ ಚಿಕಿತ್ಸೆ ಖಾತ್ರಿಪಡಿಸುವುದು, ತಾರತಮ್ಯದಿಂದ ರಕ್ಷಣೆ, ಗೋಪ್ಯತೆ ಕಾಯ್ದುಕೊಳ್ಳುವುದು ಇದರಲ್ಲಿ ಸೇರಿದೆ’ ಎಂದರು.
‘ಸಮಾಜವು ಮಾನಸಿಕ ಅಸ್ವಸ್ಥರನ್ನು ಕೆಟ್ಟದಾಗಿ ನೋಡುವುದು, ಹಿಂಸೆ ಕೊಡುವುದು ಕಾನೂನಿನ ಪ್ರಕಾರ ಅಪರಾಧ. ಇತರರಂತೆ ಅವರಿಗೂ ಸಮಾಜದಲ್ಲಿ ಜೀವಿಸುವ ಹಕ್ಕು ಇದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಮಾತನಾಡಿ, ಮಾನಸಿಕ ಕಾಯಿಲೆಯು ಗಂಭೀರವಾದ ಸ್ವರೂಪ ತಲುಪುವ ಮುನ್ನ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಂದು ಸಮಸ್ಯೆ ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು’ ಎಂದು ಸಲಹೆ ನೀಡಿದರು.
ಜಿಮ್ಸ್ ಆಸ್ಪತ್ರೆಯ ಮನೋರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಭುಕಿರಣ ವಿ.ಗೋಗಿ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಮೊಹಮ್ಮದ್ ಇರ್ಫಾನ್ ವಿಶೇಷ ಉಪನ್ಯಾಸ ನೀಡಿದರು.
ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಅಫಜಲಪುರ ಹಾಗೂ ಆಳಂದ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ 105 ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮನಶಾಸ್ತ್ರಜ್ಞೆ ಸಂತೋಷಿ ಗೋಳೆ ಇದ್ದರು. ಅಂಬಿಕಾ ಪ್ರಾರ್ಥಿಸಿದರು. ನಾಗರಾಜ ಬಿರಾದಾರ ನಿರೂಪಿಸಿದರು.
ಜಾಗೃತಿ ಜಾಥಾ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಮ್ಸ್ ನರ್ಸಿಂಗ್ ವಿದ್ಯಾರ್ಥಿಗಳಿಂದ ನಗರದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ ಜಾಥಾಗೆ ಚಾಲನೆ ನೀಡಿದರು. ಜಾಥಾವು ಜಿಮ್ಸ್‌ನಿಂದ ಎಸ್‌ಟಿಬಿಟಿ ಕ್ರಾಸ್, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್ ಮೂಲಕ ಮರಳಿ ಜಿಮ್ಸ್ ತಲುಪಿತು.
‘ಶಿಕ್ಷಕರು ಜಾಗೃತಿ ಮೂಡಿಸಿ’
ಡಿಡಿಪಿಐ ಸೂರ್ಯಕಾಂತ ಮದಾನೆ ಮಾತನಾಡಿ ‘ವಿದ್ಯಾರ್ಥಿ ಸಮೂಹವೂ ಜಿಗುಪ್ಸೆ ಒತ್ತಡ ಮತ್ತು ನಿರಾಶೆಯಿಂದಾಗಿ ಖಿನ್ನತೆಯಂಥ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದೆ. ಶಿಕ್ಷಕರು ತರಬೇತಿಯನ್ನು ಪಡೆದ ನಂತರ ವಿಶೇಷವಾಗಿ 6ರಿಂದ 10ನೇ ತರಗತಿಯ ಮಕ್ಕಳಲ್ಲಿ ಮಾನಸಿಕ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.