ಕಲಬುರಗಿ: ಕಳೆದ ಎರಡು ವಾರದಿಂದ ಸತತ ಮಳೆ ಸುರಿದು ಉಂಟಾದ ಅತಿವೃಷ್ಟಿ ವಿಕೋಪದಲ್ಲಿ ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆ ಹಾನಿಯಾಗಿರುವ ಹೊಲಗಳಿಗೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣ, ಭೀಮಳ್ಳಿ, ಮೇಳಕುಂದಾ, ಸಾವಳಗಿ ಗ್ರಾಮಗಳ ಅನೇಕ ರೈತರ ಹೊಲಗಳಿಗೆ ಭೇಟಿ ನೀಡಿ, ಮಳೆಯಿಂದಾಗಿ ಕೊಳೆತಿರುವ ತೊಗರಿ ಫಸಲು, ಕಾಳು ಮೊಳಕೆಯಾಗುತ್ತಿರುವ ಹೆಸರು, ಉದ್ದು, ಸೂರ್ಯಕಾಂತಿ ಸೇರಿದಂತೆ ಅನೇಕ ಬೆಳೆಗಳ ಹಾನಿಯನ್ನು ವೀಕ್ಷಿಸಿದರು.
ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಅನುಭವಿಸಿರುವ ರೈತರೊಂದಿಗೆ ಮಾತನಾಡಿ ಅವರ ಸಂಕಷ್ಟ ಆಲಿಸಿದರು.
‘ನಿರಂತರ ಸುರಿದ ಮಳೆಯಿಂದಾಗಿ ಹೆಸರು, ಉದ್ದು, ತೊಗರಿ ಸೇರಿದಂತೆ ಮುಂಗಾರು ಬೆಳೆಗಳು ನಾಶವಾದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದೇವೆ. ಪರಿಹಾರ ನೀಡಬೇಕು’ ಎಂದು ರೈತರು ಶಾಸಕರಿಗೆ ಕೋರಿದರು.
ಬೆಳೆ ಹಾನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಶಾಸಕರು, ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬಿದರು.
ತಹಶೀಲ್ದಾರ್ ಕೆ. ಆನಂದಶೀಲ, ಕೃಷಿ ಇಲಾಖೆ ಅಧಿಕಾರಿ ಅರುಣ ಪಾಟೀಲ, ಮುಖಂಡ ಇಸ್ಮಾಯಿಲ್, ಚಂದ್ರಕಾಂತ್ ಜೀವಣಗಿ, ಸಂತೋಷ ಪಾಟೀಲ ದಣ್ಣೂರ, ರಮೇಶ ಕನಗೊಂಡ ಸಾವಳಗಿ, ಭೀಮಳ್ಳಿಯ ನೀಲಕಂಠ, ಬಸವರಾಜ ಸೇರಿದಂತೆ ಕಾಂಗ್ರೆಸ್ ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.