ADVERTISEMENT

ನಿಲ್ಲದ ಮಳೆ; ಕಲಬುರಗಿಗೆ ಮಲೆನಾಡ ಕಳೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 6:56 IST
Last Updated 20 ಆಗಸ್ಟ್ 2025, 6:56 IST
ಕಲಬುರಗಿ ನಗರದಲ್ಲಿ ಮಂಗಳವಾರ ಜಿಟಿ ಜಿಟಿ ಮಳೆಯಲ್ಲಿ ಜನ ಸಾಗಿದರು     ಪ್ರಜಾವಾಣಿ ಚಿತ್ರ
ಕಲಬುರಗಿ ನಗರದಲ್ಲಿ ಮಂಗಳವಾರ ಜಿಟಿ ಜಿಟಿ ಮಳೆಯಲ್ಲಿ ಜನ ಸಾಗಿದರು     ಪ್ರಜಾವಾಣಿ ಚಿತ್ರ   

ಕಲಬುರಗಿ: ಜಿಲ್ಲೆಯಲ್ಲಿ ಮುಂಗಾರು ಮಳೆ ವ್ಯಾಪಿಸಿದೆ. ಬಿಸಿಲಿಗೆ ಹೆಸರಾದ ಕಲಬುರಗಿಗೆ ಮಲೆನಾಡಿನ ಕಳೆ ತಂದಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಆಗಸದಲ್ಲಿ ದಟ್ಟೈಸಿರುವ ಕಾರ್ಮೋಡಗಳು ಮಳೆ ಸಿಂಚನಗೈಯುತ್ತಿವೆ. ನಿರಂತರ ಮಳೆಗೆ ಇಳೆ ತಂಪಾಗಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ಸೂರ್ಯ ರಜೆ ಹಾಕಿದಂತೆ ಭಾಸವಾಗುತ್ತಿದೆ. ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ನಿತ್ಯ ತಡರಾತ್ರಿ ಆರಂಭವಾಗಿ ಬೆಳಗಿನ ತನಕ ಇರುತ್ತಿದ್ದ ವರುಣನ ಆರ್ಭಟ ಮಂಗಳವಾರ ದಿನವಿಡೀಯೂ ಮುಂದುವರಿದಿತ್ತು. ಕೆಲವೊಮ್ಮೆ ಜಿಟಿಜಿಟಿ ಮತ್ತೆ ಕೆಲವೊಮ್ಮೆ ಬಿರುಸಿನಿಂದ ಸುರಿದ ಮಳೆಯಿಂದ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಹೋಗಲು, ನೌಕರರು–ಕಾರ್ಮಿಕರು ಕೆಲಸಕ್ಕೆ ಹೋಗಲು ಪರದಾಡಿದರು. ಛತ್ರಿ, ಜಾಕೆಟ್‌, ರೇನ್‌ಕೋಟ್‌ಗಳ ಆಶ್ರಯದಲ್ಲಿ ನಿತ್ಯದ ಕೆಲಸಗಳತ್ತ ಮುಖ ಮಾಡಿದರು.

ADVERTISEMENT

ಜಿಟಿಜಿಟಿ ಮಳೆಗೆ ಮಾರುಕಟ್ಟೆಗಳು ಕೆಸರಿನ ಗದ್ದೆಗಳಂತೆ ಭಾಸವಾದವು. ತರಕಾರಿ, ಹೂವು–ಹಣ್ಣು ವ್ಯಾಪಾರಿಗಳು ಗ್ರಾಹಕರಿಲ್ಲದೇ ಪರದಾಡಿದರು.

ಬಿರುಸಿನ ಮಳೆಗೆ ಚರಂಡಿಗಳು ತುಂಬಿ ಹರಿದವು. ರಸ್ತೆಯ ಅಲ್ಲಲ್ಲಿ ನೀರು ನಿಂತು ವಾಹನಗಳ ಸವಾರು ಪರದಾಡಿದರು. ಬಿಸಿಲು ದಕ್ಕಿಸಿಕೊಳ್ಳುವ ಕಲಬುರಗಿ ಜನ ಮಳೆಯಿಂದಾಗಿ ಬಹುತೇಕರು ಹೊರಗೆ ಬರುವುದರಿಂದ ದೂರ ಉಳಿದರು.

ಬೆಳೆ ಹಾನಿ‌ ಪ್ರದೇಶ ವೀಕ್ಷಿಸಿದ ಡಿ.ಸಿ

ಕಲಬುರಗಿ: ಜಿಲ್ಲೆಯ ಕಾಳಗಿ ಹಾಗೂ ಚಿಂಚೋಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆದ ಬೆಳೆ ಹಾನಿಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಂಗಳವಾರ ಪರಿವೀಕ್ಷಣೆ ನಡೆಸಿದರು. ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಸಹ ಪರಿಶೀಲಿಸಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ವಿಪತ್ತು ನಿರ್ವಹಣಾ ಕೆಲಸಗಳನ್ನು ಪ್ರಥಮಾದ್ಯತೆ ಮೇಲೆ ಮಾಡುವಂತೆ ನಿರ್ದೇಶನ ನೀಡಿದರು. ಉಪವಿಭಾಗಾಧಿಕಾರಿಗಳಾದ ಸಾಹಿತ್ಯಾ ಆಲದಕಟ್ಟಿ ಪ್ರಭುರೆಡ್ಡಿ ತಹಶೀಲ್ದಾರ್‌ರಾದ ಸುಬ್ಬಣ್ಣ ಜಮಖಂಡಿ ಪೃಥ್ವಿರಾಜ್‌ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸುಭಾಷ ಬಿರಾದಾರ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

‘ಡೆಂಗಿ ಪ್ರಕರಣಗಳ ನಿರೀಕ್ಷೆ’

‘ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ಸೊಳ್ಳೆ ಹೆಚ್ಚುವ ಸಾಧ್ಯತೆಗಳಿದ್ದು ಡೆಂಗಿ ಪ್ರಕರಣಗಳು ಹೆಚ್ಚುವ ನಿರೀಕ್ಷೆಗಳಿವೆ. ಹೀಗಾಗಿ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ಮಕ್ಕಳು ವೃದ್ಧರು ಮೈತುಂಬಾ ಬಟ್ಟೆ ಧರಿಸಬೇಕು. ಯುವಜನರೂ ಸೇರಿದಂತೆ ಎಲ್ಲರೂ ಸೊಳ್ಳೆ ಪರದೆ ಸೊಳ್ಳೆ ನಿರೋಧಕ ಮುಲಾಮುಗಳನ್ನು ಬಳಸಬೇಕು. ಮಳೆಯೊಂದಿಗೆ ಚಳಿಯೂ ಇರುವ ಕಾರಣ ಮಕ್ಕಳು ಹಾಗೂ ವೃದ್ಧರ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ ಸಲಹೆ ನೀಡಿದ್ದಾರೆ.

ಕಲಬುರಗಿ ನಗರದಲ್ಲಿ ಮಂಗಳವಾರ ಜಿಟಿ ಜಿಟಿ ಮಳೆಯ ನಡುವೆಯೇ ಗ್ರಾಹಕರಿಗಾಗಿ ಕಾದ ವ್ಯಾಪಾರಿ
ಕಲಬುರಗಿ ನಗರದಲ್ಲಿ ಮಂಗಳವಾರ ಜಿಟಿ ಜಿಟಿ ಮಳೆಯಲ್ಲೇ ವಾಹನಗಳ ಸವಾರರು ಸಾಗಿದರು     ಪ್ರಜಾವಾಣಿ ಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.