ADVERTISEMENT

ಕಲಬುರಗಿ | ಮಹಿಳೆಗೆ ತೊಂದರೆ: ಸ್ಮಶಾನದಲ್ಲಿ ವ್ಯಕ್ತಿ ಕೊಲೆ

ಕಲಬುರಗಿಯಲ್ಲಿ ಕೊಂದು ರಾಯಚೂರಿನ ಕೃಷ್ಣಾ ನದಿಗೆ ಶವ ಎಸೆದ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:47 IST
Last Updated 7 ಜುಲೈ 2025, 5:47 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಕಲಬುರಗಿ: ಮಹಿಳೆಗೆ ತೊಂದರೆ ನೀಡಿದ್ದ ವ್ಯಕ್ತಿಯೊಬ್ಬರನ್ನು ಸ್ಮಶಾನಕ್ಕೆ ಕರೆದೊಯ್ದು ಕೊಲೆ ಮಾಡಿ, ರಾಯಚೂರಿನ ಕೃಷ್ಣಾ ನದಿಯಲ್ಲಿ ಶವ ಎಸೆದ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ನಗರದ ನಿವಾಸಿ ರಾಘವೇಂದ್ರ ನಾಯಕ (39) ಕೊಲೆಯಾದವರು. ಆತನ ಪತ್ನಿ ಸುರೇಖಾ ಅವರು ನೀಡಿದ ದೂರಿನ ಅನ್ವಯ ಕೃಷ್ಣ ನಗರದ ಗುರುರಾಜ ನೆಲೋಗಿ (36), ನಿಸರ್ಗ ಕಾಲೊನಿಯ ಅಶ್ವಿನಿ ಅಲಿಯಾಸ್ ತನು ರಾಜಶೇಖರ (26), ಕಪನೂರಿನ ಲಕ್ಷ್ಮಿಕಾಂತ ಮಾಲಿ ಪಾಟೀಲ (28), ಅಭಿಷೇಕ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಣ್ಣ–‍ಪುಟ್ಟ ಕೆಲಸ ಮಾಡುತ್ತಿದ್ದ ರಾಘವೇಂದ್ರ ಅವರು ಆಗಾಗ 8–10 ದಿನಗಳು ಮನೆ ಬಿಟ್ಟು ಹೋಗಿ, ಬಳಿಕ ವಾಪಸ್ ಬರುತ್ತಿದ್ದರು. ಅಂತೆಯೇ, 2025ರ ಮಾರ್ಚ್‌ 12ರ ಬೆಳಿಗ್ಗೆ ಕೆಲಸಕ್ಕೆ ಹೊಗುವುದಾಗಿ ಮನೆಯಿಂದ ಹೊರ ಹೋವರು ಮತ್ತೆ ಮರಳಲಿಲ್ಲ. ಪತ್ನಿ ಸಹ ಕೆಲವು ದಿನಗಳ ಬಳಿಕ ಬರಬಹುದು ಎಂದುಕೊಂಡು ಸುಮ್ಮನೆ ಇದ್ದರು. ಎರಡು ತಿಂಗಳು ಕಳೆದರೂ ವಾಪಸ್ ಬಾರದೆ ಇದ್ದಾಗ ಮೇ 25ರಂದು ಗಂಡ ಕಾಣೆಯಾದ ಬಗ್ಗೆ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಾಣೆಯಾದ ರಾಘವೇಂದ್ರ ಅವರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಆತ ಕೊಲೆಯಾಗಿ, ಕೃಷ್ಣಾ ನದಿಗೆ ಎಸೆದಿದ್ದು ಗೊತ್ತಾಗಿದೆ. ಸುರೇಖಾ ಅವರನ್ನು ಠಾಣೆಗೆ ಕರೆಯಿಸಿಕೊಂಡ ಪೊಲೀಸರು ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸ್ಮಶಾನದಲ್ಲಿ ಕೊಲೆ: ರಾಘವೇಂದ್ರ ಅವರು ಅಶ್ವಿನಿ ಎಂಬುವವರಿಗೆ ತೊಂದರೆ ಕೊಟ್ಟಿದ್ದರು. ಈ ಬಗ್ಗೆ ಆಕೆ ಗುರುರಾಜಗೆ ತಿಳಿಸಿದ್ದರು. ಗುರುರಾಜ ಮತ್ತು ಆತನ ಸಂಗಡಿಗರು ಮಾರ್ಚ್ 12ರಂದು ನಗರದ ಸೂಪರ್‌ ಮಾರ್ಕೆಟ್‌ನ ಲಾಡ್ಜ್‌ ಒಂದರಿಂದ ರಾಘವೇಂದ್ರ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು, ಕೀರ್ತಿ ನಗರದ ಸ್ಮಶಾನಕ್ಕೆ ಕರೆದೊಯ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ಮಶಾನದಲ್ಲಿ ರಾಘವೇಂದ್ರ ಅವರ ಕಪಾಳಕ್ಕೆ ಅಶ್ವನಿ ಅವರು ಹೊಡೆದರು. ಆ ಬಳಿಕ ಗುರುರಾಜ ಹಾಗೂ ಆತನ ಸಂಗಡಿಗರು ಬಡಿಗೆಗಳಿಂದ ರಾಘವೇಂದ್ರ ಮೇಲೆ ಮನಸೋ ಇಚ್ಛೆ ಹೊಡೆದಿದ್ದರಿಂದ ಮೃತಪಟ್ಟಿದ್ದಾರೆ. ಕೊಲೆ ನಂತರ ಶವವನ್ನು ಕಾರಿನಲ್ಲಿ ಹಾಕಿಕೊಂಡು ರಾಯಚೂರು ಜಿಲ್ಲೆಯ ಶಕ್ತಿ ನಗರ ಸಮೀಪದ ಸೇತುವೆ ಮೇಲಿಂದ ಕೃಷ್ಣಾ ನದಿಯಲ್ಲಿ ಶವ ಎಸೆದಿದ್ದಾರೆ. ಶವ ಸಿಕ್ಕ ಬಳಿಕ ಶಕ್ತಿ ನಗರ ಠಾಣೆಯ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು, ಶವ ಸಂಸ್ಕಾರವೂ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.