ADVERTISEMENT

ಕಲಬುರಗಿ | ಕೊಲೆ ಪ್ರಕರಣ: 24 ಗಂಟೆಯಲ್ಲೇ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 6:54 IST
Last Updated 4 ನವೆಂಬರ್ 2025, 6:54 IST
ಸಚಿನ್ ಡೊಂಗರಗಾಂವ
ಸಚಿನ್ ಡೊಂಗರಗಾಂವ   

ಕಲಬುರಗಿ: ಇಲ್ಲಿನ ವಿಜಯನಗರದಲ್ಲಿ ಯುವಕನೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ನಡೆದ 24 ಗಂಟೆಗಳಲ್ಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಲಬುರಗಿಯ ವಿಜಯನಗರದ ನಿವಾಸಿ ರಿತೇಶ (30) ಕೊಲೆಗೀಡಾದ ಯುವಕ. ತಾಯಿಯೊಂದಿಗೆ ಬೆಂಗಳೂರಿನ ಬಂಡೆ ಬೊಮ್ಮಸಂದ್ರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರಿತೇಶ ಎರಡು ದಿನದ ಹಿಂದೆ ಕಲಬುರಗಿಗೆ ಬಂದಿದ್ದ. ನ.2ರಂದು ಮಧ್ಯಾಹ್ನ ಅಪರಿಚಿತರು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕುರಿತು ಯುವಕನ ಸಹೋದರಿ ರೋಶನಿ ಜಗನ್ನಾಥ ರಾಂಪೂರೆ ನೀಡಿದ ದೂರಿನಂತೆ ರಾಘವೇಂದ್ರ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನತ್ತಿದ್ದ ನಗರ ಪೊಲೀಸರು ಸಚಿನ ಡೊಂಗರಗಾಂವ, ಶ್ರೀಕಾಂತ ಭಾವಿಕಟ್ಟಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಕಾರ್ಯಾಚರಣೆಯಲ್ಲಿ ಆರ್​ಜಿ ನಗರ ಠಾಣೆ ಪಿಐ ಕುಬೇರ ರಾಯಮಾನೆ ನೇತೃತ್ವದಲ್ಲಿ ಪಿಎಸ್​ಐ ಯಶೋಧಾ ಕಟಕೆ, ಎಎಸ್​ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿ ಮಲ್ಲನಗೌಡ, ತಾರಾಸಿಂಗ್​ ರಾಠೋಡ​, ಬಸವರಾಜ, ಅರೇಶ, ಆತ್ಮಕುಮಾರ, ಉಮೇಶ, ಶರಣಬಸವ, ರಾಜಕುಮಾರ, ತುಕಾರಾಮ ಕಾರ್ಯಾಚರಣೆ ನಡೆಸಿ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಕಾಂತ ಭಾವಿಕಟ್ಟಿ

ಸಹೋದರಿ ಪ್ರೀತಿಸಿದ್ದಕ್ಕೆ ಕೊಲೆ

ಕೊಲೆಯಾದ ರಿತೇಶ ಮತ್ತು ಬಂಧಿತ ಸಚಿನ್ ಸ್ನೇಹಿತರು. ಸಚಿನ್‌ನ ಸಹೋದರಿಯನ್ನು ರಿತೇಶ ಪ್ರೀತಿಸುತ್ತಿದ್ದ. ತನ್ನ ತಂಗಿಯಿಂದ ದೂರ ಇರುವಂತೆ ಎಷ್ಟು ಬಾರಿ ತಿಳಿ ಹೇಳಿದರೂ ರಿತೇಶ ಕೇಳಿರಲಿಲ್ಲ. ನ.2ರಂದು ತಂಗಿಯ ಜತೆಗೆ ಕಾಣಿಸಿಕೊಂಡಿದ್ದರಿಂದ ಸಚಿನ್ ಸಹೋದರಿಯನ್ನು ಮನೆಗೆ ಕಳುಹಿಸಿ ಆತನ ಸ್ನೇಹಿತ ಶ್ರೀಕಾಂತ ಭಾವಿಕಟ್ಟಿ ಜೊತೆ ಕೂಡಿಕೊಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ನಗರ ಪೊಲೀಸ್​ ಕಮಿಷನರ್ ಶರಣಪ್ಪ ಎಸ್​.ಡಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.