ADVERTISEMENT

ಕಲಬುರಗಿ | ರಾಷ್ಟ್ರೀಯ ಮಾನ್ಯತೆಯ ಬ್ಯಾಸ್ಕೆಟ್‌ಬಾಲ್ ಅಂಗಣ

ಕಲಬುರಗಿಯಲ್ಲಿ ₹1.25 ಕೋಟಿ ವೆಚ್ಚದಲ್ಲಿ ನಿರ್ಮಾಣ; ಬಹದಿನಗಳ ಕನಸು ನನಸು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:37 IST
Last Updated 17 ಆಗಸ್ಟ್ 2025, 6:37 IST
ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿದ್ದ ಹಳೆಯ ಬ್ಯಾಸ್ಕೆಟ್‌ಬಾಲ್‌ ಅಂಗಣ
ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿದ್ದ ಹಳೆಯ ಬ್ಯಾಸ್ಕೆಟ್‌ಬಾಲ್‌ ಅಂಗಣ   

ಕಲಬುರಗಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಮಾನ್ಯತೆಯಿರುವ ಬ್ಯಾಸ್ಕೆಟ್‌ಬಾಲ್‌ ಅಂಗಣ ನಿರ್ಮಾಣವಾಗುತ್ತಿದ್ದು, ಬ್ಯಾಸ್ಕೆಟ್‌ಬಾಲ್ ಪ್ರೇಮಿಗಳ ಬುಹುದಿನಗಳ ಕನಸು ಶೀಘ್ರದಲ್ಲಿಯೇ ನನಸಾಗಲಿದೆ.

ಇಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು ₹1.25 ಕೋಟಿ ವೆಚ್ಚದಲ್ಲಿ  ಸಿಂಥೆಟಿಕ್‌ ಬ್ಯಾಸ್ಕೆಟ್‌ಬಾಲ್‌ನ ಎರಡು ಅಂಗಣಗಳು ನಿರ್ಮಾಣವಾಗಲಿವೆ. ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್‌)ವು ಕಾಮಗಾರಿಯನ್ನು ನಿರ್ವಹಿಸುತ್ತಿದೆ.

‘ಜಿಲ್ಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ಅಂಗಣ ನಿರ್ಮಾಣ ಆಗುತ್ತಿರುವುದು ಸಂತಸದ ಸಂಗತಿ. ಜಿಲ್ಲೆಯಲ್ಲಿ ಬಹಳಷ್ಟು ಬ್ಯಾಸ್ಕೆಟ್‌ಬಾಲ್ ಪ್ರತಿಭೆಗಳಿದ್ದಾರೆ. ಆದರೆ ಸೂಕ್ತ ಸೌಲಭ್ಯಗಳಿರಲಿಲ್ಲ. ಇಲ್ಲಿನ ಪ್ರತಿಭೆಗಳು ತರಬೇತಿಗಾಗಿ ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ತೆರಳುತ್ತಾರೆ. ಈಗ ಇಲ್ಲಿಯೇ ರಾಷ್ಟ್ರೀಯ ಮಾನ್ಯತೆಯಿರುವ ಅಂಗಣ ನಿರ್ಮಾಣ ಆಗುತ್ತಿರುವುದರಿಂದ ಪ್ರತಿಭೆಗಳಿಗೆ ಅನುಕೂಲವಾಗುತ್ತದೆ’ ಎಂದು ಬ್ಯಾಸ್ಕೆಟ್‌ಬಾಲ್‌ ಆಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬ್ಯಾಸ್ಕೆಟ್‌ಬಾಲ್‌ ಅಂಗಣದ ಕಾಮಗಾರಿ ಆರಂಭವಾಗಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ. ಮೊದಲಿದ್ದ ಅಂಗಣಗಳು ಸಮಮಟ್ಟದಲ್ಲಿ ಇರಲಿಲ್ಲ. ಸಿಮೆಂಟ್‌ ಕಾಂಕ್ರೀಟ್‌ನಿಂದ ನಿರ್ಮಿಸಲಾಗಿತ್ತು. ಅಂಗಣಗಳು ಮೇಲ್ದರ್ಜೆಯ(ರಾಜ್ಯ, ರಾಷ್ಟ್ರೀಯ) ಆಟಗಾರರಿಗೆ ಅನುಕೂಲವಾಗಿರಲಿಲ್ಲ. ಅವುಗಳಿಂದ ಮೊಣಕಾಲು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ ಎರಡೂ ಅಂಗಣಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಮೊದಲಿದ್ದ ಅಂಗಣಗಳನ್ನು ತೆರವುಗೊಳಿಸಿ, ಮರುಮ್‌ ಹಾಕಿ, ಸಮತಟ್ಟು ಮಾಡಿಕೊಳ್ಳಲಾಗುತ್ತದೆ. ಬಳಿಕ ವೈಟ್‌ಮಿಕ್ಸ್‌(ಖಡಿ, ಎಂ ಸ್ಯಾಂಡ್‌ ಹಾಗೂ ನೀರಿನ ಮಿಶ್ರಣ) ಅನ್ನು ಹರಡಲಾಗುತ್ತದೆ. ಬಳಿಕ ಸರಳುಗಳನ್ನು ಬಳಸಿ, ಸಿಮೆಂಟ್‌ ಕಾಂಕ್ರೀಟ್‌ ಹಾಕಲಾಗುತ್ತದೆ. ಈ ಹಂತದಲ್ಲಿ ಎರಡೂ ಅಂಗಣಗಳಿಗೂ ರಾಷ್ಟ್ರೀಯ ಮಟ್ಟದಲ್ಲಿ ಬಳಸುವಂತಹ ಸಿಂಥೆಟಿಕ್‌ ಅಂಗಣ ನಿರ್ಮಿಸಲಾಗುತ್ತದೆ. ಸಿಂಥೆಟಿಕ್‌ ಕಾಮಗಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಎರಡು ಅಂಗಣಗಳ ಮಧ್ಯದಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಾಣವಾಗಲಿದೆ. ಇದೇ ವೇಳೆ ಹೊಸ ಪೋಲ್‌ ಹಾಗೂ ರಾತ್ರಿ ವೇಳೆ ಆಡಲು ಹೈಮಾಸ್ಟ್‌ ದೀಪಗಳನ್ನು ಕೂಡ ಹಾಕಲಾಗುವುದು’ ಎಂದು ಗುತ್ತಿಗೆದಾರರು ಮಾಹಿತಿ ನೀಡಿದರು. 

ಬ್ಯಾಸ್ಕೆಟ್‌ಬಾಲ್‌ ನಿರ್ಮಾಣ ಕಾಮಗಾರಿ‌ ಕುರಿತು ಮಾಹಿತಿ ಪಡೆಯಲು ಸಹಾಯಕ ಎಂಜಿನಿಯರ್ ಸೌರಭ ಅವರಿಗೆ ಹಲವು ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಮೊದಲು ಸಿಮೆಂಟ್ ಮೇಲ್ಮೈನ ಹೊರ ಅಂಗಣವಿತ್ತು. ಈಗ ಹೊಸದಾಗಿ ಸಿಂಥೆಟಿಕ್ ಟರ್ಫ್‌ ಹೊಂದಿರುವ ನೂತನ ಸೌಲಭ್ಯಗಳನ್ನು ಹೊಂದಿರಲಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭೆಗಳಿದ್ದು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ‌ ಸಾಧನೆಗೆ ಸ್ಫೂರ್ತಿಯಾಗುತ್ತದೆ
ಪ್ರವೀಣ ಪುಣೆ, ಬ್ಯಾಸ್ಕೆಟ್ ಬಾಲ್ ತರಬೇತುದಾರ
ನಾನು ಬೆಂಗಳೂರು ಸೇರಿದಂತೆ ಹಲವು ಟೂರ್ನಿಗಳಲ್ಲಿ ಆಡಿದ್ದೇನೆ. ಆದರೆ ಬೆಂಗಳೂರಲ್ಲಿ ಇರುವಂತೆ ನಮ್ಮೂರಲ್ಲೂ ಸಿಂಥೆಟಿಕ್‌ ಬ್ಯಾಸ್ಕೆಟ್‌ಬಾಲ್‌ ಅಂಗಣ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದೆ. ಈ ನಿರ್ಮಾಣವಾಗುತ್ತಿರುವುದು ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಿದೆ
ಅಭಿಷೇಕ, ಆಟಗಾರ  
ಸಿಂಥೆಟಿಕ್‌ ಬ್ಯಾಸ್ಕೆಟ್‌ ಬಾಲ್‌ ಅಂಗಣ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ಸಿಮೆಂಟ್‌ ಅಂಗಣದಲ್ಲಿ ಆಡುವುದರಿಂದ ಮೊಣಕಾಲು ನೋವು ಬರುತ್ತದೆ. ಆದರೆ ಸಿಂಥೆಟಿಕ್‌ ಅಂಗಣ ಹಾಗಾಗುವುದಿಲ್ಲ. ಅಲ್ಲದೆ ಹೊಸಬರಿಗೆ ಪ್ರೇರಣೆಯಾಗುತ್ತದೆ
ಸುರೇಶ ಪವಾರ, ಆಟಗಾರ
ಕಾಮಗಾರಿ ಪೂರ್ಣಗೊಂಡ ಬಳಿಕ ಅಂಗಣ ಹೀಗಿರಲಿದೆ(ಸಾಂದರ್ಭಿಕ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.