ADVERTISEMENT

ಕಲಬುರ್ಗಿ: ಉತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿಗೆ ಸುರೇಖಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 21:05 IST
Last Updated 21 ಆಗಸ್ಟ್ 2020, 21:05 IST
ಸುರೇಖಾ ಜಗನ್ನಾಥ
ಸುರೇಖಾ ಜಗನ್ನಾಥ   

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಬಂದರವಾಡದ ಸರ್ಕಾರಿಬಾಲಕಿಯರ ಶಾಲೆಯ ವಿಜ್ಞಾನ ಸಹ ಶಿಕ್ಷಕಿ ಸುರೇಖಾ ಜಗನ್ನಾಥ ಅವರನ್ನು ಪ್ರಸಕ್ತಿ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ವಂದಲಿ ಗ್ರಾಮದವರಾದ ಸುರೇಖಾ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ. ಪದವಿ ಪಡೆದಿದ್ದಾರೆ. ಚಿತ್ತಾಪುರ ತಾಲ್ಲೂಕಿನ ಕೊಡದೂರು ಶಾಲೆಯಲ್ಲಿ 2004ರಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿದ ಸುರೇಖಾ ಬಳಿಕ ಅಫಜಲಪುರ ತಾಲ್ಲೂಕಿನ ಗೊಬ್ಬುರ ಸರ್ಕಾರಿ ಶಾಲೆಯಲ್ಲಿಯೂ ಸೇವೆ ಸಲ್ಲಿಸಿ ಬಳಿಕ ಬಂದರವಾಡ ಶಾಲೆಗೆ ವರ್ಗಾವಣೆಯಾದರು.

ವಿಜ್ಞಾನದ ಬಗ್ಗೆ ಆಸಕ್ತಿಕರವಾಗಿ ಪಾಠ ಮಾಡುವ ಸುರೇಖಾ ಅವರು ತಮಿಳುನಾಡಿನ ಕಾರುಣ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಸಸ್ಯಶಾಸ್ತ್ರದ ಕುರಿತಾದ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಪ್ರಬಂಧ ಮಂಡಿಸಿದ್ದಾರೆ. 2016ರಲ್ಲಿ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ, 2017ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ, ರಾಜೀವಗಾಂಧಿ ಸ್ಮಾರಕ ರಾಜ್ಯಮಟ್ಟದ ಅತ್ಯುತ್ತಮ ವಿಜ್ಞಾನ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ADVERTISEMENT

ರಾಜ್ಯದಲ್ಲಿ ಇಬ್ಬರು ಶಿಕ್ಷಕರನ್ನು ಮಾತ್ರ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸುರೇಖಾ ಅವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್ ಅವರೂ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.