ADVERTISEMENT

ಕಲಬುರಗಿ | 10 ತಿಂಗಳಲ್ಲಿ ಹೊಸ ಬಸ್ ನಿಲ್ದಾಣ ಸಿದ್ಧ: ಬಿ.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:46 IST
Last Updated 7 ಸೆಪ್ಟೆಂಬರ್ 2025, 2:46 IST
ಆಳಂದ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾ‍‍‍ಪನೆ ನೆರವೇರಿಸಿದರು. ಸಾಗರ್ ಖಂಡ್ರೆ, ತಿಪ್ಪಣ್ಣಪ್ಪ ಕಮಕನೂರ, ಬಿ.ಆರ್. ಪಾಟೀಲ, ಫಿರ್ದೋಸ್ ಅನ್ಸಾರಿ ಇತರರು ಭಾಗವಹಿಸಿದ್ದರು
ಆಳಂದ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾ‍‍‍ಪನೆ ನೆರವೇರಿಸಿದರು. ಸಾಗರ್ ಖಂಡ್ರೆ, ತಿಪ್ಪಣ್ಣಪ್ಪ ಕಮಕನೂರ, ಬಿ.ಆರ್. ಪಾಟೀಲ, ಫಿರ್ದೋಸ್ ಅನ್ಸಾರಿ ಇತರರು ಭಾಗವಹಿಸಿದ್ದರು   

ಆಳಂದ: ‘ಚಿಕ್ಕದಾಗಿದ್ದ ಪಟ್ಟಣದ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ ಇನ್ನಷ್ಟು ಖಾಲಿ ಜಾಗವನ್ನು ಬಳಸಿಕೊಂಡು ₹ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ಮುಂದಿನ 10 ತಿಂಗಳಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದಲೇ ಉದ್ಘಾಟಿಸಲಾಗುವುದು’ ಎಂದು ಶಾಸಕ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ತಿಳಿಸಿದರು.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ಬಸ್ ನಿಲ್ದಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ವೀರಶೈವ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಆಳಂದದಿಂದ ನೆರೆ ರಾಜ್ಯಕ್ಕೆ ಪ್ರಯಾಣಿಕರ ಓಡಾಟ ಹೆಚ್ಚಿದೆ. ಹೀಗಾಗಿ ಆಳಂದ ಘಟಕಕ್ಕೆ ಹೆಚ್ಚುವರಿಯಾಗಿ 20 ಬಸ್ ನೀಡಬೇಕು ಮತ್ತು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಗಡಿ ಭಾಗದವರೆಗೂ ಎಲ್ಲಾ ಬಗೆಯ ಬಸ್‌ನಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.

ADVERTISEMENT

‘ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ, ನಿಂಬಾಳ, ಹಿರೊಳ್ಳಿ, ಖಜೂರಿ, ಕಡಗಂಚಿ ಗ್ರಾಮಗಳಲ್ಲಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಿಸಬೇಕು’ ಎಂದರು. 

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಆಳಂದ ಬಸ್ ನಿಲ್ದಾಣಕ್ಕೆ ₹ 5 ಕೋಟಿ ಅನುದಾನ ನೀಡಲಾಗಿದೆ. ಇನ್ನೂ ಅನುದಾನ ಹೆಚ್ಚು ಬೇಕಾದರೆ ಕೆಕೆಆರ್‌ಡಿಬಿಯಿಂದ ಒದಗಿಸಲಾಗುವುದು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ ಅವರಿಗೆ ನಿರ್ದೇಶನ ನೀಡಿದರು.

‘ಅನುಭವಿ ಶಾಸಕ ಬಿ‌.ಆರ್.ಪಾಟೀಲ ಅವರಿಗೆ ಸಚಿವ ಸ್ಥಾನ ಶೀಘ್ರ ದೊರೆಯಲಿ’ ಎಂದು ಆಶಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸುಶೀಲಾ, ‘1.22 ಎಕರೆ ಪ್ರದೇಶದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ತಾಲ್ಲೂಕಿನ ಸಾರಿಗೆ ಸಂಪರ್ಕ ಉತ್ತಮಗೊಳ್ಳಲಿದೆ’ ಎಂದರು.

ಬೀದರ್ ಸಂಸದ ಸಾಗರ ಖಂಡ್ರೆ, ಆಳಂದ ಪುರಸಭೆ ಅಧ್ಯಕ್ಷ ಫಿರ್ದೋಸ್‌ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ್, ಸದಸ್ಯೆ ಸ್ಮಿತಾ ಚಿಟಗುಪ್ಪಿಕರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪುತ್ರ ಪಾಟೀಲ ಮುನ್ನೊಳ್ಳಿ, ಕೆಕೆಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಪಾಟೀಲ, ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ, ತಹಶೀಲ್ದಾರ್ ಅಣ್ಣಾರಾವ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ಮಾನಪ್ಪ ಕಟ್ಟಿಮನಿ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಕಲಬುರಗಿ ವಿಭಾಗ–2ರ ವಿಭಾಗೀಯ ನಿಯಂತ್ರಣಾಧಿಕಾರಿ ಸುನಿಲ್ ಕುಮಾರ ಚಂದರಗಿ ಸ್ವಾಗತಿಸಿದರು. ವೆಂಕಟೇಶ ಜನಾದ್ರಿ‌ ವಂದಿಸಿದರು.

‘ಮೃತ ಸಿಬ್ಬಂದಿಗೆ ₹ 1 ಕೋಟಿ ವಿಮೆ’

‘ಸಾರಿಗೆ ನೌಕರರ ಭದ್ರತೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಕೆಎಸ್‌ಆರ್‌ಟಿಸಿ ಹೊರತು ಪಡಿಸಿ ರಾಜ್ಯದ ಉಳಿದ ಸಾರಿಗೆ ನಿಗಮಗಳ ಸಿಬ್ಬಂದಿಗೆ ₹ 1 ಕೋಟಿ ವಿಮೆ ಮಾಡಿಸಲಾಗಿದೆ. ಗ್ರ್ಯಾಚುಯಿಟಿ ಮೊತ್ತವನ್ನು ₹ 10 ಲಕ್ಷಕ್ಕೆ ಏರಿಸಲಾಗಿದೆ.‌ ಬಸ್ ಅಪಘಾತದಲ್ಲಿ ಪ್ರಯಾಣಿಕರರು ಮೃತರಾದಲ್ಲಿ ಅವರ ಅವಲಂಬಿತರಿಗೆ ₹ 10 ಲಕ್ಷ‌ ಪರಿಹಾರ ಒದಗಿಸಲಾಗುತ್ತಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಶಕ್ತಿ ಯೋಜನೆಗೆ ಇದುವರೆಗೆ 517 ಕೋಟಿಗೂ ಅಧಿಕ ಬಾರಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು ಇದಕ್ಕಾಗಿ ಸರ್ಕಾರ ₹ 13 ಸಾವಿರ ಕೋಟಿ ಭರಿಸಿದೆ. ನಿಗಮದ ಪ್ರಿಮಿಯಂ ಮತ್ತು ಅಂತರರಾಜ್ಯ ಬಸ್‌ಗಳಲ್ಲಿ ಮಹಿಳೆಯರ ಉಚಿತ‌ ಪ್ರಯಾಣಕ್ಕೆ ಅವಕಾಶ ಒದಗಿಸಿಲ್ಲ. ಈ ಬಸ್‌ಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಶಾಸಕ‌ ಬಿ.ಆರ್. ಪಾಟೀಲ ಅವರ ಕೋರಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು’ ಎಂದರು.

36 ಜನರಿಗೆ ನೇಮಕಾತಿ ಆದೇಶ

ಕೆಕೆಆರ್‌ಟಿಸಿಯ ಬಳ್ಳಾರಿ ರಾಯಚೂರು ಬೀದರ್ ಜಿಲ್ಲೆಯಲ್ಲಿ ಅಕಾಲಿಕ ನಿಧನ ಹೊಂದಿದ 36 ನೌಕರರ ಅವಲಂಬಿತರಿಗೆ ಅನುಕಂಪದ ಅಧಾರದ ಮೇಲೆ ನೇಮಕಾತಿ ಪತ್ರವನ್ನು ಸಚಿವ ರಾಮಲಿಂಗಾರೆಡ್ಡಿ ಇದೇ ಸಂದರ್ಭದಲ್ಲಿ ವಿತರಿಸಿದರು. ಬಸ್‌ನಲ್ಲಿ ಪ್ರಯಾಣ ಮಾಡುವಾಗ ನಡೆದ ಅವಘಡದಲ್ಲಿ ಮೃತರಾದ ಇಬ್ಬರು ಪ್ರಯಾಣಿಕರ ಅವಲಂಬಿತರಿಗೆ ತಲಾ ₹ 10 ಲಕ್ಷ ಅಪಘಾತ ಪರಿಹಾರದ ಚೆಕ್ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.