ADVERTISEMENT

ಜನಪ್ರತಿನಿಧಿಗಳ ನಿರ್ಲಕ್ಷ್ಯ: ದುರಸ್ತಿಗಾಗಿ ಕಾಯುತ್ತಿರುವ ಮೊಹಮ್ಮದಿ ಚೌಕ್‌ ರಸ್ತೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:27 IST
Last Updated 9 ಜನವರಿ 2026, 6:27 IST
ಕಲಬುರಗಿಯ ನ್ಯೂ ರಾಘವೇಂದ್ರ ಕಾಲೊನಿ ರಸ್ತೆಯ ದುಃಸ್ಥಿತಿ
ಕಲಬುರಗಿಯ ನ್ಯೂ ರಾಘವೇಂದ್ರ ಕಾಲೊನಿ ರಸ್ತೆಯ ದುಃಸ್ಥಿತಿ   

ಕಲಬುರಗಿ: ನಗರದ ನ್ಯೂ ರಾಘವೇಂದ್ರ ಕಾಲೊನಿಯಿಂದ ಮೊಹಮ್ಮದಿ ಚೌಕ್‌ ಮೂಲಕ ಮಿರ್ಚಿ ಗೋದಾಮು ಸಂಪರ್ಕಿಸುವ ಸುಮಾರು 2 ಕಿ.ಮೀ ರಸ್ತೆ ಹಾಳಾಗಿದ್ದು, ರಸ್ತೆ ಅಕ್ಕಪಕ್ಕದ ಜನ ದೂಳಿನಿಂದ ಕಂಗೆಟ್ಟಿದ್ದಾರೆ.

ಮಳೆಗಾಲ ಮುಗಿದರೂ ಮುಖ್ಯರಸ್ತೆಯಲ್ಲಿನ ತಗ್ಗುಗುಂಡಿಗಳು ಸಮವಾಗಿಲ್ಲ. ಏರಿಳಿತಗಳು ಹಾಗೆಯೇ ಇವೆ. ಕೆಲವೆಡೆ ಜಲ್ಲಿಕಲ್ಲುಗಳು ರಸ್ತೆ ಮೇಲೆ ಕಂಡುಬರುತ್ತವೆ. ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗಾಗಿ ಅಗೆದಿರುವುದರಿಂದ ಕೂಡ ಕೆಲವೆಡೆ ರಸ್ತೆ ಮತ್ತಷ್ಟು ಹಾಳಾಗಿದೆ.

ಈ ರಸ್ತೆಯ ಒಂದೆಡೆ 27ನೇ ವಾರ್ಡ್‌ ಇದ್ದರೆ, ಮತ್ತೊಂದೆಡೆ 40ನೇ ವಾರ್ಡ್‌ ಬರುತ್ತದೆ. ಗಾಲಿಬ್‌ ಕಾಲೊನಿ, ದಿಲ್‌ದಾರ್‌ ಕಾಲೊನಿ, ನಬಿ ಕಾಲೊನಿ ಈ ರಸ್ತೆಯ ಸುತ್ತಮುತ್ತಲಿನ ಪ್ರಮುಖ ಬಡಾವಣೆಗಳು. ವಾಹನಗಳು ಸಂಚರಿಸುವಾಗ ರಸ್ತೆಯಲ್ಲಿನ ದೂಳು ಅಕ್ಕಪಕ್ಕದ ಮನೆ, ಅಂಗಡಿಗಳನ್ನು ಸೇರುತ್ತದೆ. ಅಲರ್ಜಿ ಮತ್ತು ಶ್ವಾಸಕೋಶದ ಸಮಸ್ಯೆಯ ಆತಂಕವನ್ನು ನಿವಾಸಿಗಳು ವ್ಯಕ್ತಪಡಿಸುತ್ತಾರೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ADVERTISEMENT

‘ರಸ್ತೆ ಹಾಳಾಗಿದ್ದು ಒಂದೆಡೆ ಇರಲಿ. ದೂಳಿನಿಂದ ನಮ್ಮ ಅಂಗಡಿಯ ಆಹಾರ ಸಾಮಗ್ರಿಗಳಿಗೆಲ್ಲ ದೂಳು ಆವರಿಸಿಕೊಳ್ಳುತ್ತದೆ. ಇದರಿಂದ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ. ಯಾರೂ ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

‘ನ್ಯೂ ರಾಘವೇಂದ್ರ ಕಾಲೊನಿಯಿಂದ ಮೊಹಮ್ಮದಿ ಚೌಕ್‌ವರೆಗಿನ ರಸ್ತೆ ಬಹಳಷ್ಟು ಹದಗೆಟ್ಟಿದೆ. ಬೈಕ್‌ ಸಂಚರಿಸಿದರೂ ದೂಳು ಏಳುತ್ತದೆ. ವಾಹನಗಳು ಸಂಚರಿಸಿದಾಗ ನಮ್ಮ ಟೇಲರಿಂಗ್‌ ಅಂಗಡಿ ಒಳಗಡೆಯೇ ದೂಳು ಬರುತ್ತದೆ. ಶೀಘ್ರ ರಸ್ತೆ ದುರಸ್ತಿ ಮಾಡಿ ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸುತ್ತಾರೆ ಮಾಸ್‌ ಟೇಲರ್‌ ಅಂಗಡಿಯ ಎಸ್‌.ಎಂ.ಲಿಯಾಖತ್‌.

‘ರಸ್ತೆ ಹದಗೆಟ್ಟಿರುವ ದುರಸ್ತಿಗಾಗಿ ಅನುದಾನ ನೀಡುವಂತೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ ಅವರಿಗೆ ಮನವಿ ಮಾಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಮಹಾನಗರ ಪಾಲಿಕೆಯ 40ನೇ ವಾರ್ಡ್‌ ಸದಸ್ಯ ಶೇಕ್‌ ಹುಸೇನ್‌ ಪ್ರತಿಕ್ರಿಯಿಸಿದರು.

ಕಲಬುರಗಿಯ ಗಾಲಿಬ್‌ ಕಾಲೊನಿಯಿಂದ ಮೊಹಮ್ಮದಿ ಚೌಕ್‌ ಮಾರ್ಗದ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು

ರಸ್ತೆ ಸಲುವಾಗಿ ₹2 ಕೋಟಿ ₹3 ಕೋಟಿ ಮಂಜೂರು ಆಗಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ 5–6 ವರ್ಷಗಳಿಂದ ರಸ್ತೆಯ ಚಿತ್ರಣ ಹಾಗೆಯೇ ಇದೆ
ಪತ್ರು ಸಾಬ್‌ ಸ್ಥಳೀಯ ನಿವಾಸಿ
ಮಳೆ ಬಂದರೆ ರಸ್ತೆಯಲ್ಲಿ ನಮ್ಮಂಥ ಹಿರಿಯರ ಸಂಚಾರವೇ ಬಂದ್‌ ಆಗುತ್ತದೆ. ಒಳರಸ್ತೆಗಳಲ್ಲಿ ಕಾಂಕ್ರೀಟ್‌ ಕೆಲಸ ಮಾಡಲಾಗಿದೆ. ಮುಖ್ಯರಸ್ತೆಯನ್ನು ಹಾಗೆಯೇ ಬಿಡಲಾಗಿದೆ
ಮೊಹ್ಮದ್‌ ಹುಸೇನ್‌ ಗಾಲಿಬ್‌ ಕಾಲೊನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.