ADVERTISEMENT

ಕಲಬುರಗಿ: ನೋಡಲ್‌ ಯುವ ಸಂಸತ್ ಸ್ಪರ್ಧೆ; ರಾಜ್ಯಮಟ್ಟಕ್ಕೆ 10 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 13:29 IST
Last Updated 23 ಮಾರ್ಚ್ 2025, 13:29 IST
ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿಕಸಿತ ಭಾರತ ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳೊಂದಿಗೆ ಇಂದಿರಾ ಶೆಟಕಾರ, ದಶರಥ ಮೇತ್ರೆ, ಡಿ.ಕಾರ್ತಿಗೇಯನ್‌, ಶಶೀಲ್‌ ನಮೋಶಿ, ಸಂಜಯಕುಮಾರ ಬಿರಾದಾರ, ದಯಾನಂದ ಹೊಡಲ್ ಉಪಸ್ಥಿತರಿದ್ದರು
ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿಕಸಿತ ಭಾರತ ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳೊಂದಿಗೆ ಇಂದಿರಾ ಶೆಟಕಾರ, ದಶರಥ ಮೇತ್ರೆ, ಡಿ.ಕಾರ್ತಿಗೇಯನ್‌, ಶಶೀಲ್‌ ನಮೋಶಿ, ಸಂಜಯಕುಮಾರ ಬಿರಾದಾರ, ದಯಾನಂದ ಹೊಡಲ್ ಉಪಸ್ಥಿತರಿದ್ದರು   

ಕಲಬುರಗಿ: ನಿಖರ ವಿಚಾರ, ಉತ್ತಮ ವಾಕ್ಪಟುತ್ವ ಪ್ರದರ್ಶಿಸಿದ ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ಕಾಲೇಜು ವಿದ್ಯಾರ್ಥಿ ಅರುಣ ಗಾಯಕವಾಡ ವಿಕಸಿತ ಭಾರತ ಯುವ ಸಂಸತ್ ಕಲಬುರಗಿ ನೋಡಲ್‌ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರು.

ಬೀದರ್‌ ಜಿಲ್ಲೆಯ ಹುಮನಾಬಾದ್‌ನ ಆರ್.ವಿ.ವುಮನ್ಸ್‌ ಆರ್ಟ್‌, ಸೈನ್ಸ್‌, ಕಾಮರ್ಸ್‌ ಕಾಲೇಜಿನ ಶ್ವೇತಾ ಜಗನ್ನಾಥ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರೆ, ಕಲಬುರಗಿಯ ಶರಣಬಸವೇಶ್ವರ ವಾಣಿಜ್ಯ ಕಾಲೇಜಿನ ಪ್ರತೀಕ್ಷಾ ಹೊನ್ನೂರ ಮೂರನೇ ಸ್ಥಾನ ಗಳಿಸಿದರು.

ಈ ಸ್ಪರ್ಧೆಯಲ್ಲಿ ಅಗ್ರ 10 ಸ್ಥಾನ ಪಡೆದ ಯುವಜನರು ಬೆಂಗಳೂರಿನಲ್ಲಿ ಮಾರ್ಚ್‌ 27, 28ರಂದು ನಡೆಯುವ ವಿಕಸಿತ ಭಾರತ ಯುವ ಸಂಸತ್ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ADVERTISEMENT

105 ಯುವಜನ ಭಾಗಿ:

ಎರಡು ದಿನಗಳ ಸ್ಪರ್ಧೆಗೆ ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳ ಒಟ್ಟು 150 ಯುವಜನರು ಆಯ್ಕೆಯಾಗಿದ್ದರು. ಅದರಲ್ಲಿ 46 ಯುವಕರು, 59 ಯುವತಿಯರು ಸೇರಿದಂತೆ 105 ಮಂದಿ ಯುವಜನ ಸ್ಪರ್ಧಾ ವೇದಿಕೆಯಲ್ಲಿ ತಮ್ಮ ವಿಚಾರ ಮಂಡಿಸಿದರು. ಮೊದಲ ದಿನ 67 ಸ್ಪರ್ಧಾಳುಗಳು ಎರಡನೇ ದಿನ 38 ಸ್ಪರ್ಧಾಳುಗಳು ವಾದ ಮಂಡಿಸಿದರು.

ಪರ–ವಿರೋಧಕ್ಕೆ ವೇದಿಕೆ:

ಸ್ಪರ್ಧೆಯಲ್ಲಿ ‘ಒಂದು ದೇಶ ಒಂದು ಚುನಾವಣೆ’ ಕುರಿತು ಭಾನುವಾರವೂ ಯುವಜನರು ಬಿರುಸಿನಿಂದ ತಮ್ಮ ವಿಚಾರ ಮಂಡಿಸಿದರು. ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಕಸಿತ ಭಾರತಕ್ಕೆ ‘ಒಂದು ದೇಶ ಒಂದು ಚುನಾವಣೆ’ ಹೇಗೆ ಪೂರಕ, ಹೇಗೆ ಮಾರಕ ಎಂಬುದರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ವಿಷಯದ ಪರ ಮಾತನಾಡಿದ ಯುವಜನರು, ‘ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಅದು ಐದು ವರ್ಷಕ್ಕೊಮ್ಮೆ ನಡೆದರೆ ಸರಿ. ಪದೇಪದೆ ನಡೆಸಲು ಅವು ಸಂತೆಗಳಲ್ಲ. ಏಕಕಾಲದ ಚುನಾವಣೆಯಿಂದ ಚುನಾವಣಾ ವೆಚ್ಚ, ಸಮಯದ ಉಳಿತಾಯ ಆಗುತ್ತದೆ. ರಾಜಕೀಯ ಧ್ರುವೀಕರಣ ತಪ್ಪುತ್ತದೆ. ಪದೇಪದೆ ನೀತಿ ಸಂಹಿತೆ ಜಾರಿಯಿಂದ ಸುಗಮ ಆಡಳಿತಕ್ಕೆ ಆಗುವ ತೊಂದರೆ ನೀಗುತ್ತದೆ. ಮತದಾನ ಪ್ರಮಾಣ ಹೆಚ್ಚಿಸಲು ಸಹಕಾರಿ. ಶಿಕ್ಷಣ ಕ್ಷೇತ್ರ ಸೇರಿದಂತೆ ಕಾರ್ಯಾಂಗ ಗಮನವಿಟ್ಟು ಉತ್ತಮ ಆಡಳಿತ ನೀಡಲು ನೆರವಾಗುತ್ತದೆ’ ಎಂದು ಪ್ರತಿಪಾದಿಸಿದರು.

ವಿಷಯದ ವಿರುದ್ಧ ಮಾತನಾಡಿದ ಯುವಜನರು, ‘ಒಕ್ಕೂಟ ವ್ಯವಸ್ಥೆಯುಳ್ಳ ದೇಶದಲ್ಲಿ ರಾಜ್ಯಗಳ ಆದ್ಯತೆ ನಿರ್ಲಕ್ಷಿಸುತ್ತದೆ. ಸಾಂವಿಧಾನಿಕ ತಿದ್ದುಪಡಿಗಳನ್ನು ಬೇಡುತ್ತದೆ. ಪ್ರಾದೇಶಿಕ ಪಕ್ಷಗಳ ಅಸ್ತಿತ್ವ ಗೌಣವಾಗುತ್ತದೆ. ರಾಷ್ಟ್ರೀಯ ಸಮಸ್ಯೆಗಳ ಎದುರು ರಾಜ್ಯದ ಸಮಸ್ಯೆಗಳಿಗೆ ಸ್ಪಂದನೆಯೇ ಸಿಗಲ್ಲ. ಏಕಕಾಲಕ್ಕೆ ಚುನಾವಣೆ ನಡೆಸಿದರೆ, ಇವಿಎಂಗಳ ಕೊರತೆ, ಭದ್ರತಾ ಏರ್ಪಾಡು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ಯಾವ ವಿಷಯಕ್ಕಾಗಿ ಮತಹಾಕಬೇಕು ಎಂಬುದರ ಬಗೆಗೆ ಮತದಾರರೂ ಗೊಂದಲಕ್ಕೆ ಸಿಲುಕುತ್ತಾರೆ’ ಎಂದು ಬೆಳಕು ಚೆಲ್ಲಿದರು.

ಚರ್ಚೆಯ ಬಳಿಕ ನಡೆದ ಸಮಾರೋಪ ಸಮಾರಂಭ ಉದ್ಘಾಟಿಸಿ ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ, ‘ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ದೇಶ ಎಷ್ಟು ಪ್ರಗತಿ ಸಾಧಿಸಬೇಕಿತ್ತೋ ಅಷ್ಟು ಸಾಧಿಸಿಲ್ಲ. ದೇಶದಲ್ಲಿ ಈಗಲೂ ಆಹಾರ, ನೀರು, ವಸತಿ ಸಮಸ್ಯೆ ಸಂಪೂರ್ಣ ನೀಗಿಲ್ಲ. ಈಗ ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರತಿ ಮನೆಗೂ ನೀರು ಒದಗಿಸಲಾಗುತ್ತಿದೆ. ಯುವ ಜನರ ಸಬಲೀಕರಣ ಆಗುತ್ತಿದೆ’ ಎಂದರು.‌

ಶರಣಬಸವೇಶ್ವರ ವಾಣಿಜ್ಯ ಕಾಲೇಜು ಪ್ರಾಚಾರ್ಯ ದಶರಥ ಮೇತ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಪರ್ಧೆಯ ನೋಡಲ್‌ ಜಿಲ್ಲಾ ಅಧಿಕಾರಿ ಪ್ರೊ.ದಯಾನಂದ ಹೊಡಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸದೃಢ ಭಾರತಕ್ಕೆ ಸದೃಢ ಯುವಜನ ಅಗತ್ಯ. ಯುವಶಕ್ತಿ ಮೊಬೈಲ್‌ನಲ್ಲಿ ಸಮಯ ವ್ಯರ್ಥ ಮಾಡದೇ ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು
ಸಂಜಯಕುಮಾರ ಬಿರಾದಾರ ವಿಕಸಿತ ಭಾರತ ಯುವ ಸಂಸತ್ ವೀಕ್ಷಕ
ನೋಡಲ್‌ ಜಿಲ್ಲಾಮಟ್ಟದ ವಿಜೇತರು ಮಾರ್ಚ್ 27 28ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ತಮ್ಮ ವಿಚಾರ ಮಂಡಿಸುವ ಅವಕಾಶ ಪಡೆಯುತ್ತಾರೆ
ಡಿ.ಕಾರ್ತಿಗೇಯನ್‌ ಎನ್‌ಎಸ್‌ಎಸ್‌ ಪ್ರಾದೇಶಿಕ ನಿರ್ದೇಶಕ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.