ADVERTISEMENT

ಕಲಬುರಗಿ: ಬಾಕಿ ವೇತನಕ್ಕಾಗಿ ಗ್ರಾ.ಪಂ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 6:54 IST
Last Updated 25 ನವೆಂಬರ್ 2025, 6:54 IST
<div class="paragraphs"><p>ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು&nbsp;ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಜಿ.ಪಂ. ಕಚೇರಿವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು </p></div>

ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಕಲಬುರಗಿಯ ಎಸ್‌ವಿಪಿ ವೃತ್ತದಿಂದ ಜಿ.ಪಂ. ಕಚೇರಿವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಕಲಬುರಗಿ: ಗ್ರಾಮ ಪಂಚಾಯಿತಿಗಳಲ್ಲಿ ಇಎಫ್‌ಎಂಎಸ್ ಆಗುವ ಮುಂಚೆ ಬಾಕಿ ಉಳಿಸಿಕೊಂಡ 25–30 ತಿಂಗಳ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಪಂಚಾಯಿತಿ ಸಿಬ್ಬಂದಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ADVERTISEMENT

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಮೆರವಣಿಗೆ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ತೆರಳಿತು.

ಸರ್ಕಾರದ ಆದೇಶದ ಪ್ರಕಾರ ಕರ ವಸೂಲಿಯಲ್ಲಿ ಶೇ 40ರಷ್ಟು ವೇತನ ಪಾವತಿಸುವ ಬಗ್ಗೆ ಆದೇಶ ಇದ್ದರೂ ಹಿಂದಿನ ಬಾಕಿ ವೇತನ ಪಾವತಿಸುತ್ತಿಲ್ಲ. ಕೂಡಲೇ ಬಾಕಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಒತ್ತಾಯಿಸಿದರು.

2019 ಮತ್ತು 2022ರಲ್ಲಿ ಕರ ವಸೂಲಿಗಾರರಿಂದ ಹಾಗೂ ಕ್ಲರ್ಕ್ ಡೇಟಾ ಎಂಟ್ರಿ ಆಪರೇಟರ್‌ರಿಂದ ಗ್ರೇಡ್–2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಭರ್ತಿ ಆಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಬಡ್ತಿಗೆ ಅರ್ಹರಿರುವ ಸಿಬ್ಬಂದಿ ಗ್ರಾ.ಪಂ.ಗಳಲ್ಲಿ ಲಭ್ಯವಿದ್ದರೂ ಬಡ್ತಿ ಕೊಡುತ್ತಿಲ್ಲ. ನಿವೃತ್ತಿಯಾಗುತ್ತಿರುವ ಸಿಬ್ಬಂದಿಗೆ 29–9–2020ರ ಆದೇಶದಂತೆ ನಿವೃತ್ತಿ ವೇತನ ಕೊಡುತ್ತಿಲ್ಲ. ಸ್ವಚ್ಛತಾಗಾರ ಹಾಗೂ ಪಂಪ್‌ ಆಪರೇಟರ್‌ಗಳಿಗೆ ಸಲಕರಣೆಗಳನ್ನು ಕೊಡುತ್ತಿಲ್ಲ ಎಂದು ಆರೋಪಿಸಿದರು.

ನಿವೃತ್ತಿಯಾಗುತ್ತಿರುವ ಸಿಬ್ಬಂದಿಗೆ 20 ತಿಂಗಳ ನಿವೃತ್ತಿ ವೇತನ ನೀಡಬೇಕು. ಗ್ರಾ.ಪಂ. ಸಿಬ್ಬಂದಿಗೆ ಅನ್ಯ ಇಲಾಖೆಯ ಕೆಲಸದ ಹೊರೆ ತೆಗೆದು ಹಾಕಬೇಕು. ಇದರಿಂದಾಗಿ ಕರ ವಸೂಲಿಗೆ ಹೆಚ್ಚು ಸಮಯ ಸಿಗುತ್ತದೆ. ಅನಾರೋಗ್ಯ ಇರುವ ಸಿಬ್ಬಂದಿಗೆ ವೈದ್ಯಕೀಯ ಖರ್ಚು ಕೊಡಬೇಕು. ಅನುಕಂಪದ ಮೇಲೆ ನೇಮಕಾತಿ ಹೊಂದಿರುವ ಸಿಬ್ಬಂದಿ ಮಾಹಿತಿಯನ್ನು ಇಎಫ್‌ಎಂಎಸ್‌ನಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ನಾಗರಾಜ ಜಿ. ಭಂಗೂರ, ಪ್ರಧಾನ ಕಾರ್ಯದರ್ಶಿ ಮಾರುತಿ ಎಸ್. ಸುಗ್ಗಾ, ಖಜಾಂಚಿ ಭೀಮರಾವ ಜಮಾದಾರ, ಸಂಘಟನಾ ಕಾರ್ಯದರ್ಶಿ ಜೈಭೀಮ ಜಿ. ಹೊಸಮನೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.