ADVERTISEMENT

ಕಲಬುರಗಿ | ಪೆಟ್ರೊಲ್ ಬಂಕ್‌ ಕಾರ್ಮಿಕನ ಮೇಲೆ ಚಾಕುವಿನಿಂದ ಹಲ್ಲೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:22 IST
Last Updated 9 ಅಕ್ಟೋಬರ್ 2025, 5:22 IST
ಆರೋಪಿ ಚಾಕಲೇಟ್‌ ವಿನ್ಯಾ
ಆರೋಪಿ ಚಾಕಲೇಟ್‌ ವಿನ್ಯಾ   

ಕಲಬುರಗಿ: ನಗರದ ಪೆಟ್ರೊಲ್ ಬಂಕ್‌ ಕಾರ್ಮಿಕನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಗರದ ಸಬರ್ಬನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.  

ನಗರದ ನ್ಯೂ ರಾಘವೇಂದ್ರ ಕಾಲೊನಿಯ ವಿನೋದ ಅಲಿಯಾಸ್ ಚಾಕಲೇಟ್‌ ವಿನ್ಯಾ (18), ಭೂಪಾಲತೆಗನೂರ ನಿವಾಸಿ ನಾಗೇಶ ಕಟ್ಟಿಮನಿ(19) ಹಾಗೂ ಕಲಬುರಗಿಯ ರಾಮತೀರ್ಥನಗರ ನಿವಾಸಿ ವಿನೋದ ಅಲಿಯಾಸ್‌ ಟೈಗರ್ ವಿನೋದ ದಂಡಗುಲೆ (19) ಬಂಧಿತರು. ಪ್ರಕರಣದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ನಗರದ ಆಳಂದ ರಸ್ತೆಯ ವಿಶ್ವಾರಾಧ್ಯ ದೇವಸ್ಥಾನ ಬಳಿಯ ಪೆಟ್ರೋಲ್‌ ಬಂಕ್‌ನಲ್ಲಿ ಅ.3ರಂದು ಪೆಟ್ರೋಲ್‌ ಹಾಕಿಸಿಕೊಳ್ಳುವ ವಿಷಯದಲ್ಲಿ ಜಗಳ ತೆಗೆದು ಪೆಟ್ರೊಲ್ ಬಂಕ್‌ ಕಾರ್ಮಿಕ ತ್ರಿಶೂಲ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಜೊತೆಗೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ADVERTISEMENT

ಈ ಪ್ರಕರಣದ ಆರೋಪಿಗಳ ಪತ್ತೆಗೆ ಎಸಿಪಿ ಡಿ.ಜಿ.ರಾಜಣ್ಣ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಇನ್‌ಸ್ಪೆಕ್ಟರ್‌ಗಳಾದ ಸಂತೋಷ ತಟ್ಟೆಪಳ್ಳಿ ಹಾಗೂ ದಿಲೀಪ್‌ ಸಾಗರ, ಪಿಎಸ್‌ಐ ಬಸವರಾಜು, ಕಾನ್‌ಸ್ಟೆಬಲ್‌ಗಳಾದ ಭೀಮನಾಯಕ, ಮಂಜುನಾಥ, ಅಶೋಕ ಅವರು ಒಂದು ತಂಡದಲ್ಲಿದ್ದರು. ಸ್ಟೇಷನ್‌ ಬಜಾರ್‌ ಠಾಣೆಯ ಪ್ರಭಾಕರ, ಶಿವಲಿಂಗ ಹಾಗೂ ಯಲ್ಲಪ್ಪ ಪೂಜಾರಿ ಮತ್ತೊಂದು ತಂಡದಲ್ಲಿದ್ದರು.

ಮನೆ ಕೀಲಿ ಮುರಿದು ಕಳವು

ಕಲಬುರಗಿಯ ರೈಲ್ವೆ ಕಾಲೊನಿಯಲ್ಲಿ ಮನೆಗೆ ಹಾಕಿದ್ದ ಬೀಗ ಮುರಿದ ಕಳ್ಳರು ಚಿನ್ನ–ಬೆಳ್ಳಿ ಆಭರಣ, ನಗದು ಹಾಗೂ ಎಲ್‌ಇಡಿ ಟಿವಿ ಕದ್ದು ಪರಾರಿಯಾಗಿದ್ದಾರೆ.

‘ಮನೆಗೆ ಕೀಲಿ ಹಾಕಿ ಕುಟುಂಬ ಸಮೇತ ಊರಿಗೆ ಹೋಗಿದ್ದ ವೇಳೆ ಕಳ್ಳರು ಮನೆಯ ಬೀಗ ಒಡೆದು ಮನೆಯಲ್ಲಿದ್ದ 11 ಗ್ರಾಂ ಚಿನ್ನಾಭರಣ, 50 ಗ್ರಾಂ ಬೆಳ್ಳಿ ಆಭರಣ, ₹12 ಸಾವಿರ ನಗದು ಹಾಗೂ ಎಲ್‌ಇಡಿ ಟಿವಿ ಕದ್ದೊಯ್ದಿದ್ದಾರೆ’ ಎಂದು ಆಭರಣ–ನಗದು ಕಳೆದಕೊಂಡ ಶ್ರೀಧರ ಕಡೆಚಕರ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹4.17 ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿ

ಕಲಬುರಗಿ: ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದ ಲಾರಿ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ₹4.17 ಲಕ್ಷ ಮೌಲ್ಯದ 119.25 ಕ್ವಿಂಟಲ್‌ ಪಡಿತರ ಅಕ್ಕಿ ಹಾಗೂ ಅಕ್ಕಿ ಸಾಗಿಸುತ್ತಿದ್ದ ₹8 ಲಕ್ಷ ಮೌಲ್ಯದ ಲಾರಿಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ದಾಳಿ ವೇಳೆ ಲಾರಿ ಚಾಲಕ ಪರಾರಿಯಾಗಿದ್ದಾರೆ. ಈ ಕುರಿತು ಲಾರಿ ಮಾಲೀಕ ಹಾಗೂ ಚಾಲಕನ ವಿರುದ್ಧ ನಗರದ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಟೈಗರ್ ವಿನೋದ
ಆರೋಪಿ ನಾಗೇಶ ಕಟ್ಟಿಮನಿ

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.