ADVERTISEMENT

ಕಲಬುರಗಿ ಕಮಿಷನರ್ ಕಚೇರಿಗೆ ಐಎಸ್‌ಒ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:55 IST
Last Updated 12 ಜನವರಿ 2026, 7:55 IST
ಕಲಬುರಗಿ ಪೊಲೀಸ್‌ ಕಮಿಷನರ್ ಶರಣಪ್ಪ ಎಸ್.ಡಿ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ‌ಪ್ರಶಸ್ತಿಯನ್ನು ಸಾಂಕೇತಿಕವಾಗಿ ವಿತರಿಸಿದರು
ಕಲಬುರಗಿ ಪೊಲೀಸ್‌ ಕಮಿಷನರ್ ಶರಣಪ್ಪ ಎಸ್.ಡಿ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ‌ಪ್ರಶಸ್ತಿಯನ್ನು ಸಾಂಕೇತಿಕವಾಗಿ ವಿತರಿಸಿದರು   

ಪ್ರಜಾವಾಣಿ ವಾರ್ತೆ

ಕಲಬುರಗಿ: ಸಾರ್ವಜನಿಕರ ಸೇವೆಗಳಲ್ಲಿ ಹಾಗೂ ಇತರೆ ವಿಭಾಗಗಳಲ್ಲಿ ಗಣನೀಯ ಸುಧಾರಣೆ ತಂದ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸ್ ಕಮಿಷನರ್ ಕಚೇರಿಗೆ ‘ISO 9001: 2015’ ಪ್ರಶಸ್ತಿ ಲಭಿಸಿದೆ.

ಇಲ್ಲಿನ ಕಲಬುರಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಈ ಪ್ರಶಸ್ತಿ ಪ್ರಮಾಣ ಪತ್ರವನ್ನು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಅವರಿಗೆ ಸಾಂಕೇತಿಕವಾಗಿ ವಿತರಿಸಿದರು.

ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್‌, ‘ಜನಸ್ನೇಹಿ ವ್ಯವಸ್ಥೆ, ತ್ವರಿತ ನಾಗರಿಕ ಸೇವೆ, ವೃತ್ತಿಪರತೆ ಹಾಗೂ ಆಡಳಿತದಲ್ಲಿ ಗುಣಮಟ್ಟ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಕಲಬುರಗಿ ಪೊಲೀಸ್ ಕಮಿಷನರೆಟ್ ಆಮೂಲಾಗ್ರ ಸುಧಾರಣೆ ಹೊಂದಿದೆ. ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ಅಂತರರಾಷ್ಟ್ರೀಯ ‘ISO 9001: 2015’ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ’ ಎಂದರು.

‘ಪೊಲೀಸರು ಮತ್ತಷ್ಟು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಿದಾಗ ಮಾತ್ರವೇ ಜನರಿಂದ ಹೊಗಳಿಕೆಯ ಪ್ರಶಸ್ತಿ ಪಡೆಯಲು ಸಾಧ್ಯ. ಹೀಗಾಗಿ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ. ಎಸ್ಸಿ, ಎಸ್ಟಿ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳೂ ಕಮ್ಮಿಯಾಗಿವೆ. ಸರ ಕಳ್ಳತನವೂ ತಗ್ಗಿದೆ. ಆದರೆ, ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಮದ್ಯ ಹಾಗೂ ಮಾದಕ ಪದಾರ್ಥಗಳ ಮಾರಾಟ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡ ಕಾರಣ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಡ್ರಗ್ಸ್ ವಿರುದ್ದದ‌ ಮತ್ತಷ್ಟು ಕಠಿಣ ಕ್ರಮವಹಿಸಬೇಕಾಗಿದೆ’ ಎಂದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು. ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ‌ ಕಮಕನೂರ, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜರ್ ಆಲಂ‌ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.