ADVERTISEMENT

ಕಲಬುರಗಿ | ಕಳಚಿ ಬಿದ್ದ ಸಿಮೆಂಟ್‌ ಪದರು: ಸ್ವಲ್ಪದರಲ್ಲೇ ವಿದ್ಯಾರ್ಥಿನಿ ಪಾರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 16:26 IST
Last Updated 2 ಮಾರ್ಚ್ 2026, 16:26 IST
   

ಕಲಬುರಗಿ: ನಗರದ ಹೊರವಲಯದಲ್ಲಿ ಸ್ಥಾಪಿಸಿರುವ ಪ್ರಬುದ್ಧ ಅಕಾಡೆಮಿ ಕಟ್ಟಡ ಪಕ್ಕದ ಉಪಾಹಾರ ಗೃಹದ ಚಾವಣಿಯ ಸಿಮೆಂಟ್‌ ಪದರು ಕಿತ್ತು ಟೇಬಲ್‌ ಹಾಗೂ ಕುರ್ಚಿಗಳ ಮೇಲೆ ಬಿದ್ದಿದೆ. ಸೋಮವಾರ ಮಧ್ಯಾಹ್ನ ಊಟದ ವಿರಾಮದ ಹೊತ್ತಿನಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಬುದ್ಧ ಅಕಾಡೆಮಿಯ ಕಟ್ಟಡವನ್ನು ಜನವರಿ 11ರಂದು ಉದ್ಘಾಟಿಸಿದ್ದರು. ಉದ್ಘಾಟನೆಯಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಈಗಲೇ ಚಾವಣಿ ಸಿಮೆಂಟ್‌ ಕಿತ್ತು ಬೀಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಉಪಾಹಾರ ಗೃಹ ಇನ್ನೂ ಕಾರ್ಯಾರಂಭವಾಗಿಲ್ಲ. ಆದರೆ, ವಿದ್ಯಾರ್ಥಿಗಳು ಅದನ್ನು ಊಟಕ್ಕೆ ಬಳಸುತ್ತಿದ್ದರು. ಸಿಮೆಂಟ್ ಪದರು ಕಿತ್ತು ಬಿದ್ದ ಬಗೆಗೆ ಕಟ್ಟಡ ನಿರ್ಮಿಸಿರುವ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ’ ಎಂದು ಪ್ರಬುದ್ಧ ಅಕಾಡೆಮಿ ತರಬೇತಿ ಕೇಂದ್ರದ ಉಸ್ತುವಾರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘₹30 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಪ್ರಬುದ್ಧ ಅಕಾಡೆಮಿ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಎಂ.ಎಸ್‌.ಪಾಟೀಲ ನರಿಬೋಳಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.