ಕಲಬುರಗಿ: ನಗರ ಹೊರವಲಯದ ಉದನೂರ ಗ್ರಾಮದಲ್ಲಿ ಬೀದಿನಾಯಿಗಳ ಗೋದಾಮು ನಿರ್ಮಾಣ ಕಾಮಗಾರಿ ವಿರೋಧಿಸಿ ಗ್ರಾಮಸ್ಥರು ಶನಿವಾರ ಧರಣಿ ನಡೆಸಿದರು.
ಧರಣಿ ನಿರತರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಎದುರು ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಪಾಲಿಕೆ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಸುಮಾರು 18 ವರ್ಷಗಳಿಂದ ಮಹಾನಗರ ಪಾಲಿಕೆಯವರು ಕಲಬುರಗಿ ನಗರದ ಕಸವನ್ನು ಉದನೂರ ಗ್ರಾಮದಲ್ಲಿ ತಂದು ಬೇಕಾಬಿಟ್ಟಿ ಹಾಕುತ್ತಿರುವುದರಿಂದ ಗ್ರಾಮಸ್ಥರಿಗೆ ಡೆಂಗಿ, ಮಲೇರಿಯಾ, ಪಾರ್ಶ್ವವಾಯುನಂತಹ ಮಾರಕ ರೋಗಗಳು ಹರಡುತ್ತಿವೆ. ನಗರದ ನಾಯಿಗಳನ್ನು ಸಹ ತಂದು ಬಿಡುತ್ತಿದ್ದಾರೆ. ಇದರಿಂದ ಬೀದಿ ನಾಯಿಗಳು ಕುರಿಗಳು ಮತ್ತು ಸಾರ್ವಜನಿಕರ ಮೇಲೆ ಕ್ರೂರವಾಗಿ ದಾಳಿ ಮಾಡುತ್ತಿದ್ದು, ದನಕರುಗಳು ಸಾವನ್ನಪ್ಪಿವೆ’ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
ಈ ವೇಳೆ ಶಾಸಕರು, ‘ಯಾವುದೇ ಕಾರಣಕ್ಕೂ ಬೀದಿ ನಾಯಿಗಳ ಗೋದಾಮು ನಿರ್ಮಾಣ ಕಾಮಗಾರಿ ಮಾಡುವುದಿಲ್ಲ’ ಎಂದು ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಗ್ರಾಮಸ್ಥರಾದ ಶಿವಪುತ್ರ ಮಾಲಿಪಾಟೀಲ, ಶಾಂತಕುಮಾರ ಬಿರಾದಾರ, ರವಿ ಪಾಟೀಲ, ವಿಶ್ವನಾಥ ಪಾಟೀಲ, ಹನಮಂತ್ರಾಯ ಕಪನೂರ, ಹಜರತ್ ಸಾಬ್, ಸುಭಾಶಚಂದ್ರ ಮೂಲಗೆ, ವಿಠಲ ಚವ್ಹಾಣ, ಬಸವರಾಜ, ಸತೀಶ್, ಮಲ್ಲಿಕಾರ್ಜುನ, ಭೀಮಣ್ಣ ಶೇರಿಕಾರ, ರೇವಣಸಿದ್ದ ದುದನಿ, ಪ್ರಸನ್ನ, ಶುಭಂ ಶೇರಿಕಾರ, ಮಹಾಂತೇಶ ಪಾಟೀಲ, ಶರಣು ಟಿ., ಶರಣು ಪೂಜಾರಿ, ಗುಂಡು ದೇವಣಗಾಂವ್, ಜೈಭೀಮು ಕೊರಳ್ಳಿ, ರಾಣಪ್ಪ ಕೊರಳ್ಳಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.