
ಕಲಬುರಗಿ: ಕಲಬುರಗಿ ರೈಲ್ವೆ ವಿಭಾಗ ರಚನೆಯ ಘೋಷಣೆ ಹೊರಬಿದ್ದ ಸಂದರ್ಭದಲ್ಲೇ ಆಂಧ್ರಪ್ರದೇಶದ ವಿಶಾಖಪಟ್ಟಣ ರೈಲ್ವೆ ವಲಯ ಆರಂಭ ಮಾಡಲು ತೀರ್ಮಾನಿಸಲಾಗಿತ್ತು. ವಿಶಾಖಪಟ್ಟಣ ರೈಲ್ವೆ ವಲಯವು ಬರುವ ಏಪ್ರಿಲ್ 1ರಿಂದ ಕಾರ್ಯಾರಂಭ ಮಾಡಲು ಸಿದ್ಧತೆಗಳು ನಡೆದಿದ್ದು, ಕಲಬುರಗಿ ರೈಲ್ವೆ ವಿಭಾಗ ರಚನೆಯ ಸುಳಿವೂ ಇಲ್ಲದೇ ಇರುವುದರಿಂದ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.
1980ರ ದಶಕದಲ್ಲೇ ಸರೀನ್ ಸಮಿತಿಯು ಕಲಬುರಗಿಯಲ್ಲಿ ರೈಲ್ವೆ ವಿಭಾಗ ರಚನೆ ಮಾಡುವಂತೆ ಶಿಫಾರಸು ಮಾಡಿತ್ತು. ಅಂದಿನಿಂದ ಹಲವು ಸಂಘಟನೆಗಳು, ಪ್ರಯಾಣಿಕರು ರೈಲ್ವೆ ವಿಭಾಗದ ಬೇಡಿಕೆ ಮಂಡಿಸುತ್ತಲೇ ಇದ್ದಾರೆ. ರಾಜ್ಯಸಭೆಯ ಹಾಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮನಮೋಹನ್ ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಕಲಬುರಗಿಯಲ್ಲಿ ರೈಲ್ವೆ ವಿಭಾಗದ ಘೋಷಣೆ ಮಾಡಿದ್ದರು. ಜೊತೆಗೆ, ವಿಭಾಗದ ಕಚೇರಿಗಳ ಆರಂಭಕ್ಕಾಗಿ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣ ಹಿಂಭಾಗದ ರಾಜಾಪುರ ರಸ್ತೆಯಲ್ಲಿ 40 ಎಕರೆ ಭೂಮಿಯನ್ನೂ ಕಾಯ್ದಿರಿಸಿದ್ದರು. ಬದಲಾದ ಸಂದರ್ಭದಲ್ಲಿ ಸರ್ಕಾರ ಬದಲಾಯಿತು. ಕಾಂಗ್ರೆಸ್ ಸರ್ಕಾರದಲ್ಲಿ ಘೋಷಣೆಯಾದ ಯೋಜನೆಗೆ ತಾವೇಕೆ ಅನುಮೋದನೆ ನೀಡಬೇಕು ಎಂಬ ಕಾರಣಕ್ಕೆ ನರೇಂದ್ರ ಮೋದಿಯವರ ಸರ್ಕಾರ ವಿಭಾಗ ರಚನೆಗೆ ನಿರ್ಲಕ್ಷ್ಯ ವಹಿಸಿತು ಎಂಬ ಆರೋಪಗಳೂ ಕೇಳಿ ಬಂದವು.
ರಾಜ್ಯದವರೇ ಆದ ಸುರೇಶ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಕಲಬುರಗಿಗೆ ರೈಲ್ವೆ ವಿಭಾಗ ಘೋಷಣೆಯಾದ ಬಳಿಕವೇ ತಾವು ಕಲಬುರಗಿಗೆ ಬರುವುದಾಗಿ ಶಪಥ ಮಾಡಿದ್ದರು. ಅಷ್ಟರಲ್ಲೇ ಕೋವಿಡ್ ಕಾಯಿಲೆಯಿಂದಾಗಿ ಅವರು ಮೃತಪಟ್ಟರು. ಕಳೆದ ಅವಧಿಯಲ್ಲಿ ಸಂಸದರಾಗಿದ್ದ ಡಾ.ಉಮೇಶ ಜಾಧವ್ ಅವರೂ ರೈಲ್ವೆ ವಿಭಾಗಕ್ಕಾಗಿ ಸಾಕಷ್ಟು ಬಾರಿ ರೈಲ್ವೆ ಸಚಿವರ ಕಚೇರಿಗೆ ಸುತ್ತಾಡಿದರೂ ಭರವಸೆ ಹೊರತು ಬೇರೇನೂ ಸಿಗಲಿಲ್ಲ. ಕಳೆದ ಚುನಾವಣೆಯಲ್ಲಿ ಅವರೂ ಪರಾಭವಗೊಂಡ ಬಳಿಕ ಕಲಬುರಗಿಗೆ ರೈಲ್ವೆ ವಿಭಾಗ ಬರಲಿದೆ ಎಂಬ ಆಶಾವಾದವೂ ಕರಗಿ ಹೋಗುತ್ತಿದೆ ಎನ್ನುತ್ತಾರೆ ಹೋರಾಟಗಾರರು.
‘ಕೇಂದ್ರ ರೈಲ್ವೆ ಅಧೀನದಲ್ಲಿ ಬರುವ ವಾಡಿ, ಕಲಬುರಗಿ ರೈಲು ನಿಲ್ದಾಣಗಳನ್ನು ಸೋಲಾಪುರದ ವಿಭಾಗೀಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸೋಲಾಪುರ ವಿಭಾಗ ಅಧೀನದ ಮಹಾರಾಷ್ಟ್ರದೊಳಗಿನ ನಿಲ್ದಾಣಗಳಿಗೆ ರೈಲು ಸೇವೆಯನ್ನು ತಕ್ಷಣ ಕಲ್ಪಿಸುವ ಅಧಿಕಾರಿಗಳು ಕಲಬುರಗಿ, ಶಹಾಬಾದ್, ವಾಡಿ ನಿಲ್ದಾಣಗಳಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕಲಬುರಗಿಯಿಂದಲೇ ನೇರವಾಗಿ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು ಎನ್ನುವ ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ’ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಗ್ರಾಹಕ ಹೋರಾಟ ವೇದಿಕೆ ಸಂಚಾಲಕ ಸುನೀಲ್ ಕುಲಕರ್ಣಿ.
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಮಾಡಲು ಕೇಂದ್ರ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ಈ ಬಗ್ಗೆ ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವರು ಗಮನ ಹರಿಸಿ ತಕ್ಷಣ ಕ್ರಮ ಕೈಗೊಳ್ಳಬೇಕುಶರಣಬಸಪ್ಪ ಎಂ. ಪಪ್ಪಾ ಕೆಕೆಸಿಸಿಐ ಅಧ್ಯಕ್ಷ
ಕಲಬುರಗಿ ವಾಡಿ ನಿಲ್ದಾಣಗಳನ್ನು ಸಿಕಂದರಾಬಾದ್‌ನ ದಕ್ಷಿಣ ಮಧ್ಯೆ ರೈಲ್ವೆಗೆ ಸೇರಿಸಿದರೆ ಭವಿಷ್ಯದಲ್ಲಿ ಕಲಬುರಗಿಯಲ್ಲಿ ವಿಭಾಗ ರಚನೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಕುರಿತು ಕಲಬುರಗಿ ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಕೇಂದ್ರದ ಮೇಲೆ ಒತ್ತಡ ಹೇರಬೇಕುಸುನೀಲ ಕುಲಕರ್ಣಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ
ಸಿಕಂದರಾಬಾದ್‌ಗೆ ಸೇರಿಸಲು ಹೆಚ್ಚಿದ ಒತ್ತಡ
ಪ್ರಸ್ತುತ ಕಲಬುರಗಿ ಜಿಲ್ಲೆಯ ವಿವಿಧ ರೈಲು ನಿಲ್ದಾಣ ಹಾಗೂ ಮಾರ್ಗಗಳು ಮುಂಬೈನ ಕೇಂದ್ರ ರೈಲ್ವೆ ಸಿಕಂದರಾಬಾದ್‌ನ ದಕ್ಷಿಣ ಮಧ್ಯ ರೈಲ್ವೆ ನಡುವೆ ಹರಿದು ಹಂಚಿ ಹೋಗಿವೆ. ಸೇಡಂ ಚಿತ್ತಾಪುರ ತಾಜಸುಲ್ತಾನಪುರ ನಿಲ್ದಾಣಗಳು ಸಿಕಂದರಾಬಾದ್ ವಲಯದ ವ್ಯಾಪ್ತಿಯಲ್ಲಿದ್ದರೆ ಕಲಬುರಗಿ ಶಹಾಬಾದ್ ವಾಡಿ ಗಾಣಗಾಪುರ ಕುಲಾಲಿ ನಿಲ್ದಾಣಗಳು ಮಧ್ಯ ರೈಲ್ವೆ ಸೋಲಾಪುರ ವಿಭಾಗದಲ್ಲಿ ಬರುತ್ತವೆ. ವಿಶಾಖಪಟ್ಟಣ ವಲಯಕ್ಕೆ ಸಿಕಂದರಾಬಾದ್ ವಲಯದಲ್ಲಿದ್ದ ವಿಜಯವಾಡ ಗುಂಟೂರು ಮತ್ತು ಗುಂತಕಲ್ ವಿಭಾಗಗಳು ವಿಶಾಖಪಟ್ಟಣದ ದಕ್ಷಿಣ ಕರಾವಳಿ ರೈಲ್ವೆ ವ್ಯಾಪ್ತಿಗೆ ಹಸ್ತಾಂತರಗೊಳ್ಳಲಿದೆ. ಹೀಗಾಗಿ ಸಿಕಂದರಾಬಾದ್ ವಲಯದಲ್ಲಿ ಸಿಕಂದರಾಬಾದ್ ಹೈದರಾಬಾದ್ ಹಾಗೂ ನಾಂದೇಡ್ ವಿಭಾಗಗಳು ಮಾತ್ರ ಉಳಿಯುತ್ತವೆ. ರೈಲ್ವೆ ಕಾರ್ಯಾಚರಣೆಯನ್ನು ಇನ್ನಷ್ಟು ದಕ್ಷವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಸೋಲಾಪುರ ವಲಯದಲ್ಲಿರುವ ವಾಡಿ ಜಂಕ್ಷನ್ ತಮ್ಮ ವ್ಯಾಪ್ತಿಗೆ ನೀಡುವಂತೆ ಸಿಕಂದರಾಬಾದ್ ವಲಯದ ಅಧಿಕಾರಿಗಳು ಪತ್ರ ಬರೆದಿದ್ದಾರೆ. ವಾಡಿ ಜೊತೆಗೆ ಕಲಬುರಗಿಯನ್ನೂ ಸಿಕಂದರಾಬಾದ್‌ಗೆ ಸೇರಿಸಬೇಕು ಎಂಬ ಒತ್ತಡವನ್ನು ಸರ್ಕಾರದ ಮೇಲೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎನ್ನುತ್ತಾರೆ ಸುನೀಲ ಕುಲಕರ್ಣಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.