ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಕೆಸಿಸಿಐ)ಯವರು ಮುಂಬೈ–ಸೋಲಾಪುರ ಮಧ್ಯದ ವಂದೇ ಭಾರತ್ ರೈಲನ್ನು ಕಲಬುರಗಿವರೆಗೆ ವಿಸ್ತರಿಸುವುದು, ಕಲಬುರಗಿ–ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್ ರೈಲು, ಕಲಬುರಗಿಗೆ ರೈಲ್ವೆ ವಿಭಾಗ ಮಂಜೂರು ಮಾಡಬೇಕು ಎಂಬ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಇವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.
ಕೆಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರೈಲ್ವೆ ಯೋಜನೆಗಳ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿ ಬರುವುದಿಲ್ಲ ಎಂದು ಹೇಳಿದರೂ ಕರೆದು ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. 74ನೇ ವಯಸ್ಸಿನಲ್ಲಿ ಪರಿಪೂರ್ಣ ಹಿಂದಿ ಕಲಿಯುವುದು ಸಾಧ್ಯವಾಗುವುದಿಲ್ಲ. ಆದರೆ, ನನ್ನ ಕೆಲಸವನ್ನು ಗುರುತಿಸಿ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದ್ದಾರೆ. ರಾಜ್ಯದಲ್ಲಿ ₹39 ಸಾವಿರ ಕೋಟಿ ಮೊತ್ತದ ರೈಲ್ವೆ ಯೋಜನೆಗಳು ನಡೆಯುತ್ತಿದ್ದು, ಅದರಲ್ಲಿ ಶೇ 85ರಷ್ಟು ಕಾಮಗಾರಿಗಳು ಕಲ್ಯಾಣ ಕರ್ನಾಟಕಕ್ಕೆ ಸಂಬಂಧಪಟ್ಟವೇ ಆಗಿವೆ’ ಎಂದರು.
‘ಇತ್ತೀಚೆಗೆ ಜಾರ್ಖಂಡ್‌ನ ದೇವಘರ್ ಎಂಬಲ್ಲಿಗೆ ವಂದೇ ಭಾರತ್ ರೈಲು ಆರಂಭಕ್ಕೆ ಪ್ರಧಾನಿ ಚಾಲನೆ ನೀಡಿದರು. ಈ ರೈಲು ಶುರುವಾದ ಬಳಿಕ ಏಳೆಂಟು ಕಂಪನಿಗಳು ತಮ್ಮ ಕಾರ್ಖಾನೆಗಳನ್ನು ದೇವಘರ್‌ಗೆ ಸ್ಥಳಾಂತರ ಮಾಡಿವೆ. ಇದರಿಂದ ಆ ಭಾಗದ ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ. ಒಂದು ರೈಲಿನಿಂದ ಇಷ್ಟೆಲ್ಲ ಸಾಧ್ಯವಾಗಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ, ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಮಾಜಿ ಸಂಸದ ಡಾ. ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ. ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವೇದಿಕೆಯಲ್ಲಿದ್ದರು.
'ರೈಲ್ವೆ ಬೋಗಿ ಕಾರ್ಖಾನೆಗೆ ₹ 200 ಕೋಟಿ’
ಯಾದಗಿರಿ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ರೈಲ್ವೆ ಬೋಗಿ ಕಾರ್ಖಾನೆಯ ಪುನರುಜ್ಜೀವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ₹ 200 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ ಎಂದು ಸಚಿವ ವಿ. ಸೋಮಣ್ಣ ಪ್ರಕಟಿಸಿದರು.
‘ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ನನ್ನ ಬಳಿ ಬಂದು ರೈಲ್ವೆ ಬೋಗಿ ಕಾರ್ಖಾನೆಯ ಸಮಸ್ಯೆಗಳ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಪ್ರಧಾನಿ ಅವರ ಬಳಿ ಪ್ರಸ್ತಾವ ಸಲ್ಲಿಸಿದಾಗ ಕೂಡಲೇ ₹ 200 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದರು. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡದಂತೆ ಸಲಹೆ ನೀಡಿದ್ದಾರೆ. ಹೀಗಾಗಿ, ಹಿಂದಿನ ಯುಪಿಎ ಸರ್ಕಾರದವರು ಅನುಮೋದನೆ ನೀಡಿದ್ದ ₹ 7.54 ಲಕ್ಷ ಮೊತ್ತದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ’ ಎಂದರು.
ಗದ್ಗದಿತರಾದ ಸೋಮಣ್ಣ
ಕಲಬುರಗಿ ಜಿಲ್ಲೆಯ ಚಿಂಚೋಳಿಯವರಾದ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಹೆಸರು ಪ್ರಸ್ತಾಪಿಸಿದ ಸಚಿವ ವಿ. ಸೋಮಣ್ಣ ಅವರು ಕೆಲ ಕಾಲ ಗದ್ಗದಿತರಾದರು.
ಉಪಚುನಾವಣೆ ಸಂದರ್ಭದಲ್ಲಿ ಚಿಂಚೋಳಿಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಸಕ ಡಾ. ಅವಿನಾಶ್ ಜಾಧವ ಪರ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ವೀರೇಂದ್ರ ಪಾಟೀಲರ ಸಮಾಧಿ ಎಲ್ಲಿ ಎಂದು ಕೇಳಿದೆ. ಅದು ಅನಾಥ ಸ್ಥಿತಿಯಲ್ಲಿತ್ತು. ಕೆಲ ಕಾಲ ಸಮಾಧಿ ಸುತ್ತ ಸ್ವಚ್ಛತೆಯ ಕೆಲಸ ಮಾಡಿದೆ. ವೀರೇಂದ್ರ ಪಾಟೀಲ, ಎಸ್. ನಿಜಲಿಂಗಪ್ಪ, ಜೆ.ಎಚ್.ಪಟೇಲ್, ಎಚ್.ಡಿ.ದೇವೇಗೌಡರು, ಎಸ್.ಆರ್.ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಸೋಮಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.