ಎಂ.ಬಿ.ನಗರದಲ್ಲಿ ನಳ ಕೂರಿಸಲು ರಸ್ತೆ ಅಗೆಯುತ್ತಿರುವುದು
ಕಲಬುರಗಿ: ‘ಹಳೆ ಜೇವರ್ಗಿ ವೃತ್ತ, ಸಿಐಬಿ ಕಾಲೊನಿ, ಎಸ್‌ಬಿಐ ಕಾಲೊನಿ, ಬಸವೇಶ್ವರ ಕಾಲೊನಿ, ವೆಂಕಟೇಶ ನಗರ, ಮಹಾದೇವ ನಗರ, ಶಾಸ್ತ್ರಿ ನಗರ ಬಡಾವಣೆಗಳ ರಸ್ತೆ, ಅಡ್ಡರಸ್ತೆಗೆ ಹೋದರೆ ನಿಮ್ಮನ್ನು ಎಲ್ ಅಂಡ್ ಟಿ ಬಿಟ್ಟ ರಂಗೋಲಿ ಸ್ವಾಗತಿಸುತ್ತದೆ...’
ನೀರಿನ ಪೈಪ್ ಹಾಕಲು ಖಾಸಗಿ ಕಂಪನಿ, ವಿವಿಧ ಕಾಮಗಾರಿಗಳಿಗಾಗಿ ಬೇರೆ ಬೇರೆ ಇಲಾಖೆಗಳು ರಸ್ತೆ ಅಗೆದಿದ್ದನ್ನು ನೋಡಿ ನಿವೃತ್ತ ನೌಕರರೊಬ್ಬರು ಮಾಡಿದ ವ್ಯಂಗ್ಯದ ಪರಿ ಇದು.
ನಗರದಲ್ಲಿ ರಸ್ತೆ ಅಗೆದು ಕಾಮಗಾರಿ ವಿಳಂಬ ಮಾಡುತ್ತಿರುವ ಬಗ್ಗೆ, ತಗ್ಗುಗಳನ್ನು ಮುಚ್ಚದೇ ಬಿಟ್ಟಿದ್ದರಿಂದ, ಅರ್ಧ ಮುಚ್ಚಿದ್ದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ‘ಪ್ರಜಾವಾಣಿ’ಗೆ ಕರೆ ಮಾಡಿ ಅಳಲು ತೋಡಿಕೊಂಡರು. ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ವಾಸ್ತವದ ಅವಲೋಕನ ಮಾಡಿದ ಪತ್ರಿಕೆಗೆ ಈ ಅಳಲು ಅವರೊಬ್ಬರದ್ದೇ ಅಲ್ಲ ಎಂಬುದು ಗಮನಕ್ಕೆ ಬಂತು.
24X7 ನೀರು ಪೂರೈಕೆ ಹೊಣೆ ಹೊತ್ತಿರುವ ಎಲ್ ಅಂಡ್ ಟಿ, ಒಳ ಚರಂಡಿ ಸೇರಿ ವಿವಿಧ ಕಾಮಗಾರಿಗೆ ಮಹಾನಗರ ಪಾಲಿಕೆ ನಗರದ ಬಹುತೇಕ ರಸ್ತೆಗಳನ್ನು ಅಗೆದಿದ್ದರಿಂದ ಸಮಸ್ಯೆ ಹೆಚ್ಚಾಗಿದೆ. ಮಳೆಗಾಲ ಇರುವುದರಿಂದ ತೊಂದರೆಯ ತೀವ್ರತೆ ಇನ್ನೂ ಹೆಚ್ಚಿದೆ. ತಗ್ಗುಗಳನ್ನು ಮುಚ್ಚದೆ ಬಿಟ್ಟಿರುವುದರಿಂದ ಅದರಲ್ಲಿ ನೀರು ನಿಲ್ಲುತ್ತದೆ. ಪಕ್ಕದಲ್ಲಿ ಹಾಕಿದ ಮಣ್ಣು ಮಳೆ ನೀರಿನೊಂದಿಗೆ ಹರಿಯುವುದರಿಂದ ರಸ್ತೆಗಳೆಲ್ಲ ಕೆಸರುಮಯವಾಗುತ್ತದೆ.
‘ನಮ್ಮ ಕಾಲೊನಿಯ ಎಲ್ಲ ರಸ್ತೆಗಳನ್ನು ಎಲ್ ಆಂಡ್‌ಟಿ ಟಿ ಹಾಳುಮಾಡುತ್ತಿದೆ. ಅಡ್ಡಾಡಲು ಸಾಧ್ಯವಿಲ್ಲದಂತೆ ರಸ್ತೆಗಳು ಜಾರುತ್ತಿವೆ. ಇದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ತಕ್ಷಣವೇ ಕಾಂಕ್ರೀಟ್ ಹಾಕಿ ತಗ್ಗುಗಳನ್ನು ಮುಚ್ಚಬೇಕು’ ಎಂದು ಬಸವೇಶ್ವರ ಕಾಲೊನಿ ನಿವಾಸಿಯೊಬ್ಬರು ಒತ್ತಾಯಿಸಿದರು.
‘ತಗ್ಗು ಮುಚ್ಚಿ ಜನರಿಗೆ ಅಡ್ಡಾಡಲು ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದು ಎಲ್ ಅಂಡ್ ಟಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಎಲ್ಲಿ ಸಮಸ್ಯೆ ಇದೆ ಎನ್ನುವ ಬಗ್ಗೆ ತಿಳಿಸಿದರೆ ಭೇಟಿ ನೀಡಿ ಪರಿಶೀಲಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ನಮ್ಮ ಮನೆ ಮುಂದೆ ಕಾಮಗಾರಿಗಾಗಿ ರಸ್ತೆ ಅಗೆದಿದ್ದಾರೆ. ನನ್ನ ಮಗನ ಶಾಲಾ ವಾಹನ ಮೊದಲು ಇಲ್ಲೇ ಬರುತ್ತಿತ್ತು. ಈಗ ಮುಖ್ಯ ರಸ್ತೆಗೆ ಹೋಗಿ ಬಿಟ್ಟು, ಕರೆದುಕೊಂಡು ಬರಬೇಕು. ಮಳೆಯಾದಾಗ ಎರಡು ದಿನ ನೀರು ನಿಲ್ಲುತ್ತದೆ. ಮನೆಯಿಂದ ಹೊರಗೆ ಬರಲು ಆಗುವುದಿಲ್ಲ. ವಾಹನಗಳು ಆಡ್ಡಾಡುವಾಗ ನೀರು ಸಿಡಿದು ಕಾಂಪೌಂಡ್ ಸಹ ಅಂದಗೆಟ್ಟಿದೆ. ಮಳೆಗಾಲ ಮುಗಿದ ಮೇಲೆ ರಸ್ತೆ ಅಗೆಯುವ ಕೆಲಸಗಳನ್ನು ಮಾಡಲಿ’ ಎಂದು ಶಾಸ್ತ್ರಿ ನಗರದ ರಘು ಅವರು ಆಗ್ರಹಿಸಿದರು.
ಯಾರು ಏನೆಂದರು?
ಕಾಮಗಾರಿಗಾಗಿ ಅಗೆದ ತಗ್ಗು ಮುಚ್ಚುವುದು ಎಲ್ ಅಂಡ್ ಟಿ ಅವರದ್ದೇ ಜವಾಬ್ದಾರಿ. ಕೆಲಸ ನಿಲ್ಲಿಸಲು ಆಗುವುದಿಲ್ಲ. ತಗ್ಗುಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಪೈಪ್ ಹಾಕಿದ ಬಳಿಕ ಸೋರಿಕೆ ಕಂಡು ಬಂದರೆ ಎಂಬ ಕಾರಣಕ್ಕೆ ವಿವಿಧ ಪರೀಕ್ಷೆ ನಡೆಸಲು ಕೆಲದಿನ ಹಾಗೆ ಬಿಡುತ್ತಿದ್ದರು. ತಗ್ಗು ಮುಚ್ಚುವ ಕಾರ್ಯ ವೇಗಗೊಳಿಸಲು ಸೂಚಿಸುತ್ತೇನೆ
-ಆರ್.ಪಿ.ಜಾಧವ, ಕೆಯುಐಎಫ್‌ಡಿಸಿ ಅಧೀಕ್ಷಕ ಎಂಜಿನಿಯರ್
ನಗರದ ಎಲ್ಲೆಡೆ ಇದೇ ಸಮಸ್ಯೆ ಇದೆ. ಕೆಲಸಗಾರರನ್ನು ಕೇಳಿದರೆ ಮೇಲಿನವರಿಗೆ ಹೇಳುತ್ತೇವೆ ಎಂದು ಸುಮ್ಮನಾಗುತ್ತಾರೆ. ರಸ್ತೆಯಲ್ಲಿ ತೆಗೆದ ತಗ್ಗುಗಳನ್ನು ಮುಚ್ಚದೇ ಹಾಗೇ ಬಿಟ್ಟಿದ್ದಾರೆ
-ಎಸ್.ಆರ್.ಕುಲಕರ್ಣಿ, ಎಸ್‌ಬಿಐ ಕಾಲೊನಿ ನಿವಾಸಿ
ಎಸ್‌ವಿಪಿ ವೃತ್ತದಿಂದ ಪಿಡಿಎ ರಸ್ತೆಯಲ್ಲಿ ಅಡ್ಡಲಾಗಿ ತಗ್ಗುಗಳಿವೆ. ಬಳಹ ದಿನಗಳ ನಂತರ ಇಲ್ಲಿ ಬೈಕ್ ತೆಗೆದುಕೊಂಡು ಬಂದರೆ ಅಪಾಯ ಎದುರಾಗಲಿದೆ
-ಸೋಮಶೇಖರ, ಆಯ ತಪ್ಪಿ ಬೈಕ್ ಮೇಲಿಂದ ಬಿದ್ದ ಯುವಕ, ನಗರೇಶ್ವರ ಕಾಲೊನಿ
ಪೈಪ್ ಹಾಕುವುದು ಒಂದೇ ನಮ್ಮ ಕೆಲಸವಾದ್ದರಿಂದ ಮಳೆಗಾಲ ಮುಗಿಯುವವರೆಗೆ ಕಾಮಗಾರಿ ನಿಲ್ಲಿಸಲು ಆಗುವುದಿಲ್ಲ. ರಿಸ್ಟೊರೇಶನ್ ಆರಂಭ ಮಾಡಲಾಗಿದೆ
-ಕುಮಾರಸೇನ, ನಗರ ಯೋಜನಾ ವ್ಯವಸ್ಥಾಪಕ, ಎಲ್ ಅಂಡ್ ಟಿ ಕಂಪನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.