
ಕಲಬುರಗಿ: ‘ರಾಜಶ್ರೀ ಶಾಹೂ ಮಹಾರಾಜರು ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿಯಾಗಿ ಅಶ್ಪೃಷ್ಯರು ಮತ್ತು ಕೆಳವರ್ಗದ ಜನರ ಏಳಿಗೆಗೆ ಶ್ರಮಿಸಿದರು. ಅವರ ಸಮಾಜೋ ರಾಜಕೀಯ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಆದ್ದರಿಂದ ಶಾಹೂ ಮಹಾರಾಜರ ಇತಿಹಾಸ ಮತ್ತು ಚಿಂತನೆಗಳನ್ನು ಸಮಾಜದ ಮುಂದೆ ತೆರೆದಿಡಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಮರಾಠ ರಾಜ ಮನೆತನಗಳು ಹಾಗೂ ರಾಜಶ್ರೀ ಶಾಹೂ ಮಹಾರಾಜರ ಸಮಾಜೋ ರಾಜಕೀಯ ಚಿಂತನೆಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ತಳಸಮುದಾಯ ಮತ್ತು ಅಹಿಂದ ವರ್ಗದ ಸುಧಾರಣೆಗೆ ಅಪಾರ ಕೊಡುಗೆಯನ್ನು ಶಾಹೂ ಮಹಾರಾಜರು ನೀಡಿದ್ದಾರೆ. ಮೀಸಲಾತಿ ಮೂಲಕ ಕೆಳ ಹಿಂದುಳಿದ ಸಮುದಾಯಗಳನ್ನು ಮೇಲೆತ್ತಲು ಶ್ರಮಿಸಿರುವ ಛತ್ರಪತಿ ಶಾಹೂ ಮಹಾರಾಜರನ್ನು ರಾಷ್ಟ್ರದ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಸರ್ಕಾರ ಘೋಷಿಸಿಬೇಕು’ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಆಶಯ ನುಡಿಗಳನ್ನಾಡಿ, ‘ತಾನು ಬೆಳೆದು ಇತರರನ್ನೂ ಬೆಳೆಸುವುದು ಶಾಹೂ ಮತ್ತು ಶಿವಾಜಿ ಮಹಾರಾಜರ ಉದ್ದೇಶವಾಗಿತ್ತು’ ಎಂದರು.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್ ಮಾತನಾಡಿ, ‘ರಾಜ್ಯದಲ್ಲಿ ಮರಾಠ ಜನಾಂಗ ತೀರ ಹಿಂದುಳಿದ ಸಮುದಾಯವಾಗಿದೆ. ಕಾಂಗ್ರೆಸ್ ಸರ್ಕಾರ ಬಜೆಟ್‍ನಲ್ಲಿ ₹187 ಕೋಟಿ ಅನುದಾನ ಕೊಟ್ಟಿದೆ. ಮರಾಠ ಸಮಾಜದವರು ಶಿಕ್ಷಣ ಸೇರಿದಂತೆ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಂಡು ಪ್ರಗತಿ ಕಂಡುಕೊಳ್ಳಬೇಕು’ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಎಸ್. ಉಡಿಕೇರಿ ಅಧ್ಯಕ್ಷತೆ ವಹಿಸಿ, ‘ಭಾಷೆ, ಕಲೆ, ಸಾಹಿತ್ಯ, ನಾಟಕ, ಸಿನಿಮಾ ಜನಜೀವಾಳವಾಗಿದ್ದು, ಇವುಗಳ ಸತ್ವ ಮತ್ತು ಚಿಂತನೆಗಳು ವಿಶ್ವವಿದ್ಯಾಲಯಗಳಿಂದಲೇ ಆಗಬೇಕಿದೆ’ ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಪ್ರಾಸ್ತಾವಕವಾಗಿ ಮಾತನಾಡಿ, ‘1902ರಲ್ಲಿ ಶಾಹೂ ಮಹಾರಾಜರು ಮೀಸಲಾತಿ ಜಾರಿಗೆ ತಂದರು’ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ, ಪಾಲಿ ಸೇರಿದಂತೆ 5 ನಿಕಾಯಗಳಲ್ಲಿ ಅಧ್ಯಯನ ಮಾಡಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ನಿಗಮದಿಂದ ಚಿನ್ನದ ಪದಕ ನೀಡುವಂತೆ ಕೋರಿದರು. ಇದಕ್ಕೆ ನಿಗಮದ ಅಧ್ಯಕ್ಷ ಮರಿಯೋಜಿರಾವ್ ಸಮ್ಮತಿಸಿದರು.
ಕುಲಸಚಿವ ಪ್ರೊ.ರಮೇಶ ಲಂಡನಕರ್, ದಿನಕರ್ ಮೋರೆ ಉಪಸ್ಥಿತರಿದ್ದರು. ಕಲಾ ನಿಕಾಯದ ಡೀನ್ ಪ್ರೊ.ಅಬ್ದುಲ್ ರಬ್ ಉಸ್ತಾದ, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ರಮೇಶ್ ರಾಠೋಡ ಇತರರು ಹಾಜರಿದ್ದರು. ಸಂತೋಷ ಕಂಬಾರ ಕಾರ್ಯಕ್ರಮ ನಿರ್ವಹಿಸಿದರು. ವಿಚಾರ ಸಂಕಿರಣದಲ್ಲಿ ಮೂರು ಗೋಷ್ಠಿಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.