ADVERTISEMENT

ಕಲಬುರಗಿ: ಸಚಿವ ದರ್ಶನಾಪುರಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 4:17 IST
Last Updated 4 ಜೂನ್ 2023, 4:17 IST
ಸಚಿವರಾದ ಬಳಿಕ ಮೊದಲ ಬಾರಿಗೆ ಕಲಬುರಗಿಗೆ ಬಂದ ಶರಣಬಸಪ್ಪ ದರ್ಶನಾಪುರ ಅವರನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ, ಹುಲಿಗೆಪ್ಪ ಕನಕಗಿರಿ, ಚೇತನ್ ಗೋನಾಯಕ ಸೇರಿದಂತೆ ಇತರರು ಇದ್ದರು
ಸಚಿವರಾದ ಬಳಿಕ ಮೊದಲ ಬಾರಿಗೆ ಕಲಬುರಗಿಗೆ ಬಂದ ಶರಣಬಸಪ್ಪ ದರ್ಶನಾಪುರ ಅವರನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ, ಹುಲಿಗೆಪ್ಪ ಕನಕಗಿರಿ, ಚೇತನ್ ಗೋನಾಯಕ ಸೇರಿದಂತೆ ಇತರರು ಇದ್ದರು   

ಕಲಬುರಗಿ: ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕ್ರೇನ್ ಮೂಲಕ ಬೃಹತ್ ಹೂಮಾಲೆ ಹಾಕಿ ಸನ್ಮಾನಿಸಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಕಾಂಗ್ರೆಸ್ ಮುಖಂಡ, ಪಾಲಿಕೆ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ ನೇತೃತ್ವದಲ್ಲಿ ಜೆಸಿಬಿ ಮೂಲಕ ಹೂವಿನ ಸುರಿಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ದರ್ಶನಾಪುರ ಅವರು ಶುಕ್ರವಾರ ಸಂಜೆಯೇ ಕಲಬುರಗಿಗೆ ಬರಬೇಕಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ಬದಲಾಗಿದ್ದರಿಂದ ರೈಲಿನ ಮೂಲಕ ಶನಿವಾರ ಬೆಳಿಗ್ಗೆ ನಗರಕ್ಕೆ ಬಂದರು. ಹಾಸನ–ಸೋಲಾಪುರ ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂತು. ಅಲ್ಲಿಯವರೆಗೂ ಅಭಿಮಾನಿಗಳು ಕ್ರೇನ್‌ನಲ್ಲಿ ಬೃಹತ್ ಹಾರ ಇರಿಸಿಕೊಂಡು ಕಾಯುತ್ತಿದ್ದರು. ಸಚಿವರು ಬಂದ ನಂತರ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.

ADVERTISEMENT

ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಪಿಂಟು ಸ್ವಾಮಿ, ಮಹೇಶ ಹೊಸೂರಕರ್, ನಾಗೇಶ ಮಠಪತಿ, ಚೇತನ್ ಗೋನಾಯಕ, ಸೋಮಶೇಖರ ಗೋನಾಯಕ, ಅಣ್ಣಾರಾವ ಧುತ್ತರಗಾಂವ್, ಮಜರ್ ಹುಸೇನ್, ರಾಜಗೋಪಾಲರೆಡ್ಡಿಘಿ, ವಿಜಯಕುಮಾರ, ಬಸನಗೌಡ ಪಾಟೀಲ್, ಸುನೀಲ್ ಹುಡ್ಗಿ ಸೇರಿ ಇತರರಿದ್ದರು.

ಕಾಣದ ಭದ್ರತೆ: ಕ್ಯಾಬಿನೆಟ್ ದರ್ಜೆಯ ಸಚಿವರು ಬರುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡುವುದು ವಾಡಿಕೆ. ಆದರೆ, ಸಚಿವ ದರ್ಶನಾಪುರ ಬಂದ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಕಾಣಲಿಲ್ಲ. ಇದರಿಂದಾಗಿ ಸಚಿವರ ಅಭಿಮಾನಿಗಳು ಜನನಿಬಿಡ ವೃತ್ತದಲ್ಲಿ ಎಲ್ಲಿ ಬೇಕೆಂದರಲ್ಲಿ ನಿಂತಿದ್ದರು. ಇದರಿಂದ ವಾಹನಗಳ ದಟ್ಟಣಿ ಕಂಡು ಬಂತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.