ADVERTISEMENT

ಕಲಬುರಗಿ: ಮೂಲಸೌಕರ್ಯ ವಂಚಿತ ಸ್ವಾರಗೇಟ್‌ ನಗರ

ಮಹಾನಗರ ಪಾಲಿಕೆಗೆ ಅಲೆದಾಡಿ ಬೇಸತ್ತ ಕಾಲೊನಿಯ ಜನ; ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:33 IST
Last Updated 29 ಜುಲೈ 2025, 4:33 IST
ಕಲಬುರಗಿಯ ಆಳಂದ ರಿಂಗ್‌ ರಸ್ತೆ ಹತ್ತಿರದ ಸ್ವಾರಗೇಟ್‌ ನಗರದ ರಸ್ತೆಯ ದುಸ್ಥಿತಿ             ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌
ಕಲಬುರಗಿಯ ಆಳಂದ ರಿಂಗ್‌ ರಸ್ತೆ ಹತ್ತಿರದ ಸ್ವಾರಗೇಟ್‌ ನಗರದ ರಸ್ತೆಯ ದುಸ್ಥಿತಿ             ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌   

ಕಲಬುರಗಿ: ನಗರದ ಆಳಂದ ರಿಂಗ್‌ ರಸ್ತೆ ಹತ್ತಿರದ ಸ್ವಾರಗೇಟ್‌ ನಗರ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮೂಲಸೌಕರ್ಯಕ್ಕಾಗಿ ಕಾಲೊನಿಯ ಜನ ಮಹಾನಗರ ಪಾಲಿಕೆಗೆ ಅಲೆದಾಡಿ ಬೇಸತ್ತಿದ್ದಾರೆ.

ಸ್ವಾರಗೇಟ್‌ ನಗರದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲ ಧರ್ಮ, ಜಾತಿಯ ಜನರಿದ್ದಾರೆ. ಕೂಲಿ ಕಾರ್ಮಿಕರು, ರೈತ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು, ತರಕಾರಿ ಮಾರಾಟಗಾರರು ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ.

ಕಾಲೊನಿಯಲ್ಲಿ ತಗ್ಗು–ದಿನ್ನೆಗಳಿಂದ ಕೂಡಿದ ಮಣ್ಣಿನ ರಸ್ತೆಗಳಿದ್ದು, ಮಳೆಯಿಂದಾಗಿ ಹೊಂಡಗಳು ಬಿದ್ದಿವೆ. ರಸ್ತೆಗಳೆಲ್ಲ ಮಳೆ ನೀರಿನಿಂದ ಕೆಸರುಮಯವಾಗಿವೆ. ಬೈಕ್‌ ಸವಾರರು ಮತ್ತು ಸಾರ್ವಜನಿಕರು ಪ್ರಯಾಸಪಟ್ಟು ಓಡಾಡುವಂತಾಗಿದೆ. ರಸ್ತೆ ಬದಿ ಸಂಚರಿಸಿದರೂ ಕಾಲುಗಳಿಗೆ ಕೆಸರು ಮೆತ್ತಿಕೊಳ್ಳುತ್ತದೆ. ಕೆಲವರು ತಮ್ಮ ಮನೆಯ ಎದುರು ಜಲ್ಲಿಕಲ್ಲುಗಳನ್ನು ತಂದು ಹಾಕಿದರೂ ಸಮಸ್ಯೆಗೆ ಮುಕ್ತಿ ಸಿಗದಂತಾಗಿದೆ.

ADVERTISEMENT

ಚರಂಡಿ, ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಲ್ಲಿ ಬಳಕೆ ಮಾಡಿದ ತ್ಯಾಜ್ಯ ನೀರು ಮುಂದೆ ಸಾಗುವುದಿಲ್ಲ. ಮನೆಗಳ ಗೋಡೆಗೆ ತಾಗಿಸಿ ಇಂಗುಗುಂಡಿ ನಿರ್ಮಿಸಿಕೊಂಡಿದ್ದರೂ ಅದು 2–3 ತಿಂಗಳಲ್ಲಿ ಭರ್ತಿಯಾಗಿ ಎಲ್ಲೆಂದರಲ್ಲಿ ಗಲೀಜು ನೀರು ಹರಿಯುತ್ತದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆ. ದುರ್ನಾತ ಬೀರುವ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಜನರಲ್ಲಿ ಆವರಿಸಿದೆ.

‘ಪಾಲಿಕೆಯಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಇಲ್ಲ. ನಿವಾಸಿಗಳು ಕೊಳವೆಬಾವಿ ನೀರನ್ನು ಅವಲಂಬಿಸಿದ್ದು, ಅವು ಕೂಡ ಬತ್ತಿವೆ. ಶೀಘ್ರ ಪೈಪ್‌ಲೈನ್‌ ಹಾಕಿ ನೀರು ಸರಬರಾಜು ಮಾಡಬೇಕು. ಕಾಲೊನಿಯಲ್ಲಿ ಹಾವು–ಚೇಳಿನ ಕಾಟವಿದ್ದು, ವಿದ್ಯುತ್‌ ಕಂಬಗಳಿಗೆ ಬಲ್ಬ್‌ ಅಳವಡಿಸಬೇಕು’ ಎಂದು ನಿವಾಸಿಗಳಾದ ಪರಮೇಶ್ವರ ನಿಂಬರ್ಗಾ, ಸಿದ್ರಾಮಪ್ಪ ಪಾಟೀಲ, ಈರಣ್ಣ ಕುಂಬಾರ ಒತ್ತಾಯಿಸಿದರು.

‘ಕೆಸರುಮಯ ರಸ್ತೆಗಳ ಕಾರಣ ಶಾಲಾ ವಾಹನ ಮತ್ತು ಆಟೊ ಚಾಲಕರು ಸ್ವಾರಗೇಟ್‌ ನಗರಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ರಸ್ತೆಗಳಲ್ಲಿ ಸಂಚರಿಸದಂತಾಗಿದೆ. ಹಲವರು ಕೆಸರಲ್ಲಿ ಬಿದ್ದು ಮನೆಗೆ ವಾಪಸ್‌ ಮರಳುತ್ತಾರೆ’ ಎಂದು ಸ್ವಾರಗೇಟ್‌ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಅಣ್ಣಪ್ಪ ವಾಡಿ, ಕಾಯಕಯೋಗಿ ಸೇವಾಸಂಸ್ಥೆ ಅಧ್ಯಕ್ಷ ಕೇದಾರನಾಥ ಕುಲಕರ್ಣಿ ಸಮಸ್ಯೆಯನ್ನು ಬಿಚ್ಚಿಟ್ಟರು.

‘ಮೂಲಸೌಕರ್ಯಕ್ಕಾಗಿ ತಾಜಸುಲ್ತಾಪುರ ಗ್ರಾಮ ಪಂಚಾಯಿತಿಗೆ ಮನವಿ ಕೊಡಲಾಗಿತ್ತು. ತಮ್ಮ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ಶೇಖ್‌ರೋಜಾ ಗ್ರಾಮದ ಸರ್ವೆ ನಂ. 51/1ರಲ್ಲಿ ಬರುವ ಸ್ವಾರಗೇಟ್‌ ನಗರ 1997ರಲ್ಲೇ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದೆ ಎಂದು ಪಿಡಿಒ ಹಿಂಬರಹ ಕೊಟ್ಟಿದ್ದಾರೆ. ಇತ್ತ ಪಾಲಿಕೆಯ ಮೇಯರ್‌, ಆಯುಕ್ತರು ಸೇರಿದಂತೆ ಅಧಿಕಾರಿಗಳು ನಮ್ಮ ಮನವಿಗೆ ಕ್ಯಾರೇ ಎನ್ನುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾರಗೇಟ್‌ ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದು
ಮನೆಯಲ್ಲಿ ಬಟ್ಟೆ ಬಾಂಡೆ ತೊಳೆದ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಎಲೆಕ್ಷನ್‌ ಇದ್ದಾಗ ಬಂದ ಜನ ಗೆದ್ದ ಮೇಲೆ ನಮ್ಮ ಓಣಿಯತ್ತ ತಿರುಗಿಯೂ ನೋಡಿಲ್ಲ
ಮಹಾದೇವಿ ಈರಣ್ಣ ಕುಂಬಾರ ಸ್ವಾರಗೇಟ್‌ ನಗರದ ನಿವಾಸಿ
ಸ್ವಾರಗೇಟ್‌ ನಗರಕ್ಕೆ ಮೂಲಸೌಕರ್ಯ ಒದಗಿಸುವಂತೆ ಮಹಾನಗರ ಪಾಲಿಕೆಗೆ ಹತ್ತಾರು ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಅನಿವಾರ್ಯವಾಗಲಿದೆ
ಅಣ್ಣಪ್ಪ ವಾಡಿ ಸ್ವಾರಗೇಟ್‌ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ

‘ಸ್ವಾರಗೇಟ್‌ ನಗರಕ್ಕೆ ಶೀಘ್ರ ಭೇಟಿ’

‘ಎಂಜಿನಿಯರ್‌ ಜೊತೆಗೆ ಸ್ವಾರಗೇಟ್‌ ನಗರಕ್ಕೆ ಈ ವಾರದಲ್ಲಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಕಾಲೊನಿಯು ಪಾಲಿಕೆ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ? ಬಡಾವಣೆ ಅನುಮೋದನೆ ಪಡೆದಿದೆಯೋ ಇಲ್ಲವೋ ಎಂದು ಪರಿಶೀಲಿಸಲಾಗುವುದು. ಜೊತೆಗೆ ನಿವಾಸಿಗಳಿಗೆ ಮೂಲಸೌಕರ್ಯ ಹೇಗೆ ಒದಗಿಸಬಹುದು ಎಂಬುದನ್ನು ನೋಡುತ್ತೇವೆ’ ಎಂದು ಪಾಲಿಕೆಯ ಆಯುಕ್ತ ಅವಿನಾಶ ಶಿಂದೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಬಡಾವಣೆಯು ಅನುಮೋದನೆ ಪಡೆದಿದ್ದರೆ ಒಳಚರಂಡಿ ಚರಂಡಿ ರಸ್ತೆ ವಿದ್ಯುತ್‌ ಸೌಲಭ್ಯ ಕೊಡಲು ತೊಂದರೆ ಆಗುವುದಿಲ್ಲ. ನಗರದ ಹೊರವಲಯದ ಅನುಮೋದನೆ ಪಡೆಯದ ಬಡಾವಣೆಗಳಲ್ಲಿ ಈ ಸಮಸ್ಯೆ ಎದುರಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.