ADVERTISEMENT

ಕಲಬುರಗಿ | '₹10 ಲಕ್ಷ ಮೌಲ್ಯದ ಸ್ವತ್ತು ಜಪ್ತಿ'

ವಿವಿಧೆಡೆ ನಡೆದ ನಾಲ್ಕು ಕಳವು ಪ್ರಕರಣ ಭೇದಿಸಿದ ಜಿಲ್ಲಾ ಪೊಲೀಸರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:29 IST
Last Updated 16 ಡಿಸೆಂಬರ್ 2025, 6:29 IST
ಬಂಧಿತ ಆರೋಪಿಗಳಿಂದ ಮೂರು ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದ ಚಿನ್ನಾಭರಣಗಳು...
ಬಂಧಿತ ಆರೋಪಿಗಳಿಂದ ಮೂರು ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದ ಚಿನ್ನಾಭರಣಗಳು...   

ಕಲಬುರಗಿ: ಜಿಲ್ಲೆಯ ವಿವಿಧೆಡೆ ನಡೆದ ನಾಲ್ಕು ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಆರೋಪಿಗಳಿಂದ ಒಟ್ಟು 77 ಗ್ರಾಂ ಚಿನ್ನಾಭರಣ, 202 ಗ್ರಾಂ ಬೆಳ್ಳಿ ಆಭರಣ, ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹10 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮನೆಯಲ್ಲಿ ಕಳವು:

ADVERTISEMENT

ಜೇವರ್ಗಿ ಠಾಣೆ ವ್ಯಾಪ್ತಿಯ ಗುಡೂರ (ಎಸ್‌.ಎ) ಗ್ರಾಮದಲ್ಲಿ ಹಗಲು ಹೊತ್ತಿನಲ್ಲೇ (ಸಂಜೆ 5.15) ಮನೆಗೆ ಹಾಕಿದ್ದ ಕೀಲಿ ಒಡೆದು 109 ಗ್ರಾಂ ಚಿನ್ನಾಭರಣ, 212 ಗ್ರಾಂ ಬೆಳ್ಳಿ ಆಭರಣ ಹಾಗೂ ₹1,800 ನಗದು ಕಳವು ಮಾಡಲಾಗಿತ್ತು. 

ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಸಿಪಿಐ ರಾಜೇಸಾಹೇಬ ನದಾಫ್‌ ನೇತೃತ್ವದಲ್ಲಿ ಪಿಎಸ್‌ಐ ಕಲಾವತಿ, ಪಿಎಸ್‌ಐ ಗಜಾನಂದ ಬಿರಾದಾರ ಹಾಗೂ ಅವರ ತಂಡವು ಯಡ್ರಾಮಿ ಪಟ್ಟಣದ ನಿವಾಸಿ ಸುನೀಲ ಪವಾರ ಎಂಬಾತನನ್ನು ಬಂಧಿಸಿದೆ. ಒಟ್ಟು 51 ಗ್ರಾಂ ಚಿನ್ನಾಭರಣ ಹಾಗೂ 212 ಗ್ರಾಂ ಬೆಳ್ಳಿ ಆಭರಣ ಜಪ್ತಿ ಮಾಡಿಕೊಳ್ಳಲಾಗಿದೆ.

‘ಬಂಧಿತ ಆರೋಪಿ ಸುನೀಲ ಮೇಲೆ ಯಡ್ರಾಮಿ ಠಾಣೆಯಲ್ಲಿ ಈ ಹಿಂದೆಯೂ ಹಗಲು ಹೊತ್ತಿನಲ್ಲೇ ಕಳವು ಮಾಡಿದ ಮೂರು ಪ್ರಕರಣಗಳಿವೆ. ಕೀಲಿ ಹಾಕಿದ ಮನೆಗಳನ್ನು ಗುರುತಿಸಿ ಹಗಲಿನಲ್ಲೇ ಕಳುವುದು ಆತನ ಶೈಲಿಯಾಗಿತ್ತು’ ಎಂದು ಶ್ರೀನಿವಾಸುಲು ವಿವರಿಸಿದರು.

ಚಾಕುವಿನಿಂದ ಹಲ್ಲೆ ನಡೆಸಿ ಕಳವು:

ಜೇವರ್ಗಿ ಠಾಣೆ ವ್ಯಾಪ್ತಿಯ ಇಜೇರಿ ಗ್ರಾಮದಲ್ಲಿ ಡಿಸೆಂಬರ್‌ 1ರಂದು ನಸುಕಿನ 4 ಗಂಟೆ ಹೊತ್ತಿಗೆ ದುಷ್ಕರ್ಮಿಯೊಬ್ಬ ಮಹಿಳೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ 25 ಗ್ರಾಂ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದ. ಈ ಕುರಿತು ಚಿನ್ನಾಭರಣ ಕಳೆದುಕೊಂಡ ಅಮೀರಬೀ ಮಹ್ಮದ್‌ ಪಟೇಲ್‌ ಖಾಲೇಗೌಡ ದೂರು ನೀಡಿದ್ದರು.

ಈ ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಸೀನ್‌ ಆಫ್‌ ಕ್ರೈಂ ತಂಡ ಹಾಗೂ ಶ್ವಾನ ದಳದ ಮೂಲಕ ದೊರೆತ ಸುಳಿವು ಆರೋಪಿ ಪತ್ತೆಗೆ ನೆರವಾಯಿತು. ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಅದೇ ಗ್ರಾಮದ ಮಹ್ಮದ್ ಯುನೂಸ್‌ ಪಟೇಲ್‌ (26 ವರ್ಷ) ಬಂಧಿತ ಆರೋಪಿ.

‘ಅಮೀರಬೀ ಅವರಿಗೆ ಆರೋಪಿ ಯುನೂಸ್‌ ದೂರದ ಸಂಬಂಧಿ ಹಾಗೂ ವರಸೆಯಲ್ಲಿ ಮೊಮ್ಮಗನಾಗಬೇಕು. ಅಮೀರಬೀ ಮಕ್ಕಳು ಹೈದರಾಬಾದ್‌ನಲ್ಲಿದ್ದು, ಅವರು ಏಕಾಂಗಿಯಾಗಿ ನೆಲೆಸಿದ್ದಾರೆ. ಯುನೂಸ್‌ಗೆ ಕುಡಿತ ಚಟವಿದ್ದು, ಅಲ್ಲಲ್ಲಿ ಸಾಲ ಮಾಡಿಕೊಂಡಿದ್ದ. ಹಣಕ್ಕಾಗಿ ಆತ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನಸುಕಿನಲ್ಲೆ ಅಮೀರಬೀ ಮನೆಯ ಬಾಗಿಲು ಬಡಿದಿದ್ದ. ಅವರು ಬಾಗಿಲು ತೆಗೆದಾಗ ಕುತ್ತಿಗೆ ಹಿಡಿದು ನೂಕಿ, ಚಾಕುವಿನಿಂದ ಹಲ್ಲೆ ನಡೆಸಿ ಅವರ ಮೈ ಮೇಲೆ ಇದ್ದ 25 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ’ ಎಂದು ಅಡ್ಡೂರು ಶ್ರೀನಿವಾಸುಲು ಮಾಹಿತಿ ನೀಡಿದರು.

ಬೈಕ್‌ ಪತ್ತೆ: 

ಶಹಾಬಾದ್‌ ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಿದ್ದ ಸ್ಕೂಟರ್‌ ಕಳುವಾದ ಬಗೆಗೆ ಶಹಾಬಾದ್‌ನ ಬೆಂಡಿ ಬಜಾರ್‌ ನಿವಾಸಿ ಸೈಯದ್‌ ನೂರ್‌ ಎಂಬುವರು ನವೆಂಬರ್‌ 12ರಂದು ದೂರು ನೀಡಿದ್ದರು.

ಶಹಾಬಾದ್‌ನಲ್ಲಿ ಪದೇಪದೇ ಈತರಹ ಪ್ರಕರಣಗಳು ವರದಿಯಾದ ಕಾರಣ ಅವುಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ನಟರಾಜ ಲಾಡೆ, ಪಿಎಸ್‌ಐ ಶಾಮರಾಯ ಹಾಗೂ ಅವರ ತಂಡವು ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದಿದ್ದು, ಅವರಿಂದ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಡ್ಡೂರು ಶ್ರೀನಿವಾಸುಲು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಶಹಾಬಾದ್‌ ಇನ್‌ಸ್ಪೆಕ್ಟರ್ ನಟರಾಜ ಲಾಡೆ, ಜೇವರ್ಗಿ ಸಿಪಿಐ ರಾಜೇಸಾಹೇಬ್‌ ನದಾಫ್‌, ಪಿಎಸ್‌ಐಗಳಾದ ಕಲಾವತಿ, ಗಜಾನಂದ, ಶಾಮರಾಯ, ಬೆರಳಚ್ಚು ಪಿಎಸ್‌ಐ ಪದ್ಮಾವತಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಡ್ಡೂರು ಶ್ರೀನಿವಾಸುಲು ಪ್ರಶಂಸಾ ಪತ್ರಗಳನ್ನು ವಿತರಿಸಿದರು.

ಅಡ್ಡೂರು ಶ್ರೀನಿವಾಸುಲು
ಆರೋಪಿ ಚಿರಾಗ್‌ ರಾಠೋಡ
ಆರೋಪಿ ಮೊಹ್ಮದ್ ಯೂನುಸ್‌
ಸುನೀಲ ಪವಾರ

ಶಹಾಬಾದ್‌ನ ಎರಡು, ಜೇವರ್ಗಿಯ ಎರಡು ಪ್ರಕರಣ ಆರೋಪಿಗಳು ನ್ಯಾಯಾಂಗ ವಶಕ್ಕೆ ಇನ್ನುಳಿದ ನಾಲ್ವರ ಪತ್ತೆಗೆ ಮುಂದುವರಿದ ಕಾರ್ಯಾಚರಣೆ

‘ಬಾರಾಮತಿ ಗ್ಯಾಂಗ್‌’ ಕಳ್ಳನ ಬಂಧನ ‘ಶಹಾಬಾದ್‌ ತಾಲ್ಲೂಕಿನ ಹೊನಗುಂಟದ ಗ್ರಾಮದ ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಕೀಲಿ ಮುರಿದು ದೇವಿ ಕೊರಳಲಿದ್ದ 10 ಗ್ರಾಂ ಬಂಗಾರದ ಸರ ಕಳವಾದ ಬಗೆಗೆ ಅಕ್ಟೋಬರ್ 24ರಂದು ದೂರು ದಾಖಲಾಗಿತ್ತು. ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಅಂತರರಾಜ್ಯ ಕಳ್ಳನೊಬ್ಬನ್ನು ಪುಣೆಯಲ್ಲಿ ಬಂಧಿಸಿದ್ದಾರೆ. ಪುಣೆಯ ಬಾರಾಮತಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರದೇಶದ ವಂಜರವಾಡಿ ಗ್ರಾಮ ವ್ಯಾಪ್ತಿಯ ಜಿಜೋರಿ ನಿವಾಸಿ ಚಿರಾಗ‌್ ರಾಠೋಡ (26) ಬಂಧಿತ ಆರೋಪಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು. ‘ಆರೋಪಿ ಚಿರಾಗ್ ಬಾರಾಮತಿ ಗ್ಯಾಂಗ್‌ನ ಸದಸ್ಯ. ಈ ಗ್ಯಾಂಗ್‌ ದೇವಸ್ಥಾನಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತದೆ. ಈ ಪ್ರಕರಣದಲ್ಲಿ ಐವರು ಸೇರಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಕಳವು ಮಾಡಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ’ ಎಂದರು.