ADVERTISEMENT

2025 ಹಿಂದಣ ಹೆಜ್ಜೆ | ಕಲಬುರಗಿ: ಪ್ರತಿಭಟನೆಗಳ ಕಾವು, ಟೀಕಾಸ್ತ್ರಗಳ ನೋವು

ಸಂಕಷ್ಟದಿಂದ ಹೊರಬಾರದ ‘ಅನ್ನದಾತ’; ಬದುಕು ಕದಲಿಸಿದ ಪ್ರವಾಹ

ಬಸೀರ ಅಹ್ಮದ್ ನಗಾರಿ
Published 29 ಡಿಸೆಂಬರ್ 2025, 5:58 IST
Last Updated 29 ಡಿಸೆಂಬರ್ 2025, 5:58 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯ ಮುಂದಿನ ರಸ್ತೆಯಲ್ಲಿ ಪ್ರತಿಭಟನೆ ನಿಮಿತ್ತ ರೈತರು ಎತ್ತುಗಳನ್ನು ಕಟ್ಟಿದ್ದ ನೋಟ... –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯ ಮುಂದಿನ ರಸ್ತೆಯಲ್ಲಿ ಪ್ರತಿಭಟನೆ ನಿಮಿತ್ತ ರೈತರು ಎತ್ತುಗಳನ್ನು ಕಟ್ಟಿದ್ದ ನೋಟ... –ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್‌ ಆಜಾದ್   

ಕಲಬುರಗಿ: ಈ ವರ್ಷ ಜಿಲ್ಲೆಯು ಸಾಲು–ಸಾಲು ಪ್ರತಿಭಟನೆ, ರಾಜಕೀಯ ಕೆಸರೆರೆಚಾಟಕ್ಕೆ ಸಾಕ್ಷಿಯಾಯಿತು. ಅತಿವೃಷ್ಟಿ ಬೆಳೆ ನುಂಗಿದರೆ, ಪ್ರವಾಹ ಸ್ಥಿತಿ ಜನರ ಬದುಕು ಕದಲಿಸಿತು.

‘ಶೈಕ್ಷಣಿಕ ಕ್ರಾಂತಿ’ಯ ಹರಿಕಾರ ಶರಣಬಸವಪ್ಪ ಅಪ್ಪ ಅಗಲಿಕೆ, ಐಎಎಸ್‌ ಅಧಿಕಾರಿ ಮಹಾಂತೇಶ ಬೀಳಗಿ ಸಹಿತ ನಾಲ್ವರು ಜೇವರ್ಗಿ ಬಳಿ ಸಂಭವಿಸಿದ ಅಪಘಾತಕ್ಕೆ ಬಲಿಯಾದ ಘಟನೆಗಳು  ನೋವು ಹರಡಿದವು. ಮೇಳಕುಂದಾ (ಕೆ) ಗ್ರಾಮದಲ್ಲಿ ನಡೆದ ‘ಮರ್ಯಾದೆಗೇಡು ಹತ್ಯೆ’ ಈ ನೆಲದ ‘ಸೌಹಾರ್ದದ ಅಸ್ಮಿತೆ’ಗೆ ಕಪ್ಪು ಮಸಿ ಬಳಿಯಿತು.

‘ಬಿಸಿಲು ನಾಡ’ಲ್ಲಿ ದಾಖಲೆಯ 1,000 ಎಂಎಂಗೂ ಅಧಿಕ ಮಳೆ ಸುರಿದದ್ದು ‘ಸಮೃದ್ಧಿ ಸಂಕೇತ’ ಎನಿಸಿತು. ಬೆಳೆ ಹಾನಿಗೆ ನೂರಾರು ಕೋಟಿ ರೂಪಾಯಿ ಪರಿಹಾರ ಸಂದಿದ್ದು ಅನ್ನದಾತರ ‘ಸಂಕಷ್ಟ’ ತುಸು ತಗ್ಗಿಸಿತು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಸಲವೂ ಕುಸಿದು ರಾಜ್ಯಕ್ಕೇ ಕೊನೆಯ ಸ್ಥಾನ ಪಡೆಯಿತು.

ADVERTISEMENT

ಈ ವರ್ಷವೂ ರೈತರ ಸಂಕಷ್ಟ ತಪ್ಪಲಿಲ್ಲ. ಮುಂಗಾರು ಪೂರ್ವ ವರ್ಷಧಾರೆ ಮೂಡಿಸಿದ್ದ ಹರ್ಷವನ್ನು ಮಾನ್ಸೂನ್‌ ಮಳೆ ಕಸಿಯಿತು. ಅತಿವೃಷ್ಟಿಗೆ ಬರೋಬ್ಬರಿ ಜಿಲ್ಲೆಯಲ್ಲಿ 3.24 ಲಕ್ಷ ಹೆಕ್ಟೇರ್‌ಗಳಷ್ಟು ಬೆಳೆ ಹಾನಿಯಾಯಿತು. ಭೀಮೆ, ಕಾಗಿಣಾ ನದಿಗಳು ಉಕ್ಕಿ ಪ್ರವಾಹ ಸ್ಥಿತಿ ಎದುರಾಯಿತು. ಸೆ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರಾದಿಯಾಗಿ ಹಲವು ಸಚಿವರು ವೈಮಾನಿಕ ಸಮೀಕ್ಷೆ ಕೈಗೊಂಡರು. ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ಹೆಚ್ಚುರಿಯಾಗಿ ತಲಾ ₹8,500 ಪರಿಹಾರ ಘೋಷಿಸಿತು.

ಆಳಂದದಲ್ಲಿ 2023ರಲ್ಲಿ ನಡೆದ ಮತಕಳವು ಯತ್ನ ಪ್ರಕರಣ ಈ ವರ್ಷ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಪ್ರಕರಣದ ತನಿಖೆಯ ಹೊಣೆ ಹೊತ್ತ ಸಿಐಡಿ ಎಸ್‌ಐಟಿ ತಂಡವು ವಾರದ ಕಾಲ ಕಲಬುರಗಿಯಲ್ಲಿ ಬೀಡುಬಿಟ್ಟಿತು. ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಆದಿಯಾಗಿ ಪ್ರಕರಣದ ಆರೋಪಿಗಳ ಮನೆಗಳಲ್ಲಿ ಶೋಧಿಸಿ ದಾಖಲೆಗಳ ಜಪ್ತಿ ಮಾಡಿಕೊಂಡಿತು. ಚಾರ್ಜ್‌ಶೀಟ್‌ನಲ್ಲಿ ಸುಭಾಷ ಗುತ್ತೇದಾರ ಕೈವಾಡದ ಪ್ರಸ್ತಾಪವೂ ಆಯಿತು.

ಚಿತ್ತಾಪುರ ತಾಲ್ಲೂಕಿನಲ್ಲಿ ಕಾಗಿಣಾ ನದಿಯಲ್ಲಿ ಅಕ್ರಮ ಮರಳು ಮಾಫಿಯಾ ಸದ್ದು ಮೂರ್ನಾಲ್ಕು ತಿಂಗಳು ಮಾರ್ಧನಿಸಿತು.

ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ನಿಷೇಧ ಕೋರಿ ಸಚಿವ ಪ್ರಿಯಾಂಕ್‌ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರು. ಇದನ್ನು ಖಂಡಿಸಿ ಬಿಜೆಪಿ ‘ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್‌ ಅನ್ನೂ ಪ್ರೀತಿಸುತ್ತಾರೆ’ ಎಂಬ ಪೋಸ್ಟರ್‌ ಅಭಿಯಾನ ನಡೆಸಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ‘ಯಾರು ಸಂವಿಧಾನ ಪ್ರೀತಿಸುತ್ತಾರೋ, ಅವರು ದೇಶವನ್ನೂ ಪ್ರೀತಿಸುತ್ತಾರೆ’, ‘ಯಾರು ದೇಶವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್‌ ಅನ್ನು ಧಿಕ್ಕರಿಸುತ್ತಾರೆ’ ಎಂಬ ಪೋಸ್ಟರ್‌ ಅಂಟಿಸಿ ತಿರುಗೇಟು ನೀಡಿದರು.

ಜಾರಿದ ಮಾತು...

ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಸರ್ಕಾರ, ಅಧಿಕಾರಿಗಳನ್ನು ಟೀಕಿಸುವ ಭರದಲ್ಲಿ ‘ಜಿಲ್ಲಾಧಿಕಾರಿ’ ಜಾತಿ ನಿಂದಿಸಿ ವಿಚಾರಣೆ ಎದುರಿಸಿದರು. ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ‘ಅಸಂಸದೀಯ’ ಪದ ಬಳಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಕಾಂಗ್ರೆಸ್‌ ಬೆಂಬಲಿಗರು ‘ಚಿತ್ತಾಪುರ’ ಪ್ರವಾಸಿ ಮಂದಿರದಲ್ಲಿ ಘೇರಾವ್‌ ಹಾಕಿದ್ದು ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.

ಪದಗ್ರಹಣ 

ಇನ್ನುಳಿದಂತೆ ಖಾಜಾ ಬಂದಾನವಾಜ್‌ ದರ್ಗಾದ ಮುಖ್ಯಸ್ಥ ಮುಹಮ್ಮದ್ ಅಲಿ ಅಲ್‌ ಹುಸೇನಿ ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದರು. ಶರಣಬಸವ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಾಧಿಪತಿಯಾಗಿ ದಾಕ್ಷಾಯಣಿ ಎಸ್‌.ಅಪ್ಪ ಸೆ.3ರಂದು ಪದಗ್ರಹಣ ಮಾಡಿದರು. ಗುಲಬರ್ಗಾ ವಿವಿಗೆ ಸೆ.8ರಂದು ಪ್ರೊ.ಶಶಿಕಾಂತ ಉಡಿಕೇರಿ ಕುಲಪತಿಯಾಗಿ  ನೇಮಕವಾದರು. ಪ್ರವೀಣ ಪಾಟೀಲ ಹರವಾಳ ಜೆಸ್ಕಾಂ ಅಧ್ಯಕ್ಷರಾದರೆ, ‘ತಪಸ್ಸು’ ಮಾಡಿ ಅರುಣಕುಮಾರ ಎಂ.ಪಾಟೀಲ ಕೆಕೆಆರ್‌ಟಿಸಿ ಅಧ್ಯಕ್ಷರಾದರು. 

ಹಾಕಿಯಲ್ಲಿ ಮಿಂಚು

ಜಿಲ್ಲೆಯ ಕಿರಿಯ ಹಾಕಿಪಟುಗಳಾದ ಹರ್ಷವರ್ಧನ, ಕಿಶೋರ ಮತ್ತು ಸಮರ್ಥ ಹಾಕಿ ಕ್ರೀಡೆಯಲ್ಲಿ ಮಿಂಚು ಹರಿಸಿದರು. 69ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ ಆಯ್ಕೆಯಾದ ತಂಡದಲ್ಲಿ ಸ್ಥಾನಪಡೆದರು.

ಪ್ರಶಸ್ತಿ–ಪುರಸ್ಕಾರ

2025ನೇ ಸಾಲಿನ ಪ್ರಕಾಶನ ವಿಭಾಗದ ‘ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರಶಸ್ತಿ’ಯು ಕಲಬುರಗಿಯ ದತ್ತಾತ್ರೇಯ ಇಕ್ಕಳಕಿ ಅವರಿಗೆ ಒಲಿದು ಬಂತು. ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಶಹನಾಯಿ ವಾದಕ ನಿಂಗಪ್ಪ ಭಜಂತ್ರಿ ಈ ವರ್ಷ ರಾಜ್ಯ ಸರ್ಕಾರದ ₹5 ಲಕ್ಷ ಮೊತ್ತದ ‘ಜಾನಪದಶ್ರೀ ಪ್ರಶಸ್ತಿ’ಗೆ ಭಾಜನರಾದರೆ, ಸಾಂಪ್ರದಾಯಿಕ ಕುಸುರಿ ಕೆತ್ತನೆಯ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರಿಗೆ 2024ನೇ ಸಾಲಿನ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ ಸಂದಿತು. ರಾಜೋತ್ಸವ ಪ್ರಶಸ್ತಿ ವಿತರಣೆಯಲ್ಲಿ ಜಿಲ್ಲೆಯ ‘ಅನಾದರ’ ಮುಂದುವರಿಯಿತು. 

ನೆಟೆ ರೋಗ ಬಾಧಿತ ತೊಗರಿಗೆ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಬೀಡುಬಿಟ್ಟಿದ್ದ ರೈತರ ಎತ್ತಿನ ಬಂಡಿಗಳು...
ಕಲಬುರಗಿಯ ಐವಾನ್‌–ಎ–ಶಾಹಿ ರಸ್ತೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಆಶಾ ಕಾರ್ಯಕರ್ತೆಯರು
ಕಲಾವಿದ ಚಂದ್ರಶೇಖರ ವೈ.ಶಿಲ್ಪಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ 2024ನೇ ಸಾಲಿನ ‘ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ’ ಪಡೆದ ಕ್ಷಣ...
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.16ರಂದು ನಡೆದ ಆರ್‌ಎಸ್‌ಎಸ್‌ ಪಥಸಂಚಲನದ ನೋಟ...
ಕಲಬುರಗಿ ‌ಜಿಲ್ಲೆಯ ಅಫಜಲಪುರ ‌ತಾಲ್ಲೂಕಿನ ಗಾಣಗಾಪುರದಲ್ಲಿ ಭೀಮಾನದಿ ಪ್ರವಾಹದ ನೀರು‌ ಹೊಕ್ಕಿದ್ದ ಮನೆಗಳ‌ ನಿವಾಸಿಗಳು ತಮ್ಮ ಮನೆಯ ಸಾಮಾನುಗಳನ್ನು ಸುರಕ್ಷಿತ‌ ಸ್ಥಳಕ್ಕೆ ಸಾಗಿಸಿದರು 
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ‘ಭೀಮ ನಡೆ’ ಮತ್ತು ಸಂವಿಧಾನ ಸಮಾವೇಶದಲ್ಲಿ ಸಂವಿಧಾನ ಪೀಠಿಕೆಯ ಮೆರವಣಿಗೆಯ ನೋಟ

ಪ್ರತಿಭಟನೆಗಳ ಕಿಚ್ಚು

2024ರ ವರ್ಷಾಂತ್ಯಕ್ಕೆ ನಡೆದ ಗುತ್ತಿಗೆದಾರ ಸಚಿನ್‌ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಈ ವರ್ಷವೂ ಸದ್ದು ಮಾಡಿತು. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಜ.4ರಂದು ಬಿಜೆಪಿಯ ಬೃಹತ್ ರ‍್ಯಾಲಿಯೊಂದಿಗೆ ಪ್ರತಿಭಟನೆಯ ಕಿಚ್ಚು ಆರಂಭವಾಯಿತು. ನೆಟೆರೋಗದಿಂದ ಹಾಳಾದ ತೊಗರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಚೇರಿ ಎದುರು ಎತ್ತಿನಬಂಡಿಗಳು ಟ್ರ್ಯಾಕ್ಟರ್‌ಗಳೊಂದಿಗೆ ರೈತರು ಮಾರ್ಚ್‌ 5ರಿಂದ ಅಹೋರಾತ್ರಿ ಧರಣಿ ನಡೆಸಿ ಸರ್ಕಾರವನ್ನು ಎಚ್ಚರಿಸಿದರು. ಇದಲ್ಲದೇ ‘ಒಳ ಮೀಸಲಾತಿ’ ವಿಚಾರ ಧರ್ಮಸ್ಥಳ ಪ್ರಕರಣ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗಳಿಗೂ ಕಲಬುರಗಿ ವೇದಿಕೆಯಾಯಿತು. ಶಹಾಬಾದ್ ತಾಲ್ಲೂಕಿನ ಮುತ್ತಗಾದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಭಗ್ನ ಘಟನೆಯೂ ಪ್ರಖರ ಪ್ರತಿಭಟನೆಗೆ ಕಾರಣವಾಯಿತು.

ಪಥಸಂಚಲನ ವಿವಾದ

‘ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ’ ವಿವಾದ ರಾಜ್ಯಮಟ್ಟದಲ್ಲಿ ವಿವಾದವಾಗಿ ಮಾರ್ಧನಿಸಿತು. ರಾಜಕೀಯ ಆರೋಪ–ಪ್ರತ್ಯಾರೋಪಗಳು ಸೈದ್ಧಾಂತಿಕ ಸಂಘರ್ಷಕ್ಕೂ ಗ್ರಾಸ ಒದಗಿಸಿತು.  ಅ.19ರಂದು ನಿಗದಿಯಾಗಿದ್ದ ಪಥಸಂಚಲನಕ್ಕೆ ತಾಲ್ಲೂಕು ಆಡಳಿತದಿಂದ ಅವಕಾಶ ಸಿಗಲಿಲ್ಲ. ಇದರ ವಿರುದ್ಧ ಆರ್‌ಎಸ್‌ಎಸ್‌ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಹೈಕೋರ್ಟ್‌ ಮೆಟ್ಟಿಲೇರಿದರು. ಕೋರ್ಟ್‌ ಸಮ್ಮುಖದಲ್ಲಿ ಷರತ್ತು ಬದ್ಧ ಅನುಮತಿ ಪಡೆದರು. ನ.16ರಂದು ಸಾವಿರಕ್ಕೂ ಅಧಿಕ ಪೊಲೀಸರ ನಡುವೆ ಜರುಗಿದ ಪಥಸಂಚಲನವು ‘ಸಂಘ’ದ ಶಕ್ತಿ ಅನಾವರಣಕ್ಕೆ ವೇದಿಕೆಯಾಯಿತು. ಇದಕ್ಕೆ ಪರ್ಯಾಯ ಎಂಬಂತೆ ಅದೇ ಚಿತ್ತಾಪುರದಲ್ಲಿ ಡಿ.1ರಂದು ‘ಭೀಮ ನಡೆ’ ಮತ್ತು ಸಂವಿಧಾನ ಸಮಾವೇಶ ಜರುಗಿತು. ಅದು ‘ನೀಲಿ ಶಕ್ತಿ’ ಪ್ರದರ್ಶನ ಹಾಗೂ ‘ಸಂವಿಧಾನ ಶಕ್ತಿ’ ಅನಾವರಣಕ್ಕೆ ಸಾಕ್ಷಿಯಾಯಿತು.

ಅಗಲಿದ ಶರಣಬಸವಪ್ಪ ಅಪ್ಪ

ಆಗಸ್ಟ್‌ 14ರಂದು ರಾತ್ರಿ ಕಲಬುರಗಿಯ ಶರಣಬಸವೇಶ್ವರ ಮಹಾ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅಸ್ತಂಗತರಾದರು. ಅವರ ಅಗಲಿಕೆಯ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಕಲ್ಯಾಣ ನಾಡಿನ ಭಕ್ತರು ಶೋಕ ಸಾಗರದಲ್ಲಿ ಮಿಂದು ಕಣ್ಣೀರಾದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ನೂರಾರು ಗಣ್ಯರು ಲಕ್ಷಾಂತರ ಶ್ರೀಸಾಮಾನ್ಯರು ಅಂತಿಮ ದರ್ಶನ ಪಡೆದರು. ಆ.15ರಂದು ಸೂರ್ಯಾಸ್ತದ ನಿಮಿಷಗಳಲ್ಲಿ ‘ಜ್ಞಾನ ದಾಸೋಹಿ’ ಶರಣಬಸವಪ್ಪ ಅಪ್ಪ ಸಕಲ ಸರ್ಕಾರಿ ‌ಗೌರವ ಹಾಗೂ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ವಿಭೂತಿಯಲ್ಲಿ ಲೀನವಾದರು.

‘ಸಂಭ್ರಮ’ ತಂದ ಉತ್ಸವ

ಮೇಳ ವೈವಿಧ್ಯಮಯವಾದ ‘ಉತ್ಸವ’ಗಳಿಗೂ ಜಿಲ್ಲೆ ಸಾಕ್ಷಿಯಾಯಿತು. ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಫೆ.24ರಿಂದ 10 ದಿನ ರಾಷ್ಟ್ರಮಟ್ಟದ ‘ಸರಸ ಮೇಳ’ ನಡೆಯಿತು. ವಿವಿಧ ರಾಜ್ಯಗಳ ಕಲೆ ಭಕ್ಷ್ಯಗಳು ಸಂಸ್ಕೃತಿ ವಿನಿಮಯವಾಯಿತು. ಕಲಬುರಗಿಯಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ರಜತ ಮಹೋತ್ಸವ ನಿಮಿತ್ತ ಅಯುತ ಚಂಡಿಕಾ ಮಹಾಯಾಗ ಜರುಗಿತು. ಸೇಡಂ ಹೊರವಲಯದ 240 ಎಕರೆಯಲ್ಲಿ ನಿರ್ಮಿಸಿದ ‘ಪ್ರಕೃತಿ ನಗರ’ದಲ್ಲಿ ಜನವರಿ 29ರಿಂದ ಫೆ.6ರ ತನಕ ಭಾರತೀಯ ಸಂಸ್ಕೃತಿ ಉತ್ಸವ ಜರುಗಿತು. ಸನಾತನ ಸಂಸ್ಕೃತಿ ಅನಾವರಣಗೊಳಿಸಿತು. ಈ ಉತ್ಸವಕ್ಕೆ ಪ್ರತಿರೋಧವಾಗಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ ಆಯೋಜಿಸಿ ‘ಸೌಹಾರ್ದ ಅಸ್ಮಿತೆ’ ಸಾರಿತು.

ಹಗಲಲ್ಲೇ ಚಿನ್ನ ದರೋಡೆ

ಈ ವರ್ಷವೂ ಅಪರಾಧ ಕೃತ್ಯಗಳು ಮುಂದುವರಿದವು. ಜುಲೈ 11ರಂದು ಮಧ್ಯಾಹ್ನದ ಹೊತ್ತಲ್ಲೇ ಆಟಿಕೆ ಪಿಸ್ತೂಲ್ ತೋರಿಸಿ ಕಲಬುರಗಿಯಲ್ಲಿ ಚಿನ್ನಾಭರಣ ತಯಾರಿಕಾ ಮಳಿಗೆಯಿಂದ 2.86 ಕೆ.ಜಿ ಚಿನ್ನ ಲೂಟಿಗೈದು ಪರಾರಿಯಾದರು. 20 ದಿನಗಳಲ್ಲೇ ಪ್ರಕರಣ ಭೇದಿಸಿದ ಪೊಲೀಸರು ಎಲ್ಲ ಐವರೂ ಆರೋಪಿಗಳನ್ನು ಬಂಧಿಸಿದರು. ಕಲಬುರಗಿಯ ಪೂಜಾರಿ ವೃತ್ತ ಸಮೀಪದಲ್ಲಿ ಎಸ್‌ಬಿಐ ಎಟಿಎಂ ಯಂತ್ರ ಧ್ವಂಸಗೊಳಿಸಿದ ₹18 ಲಕ್ಷ ಕದ್ದಿದ್ದ ಅಂತರರಾಜ್ಯ ಕಳ್ಳರ ಕಾಲಿಗೆ ಪೊಲೀಸರು ಗುಂಡಿಕ್ಕಿ ಬಂಧಿಸಿದರು. ಸಾಂಪ್ರದಾಯಿಕ ಅಪರಾಧಗಳ ಜೊತೆಗೆ ಈ ವರ್ಷ ಸೈಬರ್‌ ಅಪರಾಧಗಳು ಸದ್ದು ಮಾಡಿದವು. ಸೈಬರ್‌ ವಂಚಕರ ಗಾಳಕ್ಕೆ ‘ಶಿಕ್ಷಿತರ’ ಸಂಪತ್ತು ಕೊಳ್ಳೆ ಹೊಡೆದರು. ಡಿಜಿಟಲ್‌ ಅರೆಸ್ಟ್‌ವೆಂಬ ಅಮೂರ್ತ ‘ಭೂತ’ ಶ್ರೀಮಂತರನ್ನು ಹೈರಾಣಾಗಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.