ADVERTISEMENT

ಈರುಳ್ಳಿ ಹೂವಿಗೆ ದುಂಬಿಗಳ ಕೊರತೆ!

ಕೀಟನಾಶಕ ಬಳಕೆಯಿಂದ ಹೂವಿನತ್ತ ಸುಳಿಯದ ಜೇನು ನೊಣಗಳು

ಜಗನ್ನಾಥ ಡಿ.ಶೇರಿಕಾರ
Published 30 ಮಾರ್ಚ್ 2024, 7:11 IST
Last Updated 30 ಮಾರ್ಚ್ 2024, 7:11 IST
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿಯ ನಾರಾಯಣ ಅವರ ತೋಟದಲ್ಲಿ ಬೆಳೆದ ಈರುಳ್ಳಿ ಬೀಜದ ಬೆಳೆಯನ್ನು  ಬೆಳೆಗಾರರು ಪರಿಶೀಲಿಸಿದರು
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿಯ ನಾರಾಯಣ ಅವರ ತೋಟದಲ್ಲಿ ಬೆಳೆದ ಈರುಳ್ಳಿ ಬೀಜದ ಬೆಳೆಯನ್ನು  ಬೆಳೆಗಾರರು ಪರಿಶೀಲಿಸಿದರು   

ಚಿಂಚೋಳಿ: ತಾಲ್ಲೂಕಿನಲ್ಲಿ ಜೇನು ನೊಣಗಳ ಕೊರತೆ ಈರುಳ್ಳಿ ಬೆಳೆಗಾರರ ​​ನಿದ್ದೆಗೆಡಿಸಿದೆ. 100 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬೀಜ ಬೆಳೆಯುತ್ತಿರುವ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ಹೂವಾಡುವ ಹಂತದಲ್ಲಿ ದುಂಬಿಗಳು, ಜೇನು ನೊಣಗಳು, ಕೀಟಗಳು ಪರಾಗಸ್ಪರ್ಶ ಮಾಡಿದರೆ ಮಾತ್ರ ಹೂವು ಕಾಳು ಕಟ್ಟಲು ಸಾಧ್ಯ. ಆದರೆ ಪ್ರಸಕ್ತ ವರ್ಷ ಜೇನುನೊಣಗಳ ಕೊರತೆ ಹೆಚ್ಚಿದೆ.

ಚಂದ್ರಾಂಪಳ್ಳಿ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ಐನೊಳ್ಳಿ, ದೇಗಲಮಡಿ, ಚಂದ್ರಾಂಪಳ್ಳಿ, ಪಟಪಳ್ಳಿ, ಫತೇಪುರ, ಕೊಳ್ಳೂರು ಹಾಗೂ ಸಾಲೇಬೀರನಹಳ್ಳಿ, ಹಸರಗುಂಡಗಿ, ಯಂಪಳ್ಳಿ, ರಟಕಲ್, ಮುಕರಂಬಾ, ಅಣವಾರ, ದಸ್ತಾಪುರ, ಚಿಮ್ಮನಚೋಡ ಮೊದಲಾದ ಕಡೆಗಳಲ್ಲಿ ಈರುಳ್ಳಿ ಹಾಗೂ ಚೆಂಡು ಹೂವಿನ ಬೇಸಾಯ ನಡೆಯುತ್ತಿದೆ. ಆದರೆ, ರೈತರು ಕೀಟನಾಶಕ ಬಳಸುವುದರಿಂದ ವಾಸನೆಗೆ ಹೆದರಿ ಜೇನುನೊಣಗಳು ಹೂವಿನತ್ತ ಬರುತ್ತಿಲ್ಲ ಎನ್ನುತ್ತಾರೆ ಚಂದ್ರಾಂಪಳ್ಳಿಯ ರೈತ ನಾರಾಯಣ ಮತ್ತು ವೀರಶೆಟ್ಟಿ.

ADVERTISEMENT

ಕಾಳು ಕಟ್ಟಬೇಕಾದ ಬೆಳೆ ಪರಾಗಸ್ಪರ್ಶದ ಕೊರತೆಯಿಂದ ಜೊಳ್ಳು ಕಾಳುಗಳಾಗುತ್ತಿವೆ. ತಾಲ್ಲೂಕಿನ ಈರುಳ್ಳಿ ಬೀಜಕ್ಕೆ ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರಿದೆ. ಈರುಳ್ಳಿ ಬೀಜ ಕ್ವಿಂಟಲ್‌ಗೆ ₹30 ರಿಂದ 40ಸಾವಿರ ದರದಲ್ಲಿ ಮಾರಾಟವಾಗುತ್ತದೆ. ಪ್ರಸಕ್ತ ವರ್ಷ ಆಲಿಕಲ್ಲು ಮಳೆ ಸುರಿಯದೇ ಹೋದರೆ ಉತ್ತಮ ಬೆಳೆ ಬರುವ ನಿರೀಕ್ಷೆ ಬೆಳೆಗಾರರಲ್ಲಿದೆ. ಆದರೆ, ಹೂವು ಕಾಳುಕಟ್ಟಲು ದುಂಬಿಗಳ ಕೊರತೆ ಕಾಡುತ್ತಿದೆ. ಇದರಿಂದ ರೈತರು ನಿರೀಕ್ಷಿತ ಇಳುವರಿ ಪಡೆಯುವ ಸಾಧ್ಯತೆ ಕಡಿಮೆ ಎಂಬುದು ಬೆಳೆಗಾರರ ​ಮಾತಾಗಿದೆ.

‘ರೈತರು ಈರುಳ್ಳಿ ಹೂವಾಡುವ ಸಂದರ್ಭದಲ್ಲಿ ಕೀಟನಾಶಕ ಸಿಂಪಡಣೆ ಮಾಡಬಾರದು. ಕೀಟನಾಶಕ ಸಿಂಪಡಿಸಿದರೆ ದುಂಬಿಗಳು ಬರುವ ಸಾಧ್ಯತೆ ಕಡಿಮೆ’ ಎಂದು ದೇಗಲಮಡಿಯ ಬೆಳೆಗಾರ ಶಾಮರಾವ್ ಗೌಡನೂರು ಹೇಳಿದರು.

‘ಈರುಳ್ಳಿ ಹೂವಾಡುವ ಹಂತದಲ್ಲಿ ನುಸಿ ನಿವಾರಕಗಳಾದ ಸೈಪರ್ ಮೆತ್ರಿನ್, ಪ್ಯಾರಾ ಮೆತ್ರಿನ್ ಸಿಂಪಡಣೆ ಮಾಡಬಾರದು. ಇದರ ಸಿಂಪಡಣೆಯಿಂದ ದುಂಬಿಗಳು ದೂರವಾಗುವ ಸಾಧ್ಯತೆಯಿದೆ. ಕಬ್ಬು ಬೆಳೆಯ ಕೊಯ್ಲಿನ ನಂತರ ಸುಡುವ ಪದ್ಧತಿ ಅಪಾಯಕಾರಿ. ಇದರಿಂದ ಜೇನುನೊಣಗಳು ವಲಸೆ ಹೋಗಬಹುದು ಎನ್ನುತ್ತಾರೆ’ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞ ಡಾ.ಜಹೀರ ಅಹಮದ್.

ಭೀಮರೆಡ್ಡಿ ಯಂಗಮನೋರ್ ಪ್ರಗತಿಪರ ರೈತ ಕೊಳ್ಳೂರು
ಡಾ.ಜಹೀರ ಅಹಮದ್ ಸಸ್ಯರೋಗ ತಜ್ಞ

ಪ್ರಸಕ್ತ ವರ್ಷ ಕೊಲ್ಲೂರು ಚಂದ್ರಂಪಳ್ಳಿ ಸುತ್ತಲೂ ಈರುಳ್ಳಿ ಹೂವಿಗೆ ಜೇನು ನೋಣಗಳ ಆಕರ್ಷಣೆ ಕಡಿಮೆಯಾಗಿದೆ. ಇದರಿಂದ ಇಳುವರಿ ಮೇಲೆ ಪರಿಣಾಮ ಬೀರಲಿದೆ

- ಭೀಮರೆಡ್ಡಿ ಯಂಗಮನೋರ್ ಪ್ರಗತಿಪರ ರೈತ ಕೊಳ್ಳೂರು

ದುಂಬಿಗಳನ್ನು ಆಕರ್ಷಿಸಲು ಯಾವುದೇ ರಾಸಾಯನಿಕವಿಲ್ಲ‌. ಆದರೆ ನುಗ್ಗೆ ಕುಂಬಳಕಾಯಿ ಹೀರೇಕಾಯಿ ಮತ್ತು ಹಾಗಲಕಾಯಿ ಬೇಸಾಯದಿಂದ ಆಕರ್ಷಿಸಬಹದು. ಹೊಲದಲ್ಲಿ ಅಲ್ಲಲ್ಲಿ ಬೆಲ್ಲದ ರಾಡಿ ಚೆಲ್ಲಬಹುದು – ಡಾ.ಜಹೀರ ಅಹಮದ್ ಸಸ್ಯರೋಗ ತಜ್ಞ ಕೆವಿಕೆ ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.